ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ 7ನೇ ರಾಜ್ಯ ವೇತನ ಆಯೋಗದ ವರದಿ (7th Pay Commission) ಸಿದ್ಧಗೊಂಡಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಆಯೋಗವು ಶನಿವಾರ ವರದಿ ಸಲ್ಲಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ 7ನೇ ರಾಜ್ಯ ವೇತನ ಆಯೋಗದ ಅವಧಿ ಶುಕ್ರವಾರಕ್ಕೆ (ಮಾ.15) ಮುಗಿದಿರುವ ಹಿನ್ನೆಲೆಯಲ್ಲಿ ಮಾ.16ರಂದು ರಾಜ್ಯ ಸರ್ಕಾರಕ್ಕೆ ವೇತನ ಆಯೋಗವು ವರದಿ ಸಲ್ಲಿಸಲಿದೆ ಎನ್ನಲಾಗುತ್ತಿದೆ.
ಮೂಲಗಳ ಪ್ರಕಾರ 7ನೇ ರಾಜ್ಯ ವೇತನ ಆಯೋಗದ ವರದಿ ಸಿದ್ಧಗೊಂಡಿದ್ದರೂ ಸ್ವೀಕರಿಸಲು ರಾಜ್ಯ ಸರ್ಕಾರವೇ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಸುಮಾರು 52 ಸಾವಿರ ಕೋಟಿ ರೂ. ಬಳಕೆ ಸೇರಿದಂತೆ ಒಟ್ಟು ಯೋಜನಾ ವೆಚ್ಚಕ್ಕೆ 1.20 ಲಕ್ಷ ಕೋಟಿ ರೂ.ಗಳನ್ನು ನಿಗದಿ ಮಾಡಿರುವ ಸರ್ಕಾರಕ್ಕೆ ರಾಜ್ಯಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಹಣಕಾಸಿನ ಕೊರತೆ ಎದುರಾಗಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ವರದಿಯನ್ನು ಸ್ವೀಕರಿಸುವ ಬದಲು ಮತ್ತಷ್ಟು ಕಾಲ ಆಯೋಗದ ಅವಧಿ ವಿಸ್ತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Job Alert: ಗುಡ್‌ನ್ಯೂಸ್; 247 ಪಿಡಿಒ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟ; ಇಲ್ಲಿದೆ ವಿವರ
ವೇತನ ಆಯೋಗದ ವರದಿಯಲ್ಲಿ ಸರ್ಕಾರಿ ನೌಕರರಿಗೆ ಶೇ.30 ರಷ್ಟು ವೇತನ ಹೆಚ್ಚು (salary Hike) ಮಾಡಬೇಕು ಎಂಬ ಶಿಫಾರಸುಗಳಿವೆ ಎನ್ನಲಾಗಿದ್ದು, ಈಗಾಗಲೇ ಮಧ್ಯಂತರ ಪರಿಹಾರವಾಗಿ ಶೇ.17ರಷ್ಟು ವೇತನ ಹೆಚ್ಚಳವನ್ನು ಈ ಹಿಂದಿನ ಸರ್ಕಾರ ಜಾರಿ ಮಾಡಿತ್ತು. ಇನ್ನು ಚುನಾವಣಾ ಪ್ರಣಾಳಿಕೆಯಲ್ಲಿ 7ನೇ ವೇತನ ಆಯೋಗದ ವರದಿ ಜಾರಿ ಬಗ್ಗೆ ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿಗಳಿಗೆ ಆದ್ಯತೆ ನೀಡಿ, ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಗಮನ ಹರಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಶನಿವಾರ ಮಧ್ಯಾಹ್ನ ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಅಷ್ಟರೊಳಗಾಗಿ ವರದಿ ಸ್ವೀಕರಿಸಬೇಕು, ಇಲ್ಲವೇ ಆಯೋಗದ ಅವಧಿಯನ್ನು ವಿಸ್ತರಿಸಬೇಕಿದೆ. ವೇಳಾಪಟ್ಟಿ ಪ್ರಕಟಗೊಂಡ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಯಾಗಲಿದ್ದು, ಸರ್ಕಾರವು ಯಾವುದೇ ಹೊಸ ಯೋಜನೆ ಅಥವಾ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ವೇತನ ಪರಿಷ್ಕರಣೆಯ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರು ಸಹಜವಾಗಿಯೇ ಗೊಂದಲಕ್ಕೆ ಒಳಗಾಗಿದ್ದಾರೆ.
ಇದನ್ನೂ ಓದಿ | Job Alert: ಪದವೀಧರರಿಗೆ ಗುಡ್‌ನ್ಯೂಸ್; ಕೆಪಿಎಸ್‌ಸಿಯಿಂದ 50 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
2 ಬಾರಿ ಆಯೋಗದ ಅವಧಿ ವಿಸ್ತರಣೆ
ಸುಧಾಕರ್ ರಾವ್ ನೇತೃತ್ವದಲ್ಲಿ ರಾಜ್ಯ ಸರ್ಕಾರ 2022ರ ನ.19 ರಂದು ಆಯೋಗವನ್ನು ರಚಿಸಿ ಆರು ತಿಂಗಳಲ್ಲಿ ವರದಿ ನೀಡುವ ಗಡುವು ನೀಡಿತ್ತು. ಆನಂತರ 2023 ರ ಮೇ 15 ರಂದು ಮತ್ತೆ ಆರು ತಿಂಗಳ ಅವಧಿಗೆ ಆಯೋಗದ ಅವಧಿಯನ್ನು ವಿಸ್ತರಿಸಲಾಗಿತ್ತು. ಬಳಿಕ 2023 ರ ನವೆಂಬರ್ 6 ರಂದು ಆಯೋಗದ ಅವಧಿಯನ್ನು ಮಾ.15ರನವರೆಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು.
ನೌಕರರ ಬೇಡಿಕೆಗಳೇನು?
ಶೇ. 40ರಷ್ಟು ಹೆಚ್ಚಳದೊಂದಿಗೆ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸುವುದು, ರಾಜ್ಯದ ಎಲ್ಲಾ ನೌಕರರಿಗೂ PFRDA ಕಾಯ್ದೆ /NPS ಪದ್ದತಿ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆ (OPS) ಮರುಸ್ಥಾಪಿಸುವುದು, ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡುವುದು, ಗುತ್ತಿಗೆ/ಹೊರಗುತ್ತಿಗೆ ಅರೆಕಾಲಿಕ ನೇಮಕಾತಿಯಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು, ಇವರ ವೇತನವನ್ನು ಸರ್ಕಾರದಿಂದ ನೇರವಾಗಿ ಖಾತೆಗೆ ಜಮಾ ಮಾಡುವುದು, ಇವರುಗಳನ್ನು ಎಲ್ಲಾ ನೇರ ನೇಮಕಾತಿಗಳಲ್ಲಿ ಕಾಯಂಗೊಳಿಸುವುದು. ಹೊರಗುತ್ತಿಗೆ ನೇಮಕಾತಿಯನ್ನು ಕೈಬಿಟ್ಟು ಕಾಯಂ ನೇಮಕಾತಿ ಮಾಡಿಕೊಳ್ಳುವುದು ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಗಳಾಗಿವೆ.