Site icon Vistara News

7th Pay Commission: 7ನೇ ರಾಜ್ಯ ವೇತನ ಆಯೋಗದ ಅವಧಿ ಮತ್ತೆ ವಿಸ್ತರಣೆ

7th pay commission meets CM Siddaramaiah

ಬೆಂಗಳೂರು: 7ನೇ ರಾಜ್ಯ ವೇತನ ಆಯೋಗದ (7th Pay Commission) ಅವಧಿಯನ್ನು ಮತ್ತೆ ವಿಸ್ತರಿಸಲಾಗಿದೆ. ನವೆಂಬರ್ 18ಕ್ಕೆ ಆಯೋಗದ ಅವಧಿ ಮುಗಿಯಲಿತ್ತು. ಇದೀಗ 2024ರ ಮಾರ್ಚ್ 15 ವರೆಗೆ ಅವಧಿ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಕೆ. ಉಮಾ ಅವರು ಆದೇಶ ಹೊರಡಿಸಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ ಶ್ರೇಣಿಗಳನ್ನು ಪರಿಷ್ಕರಿಸಲು ಮತ್ತು ನೂತನ ವೇತನ ರಚನೆ ಇತ್ಯಾದಿಗಳನ್ನು ರೂಪಿಸಲು 2022 ನ.11ರಂದು 7ನೇ ರಾಜ್ಯ ವೇತನ ಆಯೋಗ ರಚಿಸಲಾಗಿತ್ತು. ಪ್ರಸ್ತುತ ಆಯೋಗದ ಕಾಲಾವಧಿಯು ನ.18ಕ್ಕೆ ಕೊನೆಗೊಳ್ಳುತ್ತಿದೆ. ಆದರೆ, ವೇತನ ಆಯೋಗ ತನ್ನ ಕಾರ್ಯ ಕಲಾಪ ಪೂರ್ಣಗೊಳಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲು ಅನುಕೂಲವಾಗಲು ಆಯೋಗದ ಕಾಲಾವಧಿಯನ್ನು 2024ರ ಮಾರ್ಚ್‌ 15ರವರಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

2022ರಲ್ಲಿ ರಚನೆಯಾಗಿದ್ದ ಆಯೋಗ

2022ರ ನವೆಂಬರ್‌ 19ರಂದು ಆಗಿನ ಸಿಎಂ ಬಸವರಾಜ ಬೊಮ್ಮಾಯಿ (Former CM Basavaraj Bommai) ಅವರು 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿ ಆದೇಶಿಸಿದ್ದರು. ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಿ 6 ತಿಂಗಳ ಕಾಲಮಿತಿಯಲ್ಲಿ ವರದಿಯನ್ನು ಸಲ್ಲಿಸಲು, ತ್ರಿಸದಸ್ಯ ಆಯೋಗವನ್ನು ಅವರು ರಚಿಸಿದ್ದರು.

ಈ 7ನೇ ರಾಜ್ಯ ವೇತನ ಆಯೋಗಕ್ಕೆ ಸುಧಾಕರ್ ರಾವ್ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ಪಿ. ಬಿ. ರಾಮಮೂರ್ತಿ, ಶ್ರೀಕಾಂತ್ ಬಿ. ವನಹಳ್ಳಿ, ಕಾರ್ಯದರ್ಶಿಯಾಗಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ನೇಮಕವಾಗಿದ್ದರು. ಈ ಹಿಂದಿನ ಆದೇಶದನ್ವಯ ಆಯೋಗವು 2023ರ ಮೇ 19ಕ್ಕೆ ಕ್ಕೆ ವರದಿ ನೀಡಬೇಕಿತ್ತು. ಆದರೆ, ಬಳಿಕ ವಿಧಾನಸಭಾ ಚುನಾವಣೆ ಬಂದಿತ್ತು. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೇ 19ಕ್ಕೆ ವರದಿ ನೀಡಬೇಕಿದ್ದ ಕಾಲಾವಧಿಯನ್ನು ಮತ್ತೆ 6 ತಿಂಗಳ ಅವಧಿಗೆ ವಿಸ್ತರಣೆ ಮಾಡಿ ಆದೇಶಿಸಿತ್ತು. ಅಂತಿಮ ವರದಿ ಸಿದ್ಧವಾಗದ ಹಿನ್ನೆಲೆಯಲ್ಲಿ ಇದೀಗ ಮತ್ತೊಮ್ಮೆ ಆಯೋಗದ ಅವಧಿ ವಿಸ್ತರಿಸಲಾಗಿದೆ.

7ನೇ ವೇತನ ಆಯೋಗದ ಕಾರ್ಯಚಟುವಟಿಕೆ ಏನು?

ಈ 7ನೇ ವೇತನ ಆಯೋಗವು ರಾಜ್ಯ ಸರ್ಕಾರಿ ನೌಕರರ (ಯುಜಿಸಿ/ ಎಐಸಿಟಿಇ/ ಐಸಿಎಆರ್/ ಎನ್‌ಜೆಪಿಸಿ ವೇತನ ಶ್ರೇಣಿ ಹೊಂದಿರುವವರನ್ನು ಹೊರತುಪಡಿಸಿ), ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳ ಬೋಧಕೇತರ ಸಿಬ್ಬಂದಿಗೆ ಮರಣ ಹಾಗೂ ನಿವೃತ್ತಿ ಉಪದಾನ ಸೌಲಭ್ಯಗಳನ್ನೊಳಗೊಂಡಂತೆ ಲಭ್ಯವಿರುವ ಎಲ್ಲ ಕ್ರೋಢೀಕೃತ ಸೌಲಭ್ಯಗಳನ್ನು ಗಣನೆಗೆ ತೆಗೆದುಕೊಂಡು, ಈ ಸಿಬ್ಬಂದಿ ಪ್ರಸ್ತುತ ವೇತನ ರಚನೆಯನ್ನು ಪರಿಶೀಲಿಸುವುದು ಹಾಗೂ ಅಪೇಕ್ಷಣೀಯವಾದ ಹಾಗೂ ಕಾರ್ಯಸಾಧ್ಯವಿರುವ ನೂತನ ವೇತನ ರಚನೆಯನ್ನು ರೂಪಿಸಬೇಕು ಎಂಬುದಾಗಿ ರಾಜ್ಯ ಸರ್ಕಾರವು ಕಾರ್ಯಚಟುವಟಿಕೆಯನ್ನು ಸೂಚಿಸಿತ್ತು.

ಇದನ್ನೂ ಓದಿ | BS Yediyurappa: ಕೈಗಾರಿಕೋದ್ಯಮಿಗಳಿಗೆ ಅನ್ಯಾಯ; ಸರ್ಕಾರದ ಗಮನ ಸೆಳೆಯುವಂತೆ ಬಿಎಸ್‌ವೈಗೆ ಮನವಿ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವೃಂದದ ಹುದ್ದೆಗಳನ್ನು ಸಮೀಕರಿಸಿ ಕೇಂದ್ರ ಸರ್ಕಾರದ ವೇತನ ರಚನೆಯನ್ನು ಅಳವಡಿಸಿಕೊಳ್ಳುವ ಕಾರ್ಯಸಾಧ್ಯತೆಗಳನ್ನು ಪರಿಶೀಲನೆ ಮಾಡಬೇಕು. ರಾಜ್ಯ ಸರ್ಕಾರವು ಅಳವಡಿಸಿಕೊಳ್ಳಬಹುದಾದ ತುಟ್ಟಿಭತ್ಯೆಯ ಸೂತ್ರವನ್ನು ನಿರ್ಧರಿಸಿ ಪರಿಶೀಲಿಸಬೇಕು. ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆ, ವಿಶೇಷ ಭತ್ಯೆಗಳು ಇತ್ಯಾದಿ ಮತ್ತು ರಜೆ ಪ್ರಯಾಣ ರಿಯಾಯಿತಿ ಹಾಗೂ ವೈದ್ಯಕೀಯ ಮರುಪಾವತಿ ಸೌಲಭ್ಯಗಳನ್ನೊಳಗೊಂಡಂತಹ ವಿವಿಧ ಭತ್ಯೆಗಳನ್ನು ಪರಿಶೀಲಿಸುವುದರ ಜತೆಗೆ ಅಪೇಕ್ಷಣೀಯವಾದ ಹಾಗೂ ಕಾರ್ಯಸಾಧ್ಯವಿರುವ ಬದಲಾವಣೆಗಳನ್ನು 7ನೇ ವೇತನ ಆಯೋಗವು ಸಲಹೆ ಮಾಡಬೇಕಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version