ಬೆಳಗಾವಿ: ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣದ ಬಂಧಿತ 8 ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಸ ನೀಡಿದೆ. ವಂಟಮೂರಿ ಗ್ರಾಮದಲ್ಲಿ ನಡೆದಿದ್ದ ಪ್ರಕರಣದ (Assault Case) ವಿಚಾರಣೆ ನಡೆಸಿರುವ 4ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶೆ ತೇಜಶ್ರೀ ಅವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಸೂಚಿಸಿದ್ದಾರೆ.
ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಸಂಬಂಧ 12 ಜನರ ವಿರುದ್ಧ ಕಾಕತಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹಲ್ಲೆಗೊಳಗಾದ ಕಮಲವ್ವ ಗಡ್ಕರಿ ನೀಡಿದ ದೂರು ಎಫ್ಐಆರ್ ದಾಖಲಾಗಿದೆ. ಯುವತಿಯ ತಂದೆ ಬಸಪ್ಪ ನಾಯಕ್, ಚಿಕ್ಕಪ್ಪರಾದ ರಾಜು ನಾಯಕ್, ಯಲ್ಲಪ್ಪ ನಾಯಕ್, ಯುವತಿ ಸಹೋದರರಾದ ಕೆಂಪಣ್ಣ, ಲಕ್ಕಪ್ಪ, ತಾಯಿ ಪಾರ್ವತಿ ಮತ್ತು ಇಬ್ಬರು ಬಾಲಾಪರಾಧಿ ಸೇರಿ 12 ಜನರ ವಿರುದ್ಧ ಕೇಸ್ ದಾಖಲಾಗಿದ್ದು, ಈಗಾಗಲೇ ಯುವತಿ ತಂದೆ ತಾಯಿ ಸೇರಿ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಮಹಿಳೆಯನ್ನು ಬೆತ್ತಲೆಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ (Assault Case) ನಡೆಸಿದ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ವಂಟಮೂರಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿತ್ತು. ಯುವಕನೊಬ್ಬ ಪ್ರೀತಿಸಿದ ಯುವತಿ ಜತೆಗೆ ಮನೆ ಬಿಟ್ಟು ಓಡಿ ಹೋಗಿದ್ದ. ಇದರಿಂದ ಆಕ್ರೋಶಗೊಂಡು ಯುವಕನ ತಾಯಿಯನ್ನೇ ಬೆತ್ತಲೆಗೊಳಿಸಿದ ದುರುಳರು ದುರ್ವರ್ತನೆ ತೋರಿದ್ದರು.
ಕಮಲವ್ವ ಹಲ್ಲೆಗೊಳಗಾದವರು. ದುಂಡಪ್ಪ ಅಶೋಕ ನಾಯಕ್ ಎಂಬಾತ ಪ್ರಿಯಾಂಕಾ ಬಸಪ್ಪ ನಾಯಕ್ ಎಂಬಾಕೆಯನ್ನು ಪ್ರೀತಿಸಿದ್ದ. ಆದರೆ ಇದಕ್ಕೆ ಪ್ರಿಯಾಂಕಾ ಕುಟುಂಬಸ್ಥರ ವಿರೋಧ ಇತ್ತು. ಪ್ರಿಯಾಂಕಾ ಕುಟುಂಬಸ್ಥರು ಸೋಮವಾರ ಯಾದಿ ಮೇ ಶಾದಿ ಮಾಡಲು ನಿರ್ಧರಿಸಿದ್ದರು. ಈ ವಿಚಾರ ತಿಳಿದು ಮಧ್ಯರಾತ್ರಿಯೇ ದುಂಡಪ್ಪ ಪ್ರಿಯಾಂಕಾಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದ.
ಇದನ್ನೂ ಓದಿ | Drugs Siezed : ಹೊಸ ವರ್ಷಕ್ಕೆ ನಶೆಯೇರಿಸಲು ರೆಡಿ; 21 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ!
ಈ ವಿಷಯ ತಿಳಿಯುತ್ತಿದ್ದಂತೆ ಪ್ರಿಯಾಂಕಾರ ಕುಟುಂಬಸ್ಥರೊಳಗೆ ಇದ್ದ ರಾಕ್ಷಸತ್ವ ಹೊರಬಂದಿತ್ತು. ದುಂಡಪ್ಪ ತಮ್ಮ ಮಗಳನ್ನು ರಾತ್ರೋರಾತ್ರಿ ಕರೆದುಕೊಂಡು ಹೋಗಿದ್ದಾನೆ ಎಂದು ಆಕ್ರೋಶಗೊಂಡಿದ್ದರು. ಹೀಗಾಗಿ ಯುವತಿ ಮನೆಯವರು ಮಧ್ಯರಾತ್ರಿ ದುಂಡಪ್ಪನ ಮನೆಗೆ ನುಗ್ಗಿ, ಕಲ್ಲು ತೂರಾಟ ಮಾಡಿದ್ದಾರೆ. ಇಡೀ ಮನೆಯನ್ನೇ ಧ್ವಂಸ ಮಾಡಿ ಕ್ರೂರವಾಗಿ ವರ್ತಿಸಿದ್ದರು.
ಇತ್ತ ಮನೆಯೊಳಗೆ ಮಲಗಿದ್ದ ದುಂಡಪ್ಪನ ತಾಯಿ ಕಮಲವ್ವಳನ್ನು ಹೊರಗೆ ಎಳೆದುಕೊಂಡು ಬಂದು ಹೊಡೆದಿದ್ದರು. ಅಷ್ಟೆಕ್ಕೆ ಸುಮ್ಮನಾಗದೇ ಆಕೆಯ ಬಟ್ಟೆ ಬಿಚ್ಚಿಸಿ, ಮೆರವಣಿಗೆ ನಡೆಸಿದ್ದಾರೆ. ಬಳಿಕ ಕಂಬಕ್ಕೆ ಕಟ್ಟಿ ಹಾಕಿ ಮನಬಂದಂತೆ ಹಲ್ಲೆ ಮಾಡಿದ್ದರು. ಮಹಿಳೆಯರು ಸೇರಿ ಒಂಬತ್ತು ಮಂದಿ ಕಮಲ್ವಳ ಮೇಲೆ ಹಲ್ಲೆ ನಡೆಸಿದ್ದರು.
ಇದನ್ನೂ ಓದಿ | Murder case: ಪ್ರೀತಿ ಕೊಂದ ಕೊಲೆಗಾರ! ಅವಳ ಮೋಹಿಸಿ ತನ್ನವಳಿಗೆ ವಿಷದ ಇಂಜೆಕ್ಷನ್ ಕೊಟ್ಟ
ಗೃಹಸಚಿವರೊಂದಿಗೆ ದುಃಖ ತೊಡಿಕೊಂಡ ಸಂತ್ರಸ್ತೆ
ಜಿಲ್ಲಾಸ್ಪತ್ರೆಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ ಭೇಟಿ ನೀಡಿ, ಹಲ್ಲೆಗೊಳಗಾದ ಸಂತ್ರಸ್ತೆಯಿಂದ ಘಟನೆಯ ಕುರಿತು ಮಾಹಿತಿ ಪಡೆದಿದ್ದಾರೆ. ಗೃಹ ಸಚಿವರಿಗೆ ನಗರ ಪೊಲೀಸ್ ಆಯುಕ್ತ ಸಿದ್ದರಾಮಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸಾಥ್ ನೀಡಿದರು. ಬಳಿಕ ಮಾತಾನಾಡಿದ ಡಾ. ಜಿ. ಪರಮೇಶ್ವರ್, ದುಂಡಪ್ಪ ಅಶೋಕ (24) ಎಂಬಾತ ತಾನು ಪ್ರೀತಿಸುತ್ತಿದ್ದ ಹುಡುಗಿಯೊಂದಿಗೆ ಮನೆ ಬಿಟ್ಟು ಹೋಗಿದ್ದಾನೆ. ಇದರಿಂದ ಆಕ್ರೋಶಗೊಂಡ ಹುಡುಗಿ ಮನೆಯವರು ಯುವಕನ ತಾಯಿ ಕಮಲವ್ವ ಗಡ್ಕರಿ ಮೇಲೆ ಹಲ್ಲೆ ಮಾಡಿದ್ದಾರೆ. ಸುಮಾರು ಹತ್ತಕ್ಕೂ ಹೆಚ್ಚು ಮಂದಿ ಬೆತ್ತಲೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ