Site icon Vistara News

Padma Awards 2023: ನಾಡಿನ ಎಂಟು ಸಾಧಕರಿಗೆ ಪದ್ಮ ಪ್ರಶಸ್ತಿಯ ಗರಿ, ಇಲ್ಲಿದೆ ಅವರ ಸಾಧನೆಗಾಥೆ

Padma Awards For Karnataka

ಬೆಂಗಳೂರು/ನವದೆಹಲಿ: ಕೇಂದ್ರ ಸರ್ಕಾರವು 2023ನೇ ಸಾಲಿನ ಪದ್ಮ ಪ್ರಶಸ್ತಿ (Padma Awards 2023) ಘೋಷಿಸಿದ್ದು, ಕರ್ನಾಟಕದ ಎಂಟು ಸಾಧಕರಿಗೆ ಪ್ರಶಸ್ತಿ ನೀಡಲಾಗಿದೆ. ರಾಣಿ ಮಾಚಯ್ಯ (ಕಲೆ), ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ (ಕಲೆ), ಖಾದರ್‌ ವಲ್ಲಿ ದುಡೇಕುಲ (ವಿಜ್ಞಾನ ಮತ್ತು ತಂತ್ರಜ್ಞಾನ), ಶಾ ರಶೀದ್‌ ಅಹ್ಮದ್‌ ಖಾದ್ರಿ (ಕಲೆ) ಹಾಗೂ ಎಸ್‌.ಸುಬ್ಬರಾಮನ್‌ (ಪುರಾತತ್ವ ಸಂಶೋಧನೆ) ಪದ್ಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ.

ಹಾಗೆಯೇ, ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ, ಸುಧಾಮೂರ್ತಿ ಹಾಗೂ ಎಸ್‌.ಎಲ್‌.ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಲಾಗಿದೆ. ಈ ಮೂವರೂ ಸಾಧಕರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಎಸ್‌.ಎಂ.ಕೃಷ್ಣ

ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರು ನಾಡು ಕಂಡ ಅಪರೂಪದ ಹಾಗೂ ಮುತ್ಸದ್ದಿ ರಾಜಕಾರಣಿಯಾಗಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವರಾಗಿ, ಸ್ಪೀಕರ್‌ ಆಗಿ, ಸಂಸದರಾಗಿ, ವಿಧಾನಪರಿಷತ್‌ ಸದಸ್ಯರಾಗಿ, ಮಹಾರಾಷ್ಟ್ರ ರಾಜ್ಯಪಾಲರಾಗಿ ಹಲವು ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜಕೀಯ ಜೀವನದ ಬಹುಕಾಲವನ್ನು ಕಾಂಗ್ರೆಸ್‌ನಲ್ಲಿಯೇ ಕಳೆದ ಅವರು ಬಳಿಕ ಬಿಜೆಪಿ ಸೇರಿದರು.

ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮೂರು ವರ್ಷದ ಬರಗಾಲದ ಮಧ್ಯೆಯೂ ಉತ್ತಮ ಆಡಳಿತ ನೀಡಿದ ಇವರು ಬೆಂಗಳೂರಿಗೆ ಐಟಿ ಸಿಟಿ ಎಂಬ ಹೆಸರು ಬರಲು ಪ್ರಮುಖ ಕಾರಣರಾಗಿದ್ದಾರೆ. ಕೆರೆಗಳ ಪುನಶ್ಚೇತನಕ್ಕಾಗಿ ಕಾಯಕ ಕೆರೆ, ಬಡವರ ಆರೋಗ್ಯಕ್ಕಾಗಿ ಯಶಸ್ವಿನಿ ಆರೋಗ್ಯ‌ ವಿಮಾ ಯೋಜನೆ, ಗ್ರಾಮಗಳಲ್ಲಿ ಸ್ತ್ರೀ ಶಕ್ತಿ ಸಂಘಗಳ ಸ್ಥಾಪನೆ, ರೈತ ಸಂಪರ್ಕ ಕೇಂದ್ರ ಸ್ಥಾಪನೆ ಸೇರಿ ಹಲವು ದಿಸೆಯಲ್ಲಿ ಸಾರ್ವಜನಿಕರ ಏಳಿಗೆಗೆ ಕಾರಣರಾಗಿದ್ದಾರೆ. ಇವರ ಸಾಧನೆ, ಸೇವೆ ಪರಿಗಣಿಸಿ ಕೇಂದ್ರ ಸರ್ಕಾರವು ಪದ್ಮವಿಭೂಷಣ ಪ್ರಶಸ್ತಿ ನೀಡಿದೆ.

ಎಸ್‌.ಎಲ್‌.ಭೈರಪ್ಪ

ದೇಶ ಕಂಡ ಅಗ್ರ ಕಾದಂಬರಿಕಾರರಲ್ಲಿ ಒಬ್ಬರಾದ ಎಸ್‌.ಎಲ್‌.ಭೈರಪ್ಪ ಅವರು ಹಾಸನ ಜಿಲ್ಲೆ ಸಂತೇಶಿವರದವರು. ಬಡತನದಲ್ಲಿ ಬೆಳೆದು, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ಬಳಿಕ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಭೈರಪ್ಪ ಅವರ ಕೃತಿಗಳು ಹತ್ತಾರು ಭಾಷೆಗಳಿಗೆ ಅನುವಾದಗೊಂಡಿವೆ. ಹಾಗೆಯೇ, ಅವರು ಶಿಕ್ಷಣ ತಜ್ಞರೂ ಆಗಿದ್ದಾರೆ.

ಪರ್ವ, ಗೃಹಭಂಗ, ತಬ್ಬಲಿಯು ನೀನಾದೆ ಮಗನೆ, ದಾಟು, ಧರ್ಮಶ್ರೀ ಸೇರಿ ಹಲವು ಕೃತಿಗಳು ಬೇರೆ ಬೇರೆ ಭಾಷೆಗಳಿಗೆ ಅನುವಾದಗೊಂಡಿವೆ. ಇವರು ರಚಿಸಿದ ಮಂದ್ರ ಕೃತಿಗೆ‌ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ ದೊರೆತಿದೆ. ಅಲ್ಲದೆ, ಕನ್ನಡಕ್ಕೆ ಸರಸ್ವತಿ ಸಮ್ಮಾನ್‌ ತಂದು ಕೊಟ್ಟ ಮೊದಲ ಕನ್ನಡಿಗ ಎಂಬ ಖ್ಯಾತಿ ಇವರದ್ದಾಗಿದೆ. ಎಸ್‌.ಎಲ್‌.ಭೈರಪ್ಪ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಕೇಳಿಬರುತ್ತಿರುವ ಮಧ್ಯೆಯೇ ಕೇಂದ್ರ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ನೀಡಿದೆ.

ಸುಧಾಮೂರ್ತಿ

ಇನ್ಫೋಸಿಸ್‌ ಸಂಸ್ಥಾಪಕ ನಾರಾಯಣಮೂರ್ತಿ ಅವರ ಪತ್ನಿಯಾದ ಸುಧಾಮೂರ್ತಿ ಅವರು ಇನ್ಫೋಸಿಸ್‌ ಸ್ಥಾಪನೆಗೆ ನೆರವು ನೀಡುವ ಜತೆಗೆ ಕರ್ನಾಟಕದ ಬಡವರ ಏಳಿಗೆಗೆ ಅಪರಿಮಿತವಾಗಿ ಶ್ರಮಿಸಿದ್ದಾರೆ. ಇನ್ಫೋಸಿಸ್‌ ಪ್ರತಿಷ್ಠಾನದ ಮೂಲಕ ಸಮಾಜಸೇವೆ ಮಾಡಿದ್ದಾರೆ. ಗ್ರಾಮೀಣ ಜನರ ಶಿಕ್ಷಣಕ್ಕಾಗಿ ಅನುದಾನ, ಗ್ರಾಮೀಣ ನೈರ್ಮಲ್ಯಕ್ಕಾಗಿ ಶೌಚಾಲಯ ನಿರ್ಮಾಣ, ಪ್ರವಾಹಪೀಡಿತ ಜನರಿಗೂ ನೆರವು ನೀಡಿದ್ದಾರೆ.

ಅದರಲ್ಲೂ ದೇವದಾಸಿಯರು ಹಾಗೂ ಲೈಂಗಿಕ ಕಾರ್ಯಕರ್ತರ ಜೀವನವನ್ನೇ ಬದಲಾಯಿಸುವ ದಿಸೆಯಲ್ಲಿ ಸುಧಾಮೂರ್ತಿ ಅವರು ಮಾಡಿದ ಸೇವೆ, ಕೈಗೊಂಡ ಕ್ರಮಗಳು ದೇಶದ ಗಮನ ಸೆಳೆದಿವೆ. ಸಾವಿರಾರು ಕೋಟಿ ರೂಪಾಯಿಯ ಒಡೆಯರಾದರೂ ಸರಳತೆಯ ಮೂಲಕ, ಮೌಲ್ಯಗಳು ಹಾಗೂ ಸೇವೆಯ ಮೂಲಕ ಜನರ ಮನಸ್ಸಿನಲ್ಲಿ ತಾಯಿಯ ಸ್ಥಾನ ಪಡೆದಿರುವ ಸುಧಾ ಮೂರ್ತಿ ಅವರಿಗೆ ಕೇಂದ್ರ ಸರ್ಕಾರವು ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ.

ಇದನ್ನೂ ಓದಿ: Padma Awards 2023: ಲಕ್ಷಾಂತರ ಮಂದಿಯ ಜೀವ ಉಳಿಸಿದ ಡಾ. ದಿಲೀಪ್‌ ಮಹಲ್‌ ನಬೀಸ್‌ಗೆ ಮರಣೋತ್ತರ ಪದ್ಮ ವಿಭೂಷಣ ಪ್ರಶಸ್ತಿ

Exit mobile version