Site icon Vistara News

Teachers Recruitment Scam: ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮತ್ತೆ 8 ಶಿಕ್ಷಕರ ಬಂಧನ

Teachers Recruitment Scam

ಬೆಂಗಳೂರು: 2012ರಿಂದ 2015ನೇ ಸಾಲಿನ ವರೆಗಿನ ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಮತ್ತೆ 8 ಶಿಕ್ಷಕರನ್ನು ಬಂಧಿಸಲಾಗಿದ್ದು, ಇದರಿಂದ ಪ್ರಕರಣದ (Teachers Recruitment Scam) ಒಟ್ಟು ಬಂಧಿತ ಆರೋಪಿಗಳ ಸಂಖ್ಯೆ 69ಕ್ಕೆ ಏರಿಕೆಯಾಗಿದೆ.

2012-13 ಸಾಲಿನ ಶಿಕ್ಷಕರ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆ ಮದನಬಾವಿ ಸರ್ಕಾರಿ ಫ್ರೌಡ ಶಾಲೆ ಸಹಶಿಕ್ಷಕ ಶ್ರೀಕಾಂತ ನಾಯಕ, ವಿಜಯನಗರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಕೊಲ್ಹಾರ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕ ನಾಯಕ ಪ್ರಕಾಶ್ ರತ್ನು, ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕಮರೂರು ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಮಹಬೂಬ್ ಪಾಷ ಬಿ.ಆರ್, ಉತ್ತರ ಕನ್ನಡ ಜಿಲ್ಲೆ ಮುಂಡಗೋಳ ತಾಲೂಕಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಹಶಿಕ್ಷಕ ಸುಜಾತ ಭಂಡಾರಿಯನ್ನು ಬಂಧಿಸಲಾಗಿದೆ.

ಹಾಗೆಯೇ 2014-15 ಸಾಲಿನ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಧುಗಿರಿ ಶೈಕ್ಷಣಿಕ ಜಿಲ್ಲೆ ಕೊರಟಗೆರೆ ತಾಲೂಕು ಬುಕ್ಕಾಪಟ್ಲ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕಿ ದೀಪಾರಾಣಿ.ಜಿ.ಎನ್., ಮಧುಗಿರಿ ಶೈಕ್ಷಣಿಕ ಜಿಲ್ಲೆ ಪಾವಗಡ ತಾಲೂಕು ನಾಗಲಮಡಿಕೆ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಮೋಹನ್ ಕುಮಾರ್. ಜಿ.ಕೆ., ಮಧುಗಿರಿ ಶೈಕ್ಷಣಿಕ ಜಿಲ್ಲೆ ಪಾವಗಡ ತಾಲೂಕು ವಲ್ಲೂರು ಸರ್ಕಾರಿ ಪ್ರೌಢಶಾಲೆ ಮಂಜುನಾಥ್. ಎಸ್, ಚಿತ್ರದುರ್ಗ ಜಿಲ್ಲೆ ಹಿರಿಯೂರು ಟೌನ್ ಸರ್ಕಾರಿ ಪ್ರೌಢಶಾಲೆ ಸಹಶಿಕ್ಷಕ ಶಾಂತಿಲಾಲ್ ಚೌಹಾಣ್ ಎಂಬುವವರನ್ನು ಬಂಧಿಸಲಾಗಿದೆ.

2012ರಿಂದ 2015ನೇ ಸಾಲಿನ ವರೆಗಿನ ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಎಫ್‌ಐಆರ್ ದಾಖಲಾಗಿತ್ತು. ಪ್ರಕರಣಗಳಲ್ಲಿ ಬಂಧಿತ 61 ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಇದನ್ನೂ ಓದಿ | Road Accident: ಅತಿ ವೇಗ ಚಾಲನೆ ತಂದ ಆಪತ್ತು; ಹಾರಿ ಹೋಯ್ತು ಬೈಕ್‌ ಸವಾರನ ಪ್ರಾಣಪಕ್ಷಿ

ಕೆಟ್ಟು ನಿಂತಿದ್ದ ಕ್ಯಾಂಟರ್‌ಗೆ ಬೈಕ್‌ ಡಿಕ್ಕಿಯಾಗಿ ಯುವಕ, ಯುವತಿ ಸಾವು

ದೇವನಹಳ್ಳಿ: ರಸ್ತೆಬದಿ ಕೆಟ್ಟು ನಿಂತಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ದ್ವಿಚಕ್ರ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಆವತಿ ಗ್ರಾಮದ ಬಳಿ ನಡೆದಿದೆ. ಭರತ್ (30) ಮೃತ ಯುವಕ, ಮೃತ ಯುವತಿ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಚಿಕ್ಕಬಳ್ಳಾಪುರದ ಕಡೆಯಿಂದ ಬೆಂಗಳೂರಿನ ಕಡೆಗೆ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಯುವಕ, ಯುವತಿ ಹೋಗುತ್ತಿದ್ದರು. ಆವತಿ ಗ್ರಾಮದ ಬಳಿ ಬಂದಾಗ ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಂಟರ್‌ ಡಿಕ್ಕಿ ಹೊಡೆದಿದ್ದರಿಂದ ದುರಂತ ಸಂಭವಿಸಿದೆ.

Exit mobile version