Site icon Vistara News

ಗೋದಾಮಿನಲ್ಲಿದ್ದ 8 ಸಾವಿರ ಕ್ವಿಂಟಲ್ ಜೋಳ ನಾಪತ್ತೆ; ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಬಳ್ಳಾರಿ: ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕುಗಳ ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿದ್ದ 8 ಸಾವಿರ ಕ್ವಿಂಟಲ್ ಜೋಳ ಕಾಣೆಯಾಗಿದೆ. ವಿಷಯ ಬೆಳಕಿಗೆ ಬರುತ್ತಿದ್ದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸಿರುಗುಪ್ಪ ಮತ್ತು ಬಳ್ಳಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲಿ 2021-22ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ ಜೋಳಕ್ಕೆ 2738 ರೂಪಾಯಿಯಂತೆ ಬಳ್ಳಾರಿ ತಾಲೂಕಿನಲ್ಲಿ 109986.85 ಕ್ವಿಂಟಲ್ ಜೋಳ ಹಾಗೂ ಸಿರುಗುಪ್ಪ ತಾಲೂಕಿನಲ್ಲಿ 130978.00 ಕ್ವಿಂಟಲ್ ಜೋಳ ಖರೀದಿಸಲಾಗಿತ್ತು.

ಈ ಪೈಕಿ ಮೇ-2022 ಮತ್ತು ಜೂನ್-2022ರ ತಿಂಗಳಿಗೆ ಬಳ್ಳಾರಿ ಮತ್ತು ಸಿರುಗುಪ್ಪ ತಾಲೂಕುಗಳಿಗೆ ಸಾರ್ವಜನಿಕ ವಿತರಣಾ ಪದ್ಧತಿ ಯೋಜನೆಯಡಿ ಬಳ್ಳಾರಿ, ಧಾರವಾಡ, ಗದಗ, ಹಾವೇರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಎಂದು ಒಟ್ಟು 228850.85 ಕ್ವಿಂಟಲ್ ಜೋಳ ವಿತರಣೆಗಾಗಿ ಹಂಚಿಕೆ ಮಾಡಲಾಗಿತ್ತು.

ಬಳ್ಳಾರಿ ತಾಲೂಕಿನ ಎಸ್‍ಡಬ್ಲ್ಯೂಸಿ (SWC) ಗೋಡಾನ್‍ಲ್ಲಿ 2267.87 ಕ್ವಿಂಟಲ್ ಹಾಗೂ ಸಿರುಗುಪ್ಪ ತಾಲೂಕಿನ ಸಂಗ್ರಹಣಾ ಕೇಂದ್ರವಾದ ಕೆ.ಎಫ್.ಸಿ.ಎಸ್.ಸಿ ಸಗಟು ಗೋದಾಮು ಹಾಗೂ ಬಾಲಾಜಿ ಗೋದಾಮಿನಲ್ಲಿ (ಸಿಂಧನೂರು ರಸ್ತೆ) 9846.45 ಕ್ವಿಂಟಲ್ ಜೋಳ ಇರಬೇಕಾಗಿತ್ತು. ಆದರೆ, ಸ್ಥಳ ತನಿಖೆ ಮಾಡಿ ಪರಿಶೀಲನೆ ಮಾಡಿದಾಗ ಬಳ್ಳಾರಿಯ ಎಸ್‍ಡಬ್ಲ್ಯೂಸಿ (SWC) ಗೋದಾಮಿನಲ್ಲಿ 1030 ಕ್ವಿಂಟಲ್ ಹಾಗೂ ಸಿರುಗುಪ್ಪ ತಾಲೂಕಿನ ಸಂಗ್ರಹಣಾ ಕೇಂದ್ರವಾದ ಕೆ.ಎಫ್.ಸಿ.ಎಸ್.ಸಿ ಸಗಟು ಗೋದಾಮು ಹಾಗೂ ಬಾಲಾಜಿ ಗೋದಾಮಿನಲ್ಲಿ (ಸಿಂಧನೂರು ರಸ್ತೆ) 2548.50 ಕ್ವಿಂಟಲ್ ಜೋಳ ಇರುತ್ತದೆ.

ಆದರೆ ಇನ್ನೂ ಬಳ್ಳಾರಿ ಎಸ್‍ಡಬ್ಲ್ಯೂಸಿ (SWC) ಗೋದಾಮಿನಲ್ಲಿ 1237.87 ಕ್ವಿಂಟಲ್ ಜೋಳ ಹಾಗೂ ಸಿರುಗುಪ್ಪ ಬಾಲಾಜಿ ಗೋದಾಮು ಹಾಗೂ ಕೆ.ಎಫ್.ಸಿ.ಎಸ್.ಸಿ ಗೋದಾಮಿನಲ್ಲಿ 7282.42 ಕ್ವಿಂಟಲ್ ಜೋಳ ದಾಸ್ತಾನು ಕಡಿಮೆ ಇರುವುದು ಕಂಡು ಬಂದಿದೆ.

ಯಾವ ಅಧಿಕಾರಿಗಳ ವಿರುದ್ಧ ದೂರು ದಾಖಲು ಅಗಿದೆ?
2022ರ ಜುಲೈಗೆ ಪಡಿತರ ಹಂಚಿಕೆಯಲ್ಲಿ ಅಡಚಣೆ ಉಂಟಾಗಿದ್ದು, ಇದಕ್ಕೆ ಅಗತ್ಯ ದಾಸ್ತಾನು ಇಲ್ಲದಿರುವುದೇ ಕಾರಣ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಕಾರಣರಾದ ಬಳ್ಳಾರಿ ಕೆ.ಎಫ್.ಸಿ.ಎಸ್.ಸಿಯ ಜಿಲ್ಲಾ ವ್ಯವಸ್ಥಾಪಕರಾದ ನಾರಾಯಣಸ್ವಾಮಿ ಎಂ., ಬಳ್ಳಾರಿ ತಾಲೂಕಿನ ಖರೀದಿ ಅಧಿಕಾರಿಯಾದ ಕೆ.ಎಫ್.ಸಿ.ಎಸ್.ಸಿಯ ಕಿರಿಯ ಸಹಾಯಕರು/ಖರೀದಿ ಅಧಿಕಾರಿ ಶಿವೇಗೌಡ, ಸಿರಗುಪ್ಪ ಗೋದಾಮು ವ್ಯವಸ್ಥಾಪಕರು/ಖರೀದಿ ಅಧಿಕಾರಿ ಬಸವರಾಜ ಅವರ ಮೇಲೆ ಜಿಲ್ಲಾಧಿಕಾರಿಗಳ ನಿರ್ದೇಶನದ ಅನುಸಾರ ಬಳ್ಳಾರಿ ಗ್ರಾಮೀಣ ಮತ್ತು ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಶ್ರೀಧರ್ ತಿಳಿಸಿದ್ದಾರೆ.

ಇದನ್ನೂ ಓದಿ: ಭೋವಿ ಅಭಿವೃದ್ಧಿ ನಿಗಮ ನಿರ್ದೇಶಕ ರವಿಕುಮಾರ್ ವಿರುದ್ಧ ಎಫ್‌ಐಆರ್‌

Exit mobile version