ಬೆಂಗಳೂರು: 14ನೇ ಏರೋ ಇಂಡಿಯಾ-2023 ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗ್ಗೆ ಚಾಲನೆ ನೀಡಿ, ವೈಮಾನಿಕ ಪ್ರದರ್ಶನವನ್ನು ವೀಕ್ಷಿಸಿದರು. ಬಳಿಕ ಮಾತನಾಡಿ, ಬೆಂಗಳೂರಲ್ಲಿ ಆಯೋಜಿಸಲಾಗಿರುವ ಈ ಏರೋ ಇಂಡಿಯಾ ಕೇವಲ ಒಂದು ಶೋ ಅಲ್ಲ. ಇದು ಹೊಸ ಭಾರತದ ಹೊಸ ಶಕ್ತಿಯಾಗಿದೆ. ಈ ಹಿಂದೆ ಕೇವಲ ಇದನ್ನು ಸಾಂಪ್ರದಾಯಿಕ ರೀತಿಯಲ್ಲಿ ನೋಡಲಾಗುತ್ತಿತ್ತು. ಆದರೆ, ಕಳೆದ 8- 9 ವರ್ಷಗಳಿಂದ ಈ ವೈಮಾನಿಕ ಪ್ರದರ್ಶನಕ್ಕೆ ಹೊಸ ಅರ್ಥವನ್ನೇ ಕಲ್ಪಿಸಲಾಗಿದೆ. ಇದೊಂದು ಅವಕಾಶಗಳ ವೇದಿಕೆಯಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು. ಈ ವೈಮಾನಿಕ ಪ್ರದರ್ಶನದಲ್ಲಿ ಸುಮಾರು 98 ದೇಶಗಳಿಂದ 809 ಕಂಪನಿಗಳು ಭಾಗವಹಿಸುತ್ತಿವೆ.
ಪ್ರಸಕ್ತ ಸಾಲಿನಲ್ಲಿ ಏರೋ ಇಂಡಿಯಾವನ್ನು The Runway to a Billion Opportunities ಪರಿಕಲ್ಪನೆಯ ಅಡಿಯಲ್ಲಿ ಆಯೋಜಿಸಲಾಗಿದೆ. ಈ ಪ್ರದರ್ಶನವು ರಕ್ಷಣೆಗೆ ಸಂಬಂಧಿಸಿದ್ದಾದರೂ ದೇಶಿ ವಿಮಾನಯಾನ ಕ್ಷೇತ್ರಕ್ಕೆ ಬಲ ನೀಡಲಿದೆ ಮತ್ತು ಹೊಸ ದೇಶದಲ್ಲಿ ದೇಶದ ಬ್ರ್ಯಾಂಡ್ ಮರು ನಿರ್ಮಾಣಕ್ಕೆ ಸಾಧ್ಯವಾಗಲಿದೆ.
ಇದನ್ನೂ ಓದಿ: Aero India 2023: ಏರೋ ಇಂಡಿಯಾ 2023 ಹೊಸ ಭಾರತದ ಸಾಮರ್ಥ್ಯಕ್ಕೆ ಸಾಕ್ಷಿ- ಪ್ರಧಾನಿ ಮೋದಿ ಬಣ್ಣನೆ
ಈ ಏರೋ ಇಂಡಿಯಾ ಪ್ರದರ್ಶನದ ವೇಳೆ ಸುಮಾರು 251 ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಜತೆಗೆ, ಸುಮಾರು 75 ಸಾವಿರ ಕೋಟಿ ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಭಾರತೀಯ ಹಾಗೂ ವಿದೇಶಿ ಕಂಪನಿಗಳ ನಡುವೆ ಅನೇಕ ಒಪ್ಪಂದಗಳು ಏರ್ಪಡುವ ಸಾಧ್ಯತೆಗಳಿವೆ. ಭಾರತವು ಏರ್‌ಬಸ್ ಎಸ್‌ಇ ಮತ್ತು ಬೋಯಿಂಗ್ ಕಂಪನಿಗಳಿಂದ ಸುಮಾರು 100 ಶತಕೋಟಿ ಡಾಲರ್ ವೆಚ್ಚದಲ್ಲಿ 500 ಜೆಟ್‌ಗಳನ್ನು ಖರೀದಿಸುವ ಸಾಧ್ಯತೆ ಇದೆ.