Site icon Vistara News

Kidnap Case : ಹಾಡಹಗಲೇ ಟ್ಯೂಷನ್‌ಗೆ ಹೊರಟಿದ್ದ 9 ವರ್ಷದ ಬಾಲಕಿಯ ಅಪಹರಣ ಯತ್ನ

Kidnap case in Belagavi

ಬೆಳಗಾವಿ: ರಾಜ್ಯದಲ್ಲಿ ಅದರಲ್ಲೂ ಮುಖ್ಯವಾಗಿ ಗಡಿನಾಡು ಬೆಳಗಾವಿಯಲ್ಲಿ (Belagavi news) ಮಕ್ಕಳ ಅಪಹರಣ ಜಾಲ (Kidnapping Racket) ಸಕ್ರಿಯವಾಗಿದೆಯಾ ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಇಂಬು ನೀಡಿರುವುದು ಹಾಡಹಗಲೇ 9 ವರ್ಷದ ಬಾಲಕಿಯೊಬ್ಬಳನ್ನು ಅಪಹರಿಸಲು ಯತ್ನಿಸಿದ ಘಟನೆ (Kidnap Case). ಸಾಮಾನ್ಯವಾಗಿ ಮಕ್ಕಳು ಅಪಹರಣದ ಕಟ್ಟು ಕಥೆಗಳನ್ನು ಹೇಳುತ್ತಾರೆ ಎಂಬ ಆಪಾದನೆ ಇದೆ. ಆದರೆ, ಇಲ್ಲಿ ಈ ಬಾಲಕಿಯ ಅಪಹರಣದ ಘಟನೆ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಪರಿಸರದಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ.

ಆ 9 ವರ್ಷದ ಬಾಲಕಿ ಎಂದಿನಂತೆ ಮನೆಯಿಂದ ಟ್ಯೂಷನ್‌ಗೆ ಹೊರಟಿದ್ದಳು. ಬೆಳಗಾವಿಯ ಹಿಂದವಾಡಿ ಪೋಸ್ಟ್ ಆಫೀಸ್ ಬಳಿ ಆಕೆ ಸಾಗುತ್ತಿದ್ದಾಗ ಒಬ್ಬ ವ್ಯಕ್ತಿ ಆಕೆಯ ಬಳಿ ಬರುತ್ತಾನೆ. ಆಕೆಗೆ ಚಾಕಲೇಟ್‌ ಕೊಡುವ ನೆಪದಲ್ಲಿ ಹತ್ತಿರ ಹೋಗುತ್ತಾನೆ. ಹತ್ತಿರ ಹೋದವನೇ ಆ ಬಾಲಕಿಯನ್ನು ಎತ್ತಿಕೊಂಡು ಹೆಗಲ ಮೇಲೆ ಹಾಕಿಕೊಳ್ಳುತ್ತಾನೆ. ಆ ರಸ್ತೆ ಆ ಹೊತ್ತಿನಲ್ಲಿ ನಿರ್ಜನವಾಗಿರುವುದನ್ನು ಗಮನಿಸಿಯೇ ಈ ಕೃತ್ಯವನ್ನು ನಡೆಸಿದ್ದಾನೆ.

ಅಪಹರಣಕಾರ ಬಾಲಕಿಯನ್ನು ಹೆಗಲ ಮೇಲೆ ಹಾಕಿಕೊಂಡು ಓಡಿಹೋಗುತ್ತಾನೆ. ಈ ಬಾಲಕಿ ಆತನ ಕೈಯಲ್ಲಿ ಕೊಸರಿಕೊಳ್ಳುತ್ತಾಳೆ. ಕೀಚಕನಿಂದ ಬಿಡಿಸಿಕೊಳ್ಳಲು ಬಾಲಕಿ ಹರಸಾಹಸ ಮಾಡುತ್ತಾಳೆ. ಹೆಗಲ ಮೇಲಿನಿಂದಲೇ ಆತನಿಗೆ ಹೊಡೆಯುತ್ತಾ ಕಚ್ಚುತ್ತಾ ರಕ್ಷಿಸಿಕೊಳ್ಳಲು ಯತ್ನಿಸುತ್ತಾಳೆ. ಅದರ ಜತೆಗೆ ಜೋರಾಗಿ ಚೀರುತ್ತಾಳೆ.

ಬಾಲಕಿಯ ಚೀರಾಟವನ್ನು ಕೇಳಿದ ಜನರು ಎಲ್ಲ ಕಡೆಯಿಂದ ಓಡಿ ಬರುತ್ತಾರೆ. ಮತ್ತು ಬಾಲಕಿಯನ್ನು ಹೊತ್ತುಕೊಂಡು ಹೋಗುತ್ತಿದ್ದ ಅಪಹರಣಕಾರನನ್ನು ಬೆನ್ನಟ್ಟುತ್ತಾರೆ. ಸ್ವಲ್ಪ ದೂರ ಓಡುವ ಆತ ಬಳಿಕ ಬಾಲಕಿಯನ್ನು ಕೆಳಗಿಳಿಸಿ ಓಡಿ ಹೋಗಿ ಸ್ಥಳೀಯರಿಂದ ತಪ್ಪಿಸಿಕೊಳ್ಳುತ್ತಾನೆ.

ಬಾಲಕಿಯ ಅಪಹರಣ ಯತ್ನದ ಬಗ್ಗೆ ಆಕ್ರೋಶ ಮತ್ತು ಆತಂಕ ವ್ಯಕ್ತಪಡಿಸುತ್ತಿರುವ ಸ್ಥಳೀಯರು

ಈ ಘಟನೆಯ ಬಗ್ಗೆ ಬಾಲಕಿಯ ಪೋಷಕರು ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆ ರಸ್ತೆಯಲ್ಲಿರುವ ಮನೆಗಳ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ ಎಲ್ಲವೂ ದಾಖಲಾಗಿದ್ದು ಕಂಡುಬಂದಿದೆ. ಇದೀಗ ಅದನ್ನು ಆಧರಿಸಿ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಬೆಳಗಾವಿ ನಗರದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಮಕ್ಕಳನ್ನು ಒಂಟಿಯಾಗಿ ಬಿಡಲು ಹೆದರುವ ಪರಿಸ್ಥಿತಿ ನಿರ್ಮಾಣಗೊಂಡಿದೆ.

ರಾಜ್ಯದ ನಾನಾ ಭಾಗಗಳಲ್ಲಿ ಈ ರೀತಿ ಮಕ್ಕಳ ಅಪಹರಣ ಯತ್ನಗಳು ನಡೆದಿರುವುದು ಹಿಂದೆಯೂ ಬೆಳಕಿಗೆ ಬಂದಿದೆ. ಆದರೆ, ಹೆಚ್ಚಿನ ಸಂದರ್ಭದಲ್ಲಿ ಮಕ್ಕಳ ಕಳ್ಳರ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆದಿರುವುದರಿಂದ ಪೊಲೀಸರು ಕೂಡಾ ಜನರನ್ನೇ ಜಾಗೃತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ಕೆಲವು ನಿಜವಾದ ಅಪಹರಣಕಾರರು ಕೂಡಾ ತಮ್ಮ ಮೇಲೆ ದೌರ್ಜನ್ಯ ನಡೆದಿದೆ, ತಾವು ಅಮಾಯಕರು ಎಂಬ ಸೋಗು ಹಾಕಿಕೊಂಡಿರುವ ಸಾಧ್ಯತೆ ಇದೆ.

ಇದನ್ನೂ ಓದಿ: kidnapping case: ಬಾಲಕಿಗೆ ‘ಕಿಡ್ನ್ಯಾಪ್’ ಆಟ; ಡೆಲಿವರಿ ಬಾಯ್‌ಗೆ ಪ್ರಾಣ ಸಂಕಟ

ಅಪಹರಣಕಾರರು ಮಕ್ಕಳನ್ನು ಅದರಲ್ಲೂ ಮುಖ್ಯವಾಗಿ ಹೆಣ್ಣು ಮಕ್ಕಳನ್ನು ಟಾರ್ಗೆಟ್‌ ಮಾಡಿಕೊಂಡು ಕಾರ್ಯಾಚರಿಸುವ ಅಪಾಯ ಹೆಚ್ಚಿರುತ್ತದೆ. ಇದರ ಬಗ್ಗೆ ಭಯಗೊಂಡು ಮಕ್ಕಳನ್ನು ಹೊರಗೆ ಕಳುಹಿಸದೆ ಇರುವುದು ಸರಿಯಲ್ಲ. ಆದರೆ, ಸೂಕ್ತ ಮುನ್ನೆಚ್ಚರಿಕೆ ವಹಿಸುವುದು ಕೂಡಾ ಮುಖ್ಯ ಎಂದು ಪೊಲೀಸರು ಹೇಳುತ್ತಾರೆ.

Exit mobile version