Site icon Vistara News

Heart attack : ಜಾತ್ರೆಯಲ್ಲಿ ಆಟವಾಡುತ್ತಿದ್ದ 9ರ ಬಾಲಕ ಕುಸಿದು ಬಿದ್ದು ಸಾವು

9 year oold boy dies of heart attack at jatra festival after playing in bouncys balloon

9 year oold boy dies of heart attack at jatra festival after playing in bouncys balloon

ದೊಡ್ಡಬಳ್ಳಾಪುರ: ಸಾವು ಯಾವಾಗ, ಹೇಗೆ ಬಂದು ಆವರಿಸಿಕೊಳ್ಳುತ್ತದೆ ಎಂದು ಹೇಳುವುದೇ ಕಷ್ಟವಾಗುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಅದಲ್ಲದಿದ್ದರೆ ಇನ್ನೂ ಕೇವಲ 9 ವರ್ಷದ ಬಾಲಕ ಸಂಭ್ರಮದಿಂದ (Boy dies at jatra festival) ಆಟವಾಡುತ್ತಿದ್ದ ವೇಳೆ ಒಮ್ಮಿಂದೊಮ್ಮೆಗೇ ಕುಸಿದುಬಿದ್ದು ಸಾವನ್ನಪ್ಪುತ್ತಾನೆ ಎಂದರೆ ಏನರ್ಥ?

ಈ ದುರಂತ ಸಂಭವಿಸಿದ್ದು ದೊಡ್ಡಬಳ್ಳಾಪುರದಲ್ಲಿ. ಇಲ್ಲಿನ ಮುತ್ಯಾಲಮ್ಮನ ಜಾತ್ರೆಯ (Mutyalamma jatre) ಸಂಭ್ರಮದಲ್ಲಿ ಕುಟುಂಬದ ಸದಸ್ಯರ ಜತೆಗೆ ಕುಣಿದು ಕುಪ್ಪಳಿಸಿ ಖುಷಿಪಡುತ್ತಿದ್ದ ಆ ಹುಡುಗ ಏಕಾಏಕಿಯಾಗಿ ಕುಸಿದು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ.

ದೊಡ್ಡಬಳ್ಳಾಪುರ ಮುತ್ಯಾಲಮ್ಮನ ಜಾತ್ರೆಯ ದೃಶ್ಯ

ದೊಡ್ಡಬಳ್ಳಾಪುರ (Doddaballapura) ನಗರದ ಶಾಂತಿನಗರದ ನಿವಾಸಿ ಮಂಜುನಾಥ್ ಎಂಬುವವರ ಪುತ್ರ, 9 ವರ್ಷದ ಶ್ರೇಯಸ್ ಮೃತ ಬಾಲಕ. ಈತ ಮನೆಯವರೊಂದಿಗೆ ಮುತ್ಯಾಲಮ್ಮನ ಜಾತ್ರೆಗೆ ಹೋಗಿದ್ದ. ಜಾತ್ರೆಯಲ್ಲಿ ಹಲವಾರು ದೊಡ್ಡ ದೊಡ್ಡ ಮನೋರಂಜನಾ ಕ್ರೀಡಾ ವ್ಯವಸ್ಥೆಗಳು ಇದ್ದವು. ಜೈಂಟ್‌ ವೀಲ್‌, ಬೌನ್ಸಿಂಗ್‌ ಬಲೂನು (Bouncy balloon) ಸೇರಿದಂತೆ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು ಜಾತ್ರೆ.

ಈ ನಡುವೆ, ಜಾತ್ರೆಯಲ್ಲಿ ಹಾಕಿದ್ದ ಅಮ್ಯೂಸ್ ಮೆಂಟ್ ಕ್ರೀಡೆಗಳಲ್ಲಿ ಭಾಗಿಯಾಗಿದ್ದ ಬಾಲಕ ಬಳಿಕ ಬೌನ್ಸಿ ಬಲೂನ್‌ನಲ್ಲಿ ಆಟವಾಡಲು ಹೋಗಿದ್ದ. ಇತರ ಮಕ್ಕಳಂತೆ ಆತನೂ ಕುಣಿಯುತ್ತಾ, ಜಂಪ್‌ ಮಾಡುತ್ತಾ, ಹತ್ತುತ್ತಾ, ಇಳಿಯುತ್ತಾ ಆಟವಾಡುತ್ತಿದ್ದ. ಈ ಹಂತದಲ್ಲಿ ಒಮ್ಮೆಗೇ ಆತ ಆಟವಾಡುವುದನ್ನು ನಿಲ್ಲಿಸಿದ. ಆತನನ್ನು ಗಮನಿಸುತ್ತಿದ್ದ ಮನೆಯವರು ಕೂಡಲೇ ಏನಾಯಿತು ಎಂದು ಧಾವಿಸಿ ಆತನನ್ನು ಕೆಳಗಿಳಿಸಿ ನೋಡಿದರು.

ಜಾತ್ರೆಯಲ್ಲಿದ್ದ ಜೈಂಟ್‌ ವೀಲ್‌

ಅಷ್ಟು ಹೊತ್ತಿಗೆ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ಕೂಡಲೇ ಆತನನ್ನು ಆಸ್ವತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟು ಹೊತ್ತಿಗೇ ಪ್ರಾಣ ಹೋಗಿತ್ತು.

ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲೋ ಬಿಪಿ ಆಗಿತ್ತಾ?

ಶ್ರೇಯಸ್‌ ಸಾವಿಗೆ ಕಾರಣ ಏನು ಎನ್ನುವುದು ಸ್ಪಷ್ಟವಾಗಿಲ್ಲ. ಲೋ ಬಿಪಿಯಾಗಿ ಹೃದಯಾಘಾತ (Heart attack) ಸಂಭವಿಸಿರಬಹುದು ಎಂಬ ಪ್ರಾಥಮಿಕ ಸಂಶಯವಿದೆ. ಏನೇ ಇದ್ದರೂ ಪುಟ್ಟ ಪುಟ್ಟ ಮಕ್ಕಳು ಈ ರೀತಿಯಾಗಿ ಅಕಾಲದಲ್ಲಿ, ಕಾರಣವೇ ಇಲ್ಲದೆ ಪ್ರಾಣ ಕಳೆದುಕೊಳ್ಳುವ ಘಟನೆಗಳು ಹೆಚ್ಚುತ್ತಿರುವುದು ಭಾರಿ ಕಳವಳ ಮೂಡಿಸುವುದು ನಿಜ.

ಇತ್ತೀಚಿನ ದಿನಗಳಲ್ಲಿ ಮಕ್ಕಳು ಸಣ್ಣ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಪ್ರಾಣ ಕಳೆದುಕೊಳ್ಳುವುದು ಹೆಚ್ಚಾಗುತ್ತಿದೆ.

ಇದೇ ವರ್ಷದ ಜನವರಿ 11ರಂದು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಎಣ್ಣೆಕೊಪ್ಪ ಗ್ರಾಮದಲ್ಲಿ ಶಾಲೆಗೆ ಹೊರಟಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟಿದ್ದ. ಆನವಟ್ಟಿಯಲ್ಲಿ 10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಜಯಂತ್ ರಜತಾದ್ರಯ್ಯ ಹೃದಯಾಘಾತದಿಂದ ಮೃತಪಟ್ಟವನು. ಜಯಂತ್‌ ಎಂದಿನಂತೆ ಶಾಲೆಗೆ ಹೋಗಲು ತಯಾರಾಗುತ್ತಿದ್ದ. ಈ ವೇಳೆ ಸಣ್ಣದಾಗಿ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಕುಟುಂಬಸ್ಥರು ಎಣ್ಣೆಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದರು. ಆದರೆ ಬಾಲಕ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

Heart attack

ಜನವರಿ 8ರಂದು ಹಿಂದಷ್ಟೇ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿ ಕೂಡುಮಂಗಳೂರಿನ ನಿವಾಸಿಯಾಗಿರುವ ಕೀರ್ತನ್‌ (12) ಎಂಬಾತ ಮಲಗಿದ್ದಲೇ ಹೃದಯಾಘಾತವಾಗಿ ಮೃತಪಟ್ಟಿದ್ದ.

ಇದನ್ನೂ ಓದಿ: ಸ್ನೇಹಿತರೊಂದಿಗೆ ತಲಕಾಡಿಗೆ ಹೋಗಿದ್ದ ಬಾಲಕರಿಬ್ಬರು ನೀರುಪಾಲು; ಆಳವಿದ್ದ ಕಡೆ ಈಜಿದ್ದೇ ಜೀವಕ್ಕೆ ಮುಳುವಾಯ್ತು

ಇದನ್ನೂ ಓದಿ: Heart Attack: ಹೃದಯಾಘಾತಕ್ಕೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಬಲಿ, ಏನು ಕಾರಣ?

Exit mobile version