Site icon Vistara News

9 Years of PM Modi: ಮೋದಿ ಸರ್ಕಾರದಿಂದ ಅಭಿವೃದ್ಧಿಯ ಸಾಕಾರ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

meenakshi lekhi nalin kumar kateel basavaraj bommai in pressmeet in karnataka bjp state office

#image_title

ಬೆಂಗಳೂರು: ಬಡವರು, ರೈತರು ಮತ್ತು ಅವಕಾಶ ವಂಚಿತರಿಗೆ ಸಮರ್ಪಿತ ಸರ್ಕಾರ ತಮ್ಮದೆಂದು ನರೇಂದ್ರ ಮೋದಿಯವರು ನಂಬಿದ್ದು, ಉತ್ತಮ ಆಡಳಿತದ ಮೂಲಕ ವೇಗದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿದ್ದಾರೆ.

ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 9 ವರ್ಷಗಳಲ್ಲಿ ಅಭಿವೃದ್ಧಿಯ ಭಾರಿ ಸಾಹಸವನ್ನು ಸಾಕಾರಗೊಳಿಸಿದ್ದಾರೆ. ನಿರಂತರ ಅಭಿವೃದ್ಧಿ ವಿಚಾರದಲ್ಲಿ ಭಗೀರಥ ಪ್ರಯತ್ನ ಅವರದಾಗಿತ್ತು.

ಸೆಂಗೋಲ್ ಇದೆಯೆಂದು ಯಾರಿಗೂ ತಿಳಿದಿರಲಿಲ್ಲ. ಮೋದಿಯವರು ನಾಗರಿಕತೆಯ ಜಾಗೃತಿ ಕುರಿತು ಹೆಮ್ಮೆಯನ್ನು ಮೂಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಹೊಂದಿದ ದೇಶಗಳು ಆರ್ಥಿಕ ಸಮಸ್ಯೆಗೆ ಸಿಲುಕಿದ್ದವು. ಆದರೆ, ಗರಿಷ್ಠ ಜನಸಂಖ್ಯೆ ಹೊಂದಿದ ಭಾರತದಲ್ಲಿ ಮೋದಿಯವರ ಕರ್ತವ್ಯನಿಷ್ಠೆಯ ಪರಿಣಾಮವಾಗಿ ಉಚಿತ ಲಸಿಕೆ ಲಭಿಸಿತು. ಆದರೆ, ವಿಪಕ್ಷಗಳು ವಿದೇಶಿ ಲಸಿಕೆಗಳನ್ನು ಇಲ್ಲಿ ಬಿಕರಿ ಮಾಡಬೇಕೆಂದು ಆಶಿಸಿದ್ದವು ಎಂದು ಟೀಕಿಸಿದರು.

ಲಸಿಕೆ ಉತ್ಪಾದನೆಗೆ ಪ್ರೋತ್ಸಾಹ ಕೊಡಲಾಯಿತು. ಹಿರಿಯ ನಾಗರಿಕರಿಗೆ ಆದ್ಯತೆ ಕೊಡಲಾಗಿತ್ತು. ಎಲ್ಲರಿಗೆ ಲಸಿಕೆ ಕೊಡಲು 20 ವರ್ಷ ಬೇಕೆಂಬ ಕೂಗಿತ್ತು. ಆದರೆ, ಒಂದೆರಡು ವರ್ಷಗಳಲ್ಲಿ ಅದನ್ನು ಈಡೇರಿಸಲಾಗಿದೆ. ಭಾರತ ದೂರದೃಷ್ಟಿ ಇರುವ ದೇಶವಾಗಿ ಬೆಳೆದಿದೆ. ಕಟ್ಟಿಗೆ, ನೀರು, ಶೌಚಾಲಯದ ಸಮಸ್ಯೆಗಳನ್ನು ಪರಿಹರಿಸಿದ ದೂರದೃಷ್ಟಿಯ ನಾಯಕ ಮೋದಿ. ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಅವರು ಆದ್ಯತೆ ಕೊಟ್ಟಿದ್ದಾರೆ. ಒಂದೆಡೆ ಸಂಸತ್‌ ಭವನ ನಿರ್ಮಾಣವಾದರೆ, ಇನ್ನೊಂದೆಡೆ ಉಜ್ವಲ, ಜನ್‍ಧನ್ ಖಾತೆ, ಆಯುಷ್ಮಾನ್ ಯೋಜನೆ, ಸ್ಯಾನಿಟರಿ ಪ್ಯಾಡ್ ವಿತರಣೆಯಂಥ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದಾರೆ.

ವೇಗವಾಗಿ, ಸಕಾಲದಲ್ಲಿ ಯೋಜನೆಗಳ ಜಾರಿ ಆಗಿದೆ. ಹಿಂದೆ ಗರೀಬಿ ಹಠಾವೋ ಕೇವಲ ಮಾತಿನಲ್ಲಿತ್ತು. ಬಡತನ ದೂರ ಆಗಿರಲಿಲ್ಲ. ಭ್ರಷ್ಟಾಚಾರ ಹೆಚ್ಚಾಗಿತ್ತು. ಬಡತನ ದೂರ ಮಾಡಲು ಬಳಸುವ ಹಣ ಕೆಲವರ ಜೇಬು ಸೇರುತ್ತಿತ್ತು ಎಂದು ಟೀಕಿಸಿದರು. ಪ್ರಧಾನಿಯವರು ಆರಂಭದಲ್ಲಿ ಜನ್‍ಧನ್ ಬ್ಯಾಂಕ್ ಖಾತೆ ಯೋಜನೆ ಆರಂಭಿಸಿದರು. ಆದರೆ, ಅದರ ಕುರಿತು ಋಣಾತ್ಮಕ ಮಾತುಗಳಿದ್ದವು. 100 ಕೋಟಿ ಜನರಿಗೆ ಕೇವಲ 12 ಕೋಟಿ ಬ್ಯಾಂಕ್ ಖಾತೆಗಳಿದ್ದ ದಿನಗಳವು. ಬಡವರು, ಬಡ ವ್ಯಾಪಾರಿಗಳು ಬ್ಯಾಂಕ್ ವ್ಯಾಪ್ತಿಗೆ ಬರುವಂತಾಯಿತು. ಅವರ ಹಣವೂ ಬ್ಯಾಂಕಿಗೆ ಬರುವಂತಾಗಿದೆ. ಅವರಿಗೆ ವಿಮೆ, ಸ್ವಾಸ್ಥ್ಯದ ಯೋಜನೆಗಳು ತಲುಪಿದವು. ಇದು ದೂರದೃಷ್ಟಿಯ ಪರಿಣಾಮ.

ಬೆಂಗಳೂರು- ಮೈಸೂರು ದಶಪಥ ರಸ್ತೆಯನ್ನು ದಾಖಲೆ ಅವಧಿಯಲ್ಲಿ ಭ್ರಷ್ಟಾಚಾರರಹಿತವಾಗಿ ಪೂರ್ಣಗೊಳಿಸಲಾಗಿದೆ. 4 ಲಕ್ಷ ಕಿಮೀ ಹೈವೇ ರಸ್ತೆ ನಿರ್ಮಾಣ ಮಾಡಲಾಗಿದೆ. 2014ರಲ್ಲಿ ಕೆಲವು ಪ್ರದೇಶಗಳಲ್ಲಿ ಹೈವೇಗಳನ್ನು ಅಭಿವೃದ್ಧಿ ಪಡಿಸುತ್ತಿರಲಿಲ್ಲ. ಇದೀಗ ಅದು ಎಲ್ಲ ಕಡೆ ನಡೆದಿದೆ. 13 ಕೋಟಿ ಮನೆಗಳಿಗೆ ನಲ್ಲಿನೀರು ಕೊಡಲಾಗಿದೆ. ಇದು ಈಗಿನ ಪರಿಸ್ಥಿತಿ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನೆಚ್ಚಿನ ನಾಯಕರು ಹಾಗೂ ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಯವರ ಸರ್ಕಾರ 9 ವರ್ಷ ಪೂರ್ಣಗೊಳಿಸಿದೆ. 9 ವರ್ಷ ರಾಷ್ಟ್ರದಲ್ಲಿ ಬಹಳಷ್ಟು ಬೆಳವಣಿಗೆ, ಬದಲಾವಣೆ ಆಗಿದೆ. ದೇಶವು ಬಹಳ ಕ್ಷೇತ್ರಗಳಲ್ಲಿ ಮುನ್ನಡೆದಿದೆ. ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲೂ ಬಹಳ ದೊಡ್ಡ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬದಲಾವಣೆ- ಉನ್ನತೀಕರಣ ಆಗಿದೆ.

ಮೋದಿಯವರು ಅಧಿಕಾರ ಪಡೆದ ಸಂದರ್ಭದಲ್ಲಿ ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗಿತ್ತು. ಸ್ಪಷ್ಟ ನೀತಿ ಇರಲಿಲ್ಲ. ಭಾರತದ ವಿಶ್ವಾಸಾರ್ಹತೆ ಬಹಳ ಕೆಳಮಟ್ಟಕ್ಕೆ ಕುಸಿದಿತ್ತು. ಇಂಥ ಹಿನ್ನೆಲೆಯೊಂದಿಗೆ ಅಧಿಕಾರ ಪಡೆದ ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗಿನ ಅನುಭವ, ರಾಷ್ಟ್ರವನ್ನು ಅರಿತುಕೊಂಡ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದಾರೆ. ಕಾಶ್ಮೀರವನ್ನು ದೇಶದ ಜೊತೆ ಮರುಜೋಡಣೆ ಮಾಡಿದ್ದಾರೆ. ಜಿಎಸ್‍ಟಿ ಜಾರಿ ಮಾಡಲಾಯಿತು. ಕರ್ನಾಟಕದ ಜಿಎಸ್‍ಟಿ ಸಂಗ್ರಹದಲ್ಲಿ ಆದಾಯ ಹೆಚ್ಚಾಗಿದೆ. ರಾಷ್ಟ್ರದ ಆರ್ಥಿಕತೆ ಬೆಳವಣಿಗೆ, ಆರ್ಥಿಕವಾಗಿ ಹೆಚ್ಚು ಹಂಚಿಕೆ ಸಾಧ್ಯವಾಗಿದೆ ಎಂದರು.

ನೀತಿ ಆಯೋಗ ಮಾಡಿದ್ದು, ಕಳೆದ 7 ವರ್ಷದಿಂದ 8ರಿಂದ 10 ಸಾವಿರ ಕೋಟಿ ರೂ. ಹೆಚ್ಚುವರಿ ಬರುತ್ತಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಅನುಷ್ಠಾನಕ್ಕೆ ತರಲಾಗಿದೆ. ಮಕ್ಕಳನ್ನು ಸ್ಪರ್ಧಾತ್ಮಕವಾಗಿ ತಯಾರು ಮಾಡಲು ಇದು ಪೂರಕ ಎಂದು ವಿವರಿಸಿದರು. ಕರ್ನಾಟಕವು ಎನ್‍ಇಪಿಯನ್ನು ಮೊದಲು ಅನುಷ್ಠಾನಕ್ಕೆ ತಂದಿದೆ. ಹಲವಾರು ಹೊಸ ವಿಚಾರಗಳನ್ನು ಅದು ಒಳಗೊಂಡಿದೆ ಎಂದು ತಿಳಿಸಿದರು.

ಅವರು ಪ್ರಾರಂಭಿಸಿದ್ದನ್ನು ಅವರೇ ಉದ್ಘಾಟಿಸಿದ್ದಾರೆ. ನುಡಿದಂತೆ ನಡೆದು ತೋರಿಸಿದ್ದಾರೆ. ವಂದೇ ಭಾರತ್ ರೈಲು, ಹೊಸ ಸಂಸತ್ ಉದ್ಘಾಟನೆ ಆಗಿದೆ. ಅವರೊಬ್ಬ ದೂರದೃಷ್ಟಿ ಇರುವ ಕರ್ತವ್ಯನಿಷ್ಠೆಯ ನಾಯಕ. ಅಮೃತಕಾಲಕ್ಕೆ ಭದ್ರ ಅಡಿಪಾಯ ಹಾಕಿದ್ದು, 9 ವರ್ಷ ಅತ್ಯಂತ ನೆನಪಿಡುವ ಅಭಿವೃದ್ಧಿಯ ಅದ್ಭುತ ದಿನಗಳು. ಅಮೃತಕಾಲದಲ್ಲಿ ಮೋದಿಯವರ ನಾಯಕತ್ವ ಮುಂದುವರಿಯುವ ಆಶಯವನ್ನು ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್, ಕೋಟ ಶ್ರೀನಿವಾಸ ಪೂಜಾರಿ, ಬೈರತಿ ಬಸವರಾಜು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಭಾಗವಹಿಸಿದ್ದರು.

ಇದನ್ನೂ ಓದಿ: New Parliament Building: ಪಂಚಾಯ್ತಿಯಿಂದ ಸಂಸತ್ತಿನ ತನಕ ಒಂದೇ ನಿಷ್ಠೆ; 9 ವರ್ಷದ ಸಾಧನೆಗಳಿಂದಲೇ ಹೆಚ್ಚು ಖುಷಿ ಎಂದ ಮೋದಿ

Exit mobile version