ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ನಿರೀಕ್ಷೆಯಂತೆಯೇ ವಿಧಾನ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ. ಈಗಾಗಲೆ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದಿರುವ ಇಬ್ರಾಹಿಂ ಜಾತ್ಯಾತೀತ ಜನತಾದಳ ಸೇರುವ ಮಾರ್ಗ ಈ ಮೂಲಕ ಪ್ರಶಸ್ತವಾಗಿದೆ.
ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕರಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ಎಸ್. ಆರ್. ಪಾಟೀಲ್ ಅವರ ಅವಧಿ 2022ರ ಜನವರಿಯಲ್ಲಿ ಮುಕ್ತಾಯವಾದ ನಂತರ ಆ ಸ್ಥಾನಕ್ಕೆ, ಹಿರಿಯ ಕಾಂಗ್ರೆಸಿಗರಾದ ತಮ್ಮನ್ನು ಪರಿಗಣಿಸಲಾಗುತ್ತದೆ ಎಂದು ಇಬ್ರಾಹಿಂ ನಿರೀಕ್ಷಿಸಿದ್ದರು. ಚುನಾವಣಾ ವರ್ಷದಲ್ಲಿ ಅಲ್ಪಸಂಖ್ಯಾತರೊಬ್ಬರಿಗೆ ಪ್ರತಿಪಕ್ಷ ನಾಯಕ ಸ್ಥಾನ ನೀಡಿದರೆ ಪಕ್ಷಕ್ಕೂ ಅನುಕೂಲವಾಗುವುದರಿಂದ ಈ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಹ ಬೆಂಬಲಿಸುತ್ತಾರೆ ಎಂದು ತಿಳಿದಿದ್ದರು. ಆದರೆ ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಿ.ಕೆ. ಹರಿಪ್ರಸಾದ್ ಅವರನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಲಾಗಿತ್ತು.
ಈ ಬೆಳವಣಿಗೆ ವಿರುದ್ಧ ಅಸಮಾಧಾನಗೊಂಡಿದ್ದ ಇಬ್ರಾಹಿಂ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಒಮ್ಮೆ ಕಾರ್ಯಕ್ರಮವೊಂದರಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಏಕವಚನದಲ್ಲಿ ತೆಗಳುವ ದೃಶ್ಯ, ಮಾಧ್ಯಮಗಳ ಕ್ಯಾಮೆರಾಗಳಲ್ಲಿ ಅಚಾನಕ್ಕಾಗಿ ಸೆರೆಯಾಗಿತ್ತು. ವಿಧಾನಸೌಧದ ಪಡಸಾಲೆಯಲ್ಲಿ ಒಮ್ಮೆ ಸಿದ್ದರಾಮಯ್ಯ ಸಿಕ್ಕಿ, ಪಕ್ಷ ಬಿಡಬೇಡಿ ಎಂದು ಮನವಿ ಮಾಡಿದ್ದರು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಇಬ್ರಾಹಿಂ ತೆರಳಿದ್ದರು. ಸಿದ್ದರಾಮಯ್ಯ ಆಪ್ತ ಹಾಗೂ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸಹ ಇಬ್ರಾಹಿಂ ಅವರನ್ನು ಭೇಟಿ ಮಾಡಿ ಸಂಧಾನ ಮಾಡಲು ಪ್ರಯತ್ನಿಸಿದ್ದರು. ಆದರೆ ಇದ್ಯಾವುದೂ ಫಲ ನೀಡದೆ ಮಾರ್ಚ್ 12ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಸೋನಿಯಾ ಗಾಂಧಿಗೆ ಪತ್ರ
ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಇಬ್ರಾಹಿಂ, ಕಳೆದ 12 ವರ್ಷದಿಂದ ಪಕ್ಷದ ಸಮಸ್ಯೆಗಳ ಕುರಿತು ತಮಗೆ ಅನೇಕ ಪತ್ರಗಳನ್ನು ಬರೆದಿದ್ದೇನೆ. ಈ ಸಮಸ್ಯೆಗಳ ಕುರಿತು ಸೂಕ್ತ ಹಾಗೂ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ತಾವು ವಿನಮ್ರವಾಗಿ ಪ್ರತಿಕ್ರಿಯೆ ನೀಡಿದ್ದಿರಿ. ಆದರೆ ಪಕ್ಷದಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಚುನಾವಣೆ ನಡೆಸಿದ್ದರೆ ನಾನೇ ಗೆಲ್ಲುತ್ತಿದ್ದೆ ಏಕೆಂದರೆ ಸದಸ್ಯರು ನನಗೆ ಬೆಂಬಲ ವ್ಯಕ್ತಪಡಿಸಿದ್ದರು. ಆದರೆ ಪರಿಷತ್‌ನ ಅತ್ಯಂತ ಕಿರಿಯ ಸದಸ್ಯರಾದ ಹರಿಪ್ರಸಾದ್ ಅವರಿಗೆ ಈ ಸ್ಥಾನ ನೀಡಲಾಗಿದೆ ಎಂದಿದ್ದರು.
ಅಧಿಕೃತ ರಾಜೀನಾಮೆ
ಸೋನಿಯಾಗಾಂಧಿಯವರಿಗೆ ಬರೆದ ಪತ್ರದಲ್ಲಿ, ಪ್ರಾಥಮಿಕ ಸದಸ್ಯತ್ವದ ಜತೆಗೆ ಪರಿಷತ್ ಸದಸ್ಯತ್ವಕ್ಕೂ ರಾಜೀನಾಮೆ ನೀಡುವುದಾಗಿ ಇಬ್ರಾಹಿಂ ಹೇಳಿದ್ದರು. ಆದರೆ ಶಿಷ್ಟಾಚಾರದ ಪ್ರಕಾರ ನೇರವಾಗಿ ಸಭಾಪತಿಯವರಿಗೆ ರಾಜೀನಾಮೆ ನೀಡಬೇಕು. ಈ ಹಿನ್ನೆಲೆಯಲ್ಲಿ ಬೆಳಗ್ಗೆ 11 ಗಂಟೆಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯನ್ನು ಹೊರಟ್ಟಿ ಅವರು ಅಂಗೀಕರಿಸಿದ್ದಾರೆ.
ಜೆಡಿಎಸ್ ಸೇರ್ಪಡೆ
ಹರಿಪ್ರಸಾದ್ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಆಯ್ಕೆ ಮಾಡಿದಾಗಿನಿಂದಲೇ ಅಸಮಾಧಾನಗೊಂಡಿದ್ದ ಇಬ್ರಾಹಿಂ ನಂತರದಲ್ಲಿ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಸಂಪರ್ಕದಲ್ಲಿದ್ದರು. ಮಾರ್ಚ್ 19 ರಂದು ಮುಖತಃ ಭೇಟಿಯನ್ನೂ ಮಾಡಿ ಬಂದಿದ್ದರು. ಇದೀಗ ಅಧಿಕೃತವಾಗಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಜೆಡಿಎಸ್ ಸೇರ್ಪಡೆಗೆ ಮಾರ್ಗ ಪ್ರಶಸ್ತವಾಗಿದೆ. ಆದರೆ ಜೆಡಿಎಸ್‌ನಲ್ಲಿ ಯಾವ ಸ್ಥಾನದ ಭರವಸೆ ನೀಡಲಾಗಿದೆ ಎಂದು ಸ್ಪಷ್ಟವಾಗಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಂ ಮತಗಳನ್ನು ಕಳೆದುಕೊಂಡು ಅನೇಕ ಸ್ಥಾನಗಳಲ್ಲಿ ಸೋಲುಂಡಿದ್ದ ಜೆಡಿಎಸ್‌ಗೆ ಇಬ್ರಾಹಿಂ ಆಗಮನ ಲಾಭವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಉತ್ತಮ ಮಾತುಗಾರ, ನಿರರ್ಗಳವಾಗಿ ವಚನಗಳನ್ನು ಉದಾಹರಿಸುವ ಇಬ್ರಾಹಿಂ ಅವರು ಸಂಘಟನಾತ್ಮಕವಾಗಿ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.