ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನದಲ್ಲಿ ಬರುವ ರವೀಂದ್ರ ಕಲಾಕ್ಷೇತ್ರ, ನಯನ ಸೇರಿ ಬೆಂಗಳೂರಿನ ಏಳು ರಂಗಮಂದಿರಗಳ ಬಾಡಿಗೆಯನ್ನು ಹೆಚ್ಚಳ ಮಾಡಲಾಗಿದೆ. ರಂಗಮಂದಿರಗಳನ್ನು ಬಾಡಿಗೆ ಪಡೆಯುವ ತಂತ್ರಾಂಶದಲ್ಲಿದ್ದ ದೋಷಗಳನ್ನೂ ಪರಿಹರಿಸಲಾಗಿದ್ದು, ಮೇ 1ರ ನಂತರ ನಡೆಯುವ ಕಾರ್ಯಕ್ರಮಗಳನ್ನು ಬುಕ್ ಮಾಡಲು ಏಪ್ರಿಲ್ 1ರಿಂದಲೇ ವೆಬ್‌ಸೈಟ್‌ನಲ್ಲಿ ಅವಕಾಶ ನೀಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
ರಂಗಮಂದಿರಗಳ ಬುಕ್ ಮಾಡಲು ಅನೇಕ ಮಧ್ಯವರ್ತಿಗಳಿದ್ದರು. ಅವರು ಬುಕ್ ಮಾಡಿ ನಂತರ ಹೆಚ್ಚಿನ ಮೊತ್ತಕ್ಕೆ ಬೇರೆಯವರಿಗೆ ನೀಡುತ್ತಿದ್ದರು. ಈ ತಂತ್ರಾಂಶದಲ್ಲಿದ್ದ ದೋಷವನ್ನು ಸರಿಪಡಿಸಲಾಗಿದೆ. ಹೊಸ ವ್ಯವಸ್ಥೆಯಲ್ಲಿ ರವೀಂದ್ರ ಕಲಾಕ್ಷೇತ್ರ, ನಯನ ರಂಗಮಂದಿರ, ಸಂಸ ಬಯಲು ರಂಗಮಂದಿರ, ಕಲಾಗ್ರಾಮದಲ್ಲಿರುವ ಸಾಂಸ್ಕೃತಿಕ ಸಮುಚ್ಛಯ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಮಹಿಳಾ ವಿಶ್ರಾಂತಿ ಕೊಠಡಿ ಮತ್ತು ಆರ್ಟ್ ಗ್ಯಾಲರಿಯನ್ನು ಆನ್‌ಲೈನ್ ಮೂಲಕ ಬುಕ್ ಮಾಡಬಹುದಾಗಿದೆ.
ಸದ್ಯಕ್ಕೆ ಬೆಂಗಳೂರಿನ ರಂಗಮಂದಿರಗಳ ಬಾಡಿಗೆ ಪರಿಷ್ಕರಣೆ ಮಾಡಲಾಗಿದ್ದು, ಮುಂಬರುವ ದಿನಗಳಲ್ಲಿ ಇಲಾಖೆ ಅಡಿಯ ಎಲ್ಲ ರಂಗಮಂದಿರಗಳ ಬಾಡಿಗೆಯನ್ನೂ ಪರಿಷ್ಕರಿಸಲಾಗುತ್ತದೆ. ಬಾಡಿಗೆಯನ್ನು ಪ್ರತಿವರ್ಷ 5% ಏರಿಕೆ ಮಾಡಲಾಗುತ್ತದೆ. ಎಲ್ಲ ರಂಗಮಂದಿರಗಳಿಗೂ ಪ್ರತ್ಯೇಕ ವಿದ್ಯುತ್ ಮೀಟರ್ ಅಳವಡಿಕೆ ಮಾಡಲಾಗುತ್ತದೆ. ರಂಗಮಂದಿರ ಬುಕ್ಕಿಂಗ್ ಸಮಯದಲ್ಲಿ ಪಡೆಯಲಾಗಿರುವ ಠೇವಣಿ ಮೊತ್ತದಲ್ಲಿ ವಿದ್ಯುತ್ ಬಿಲ್ ಕಡಿತ ಮಾಡಿ ಉಳಿದ ಹಣವನ್ನು ಸಂಘಟಕರಿಗೆ ಹಿಂದಿರುಗಿಸಲಾಗುತ್ತದೆ ಎಂದು ಇಂಧನ ಸಚಿವರೂ ಆಗಿರುವ ಸುನೀಲ್‌ಕುಮಾರ್ ಹೇಳಿದ್ದಾರೆ.
ರಂಗಮಂದಿರಗಳ ಪರಿಷ್ಕೃತ ದರಗಳು
ರಂಗಮಂದಿರ | ಪಾಳಿ | ಬಾಡಿಗೆ ಮೊತ್ತ | ಠೇವಣಿ | ಜಿಎಸ್ಟಿ | ಒಟ್ಟು | ಎರಡು ಪಾಳಿ |
ರವೀಂದ್ರ ಕಲಾಕ್ಷೇತ್ರ (ನಾಟಕ) | ಮೊದಲ ಪಾಳಿ-9-2 ಹಾಗೂ ಎರಡನೇ ಪಾಳಿ 4-9 ಪ್ರತ್ಯೇಕ | 5,000 | 5,000 | 900 | 10,000 | 21,800 |
ರವೀಂದ್ರ ಕಲಾಕ್ಷೇತ್ರ (ಸಾಂಸ್ಕೃತಿಕ ) | ಮೊದಲ ಪಾಳಿ-9-2 ಹಾಗೂ ಎರಡನೇ ಪಾಳಿ 4-9 ಪ್ರತ್ಯೇಕ | 6,000 | 5,000 | 1,080 | 12,080 | 24,160 |
ನಯನ ರಂಗಮಂದಿರ | ಮೊದಲ ಪಾಳಿ-9-2 ಹಾಗೂ ಎರಡನೇ ಪಾಳಿ 4-9 ಪ್ರತ್ಯೇಕ | 3,000 | 3,000 | 540 | 6,540 | 13,080 |
ಸಂಸ ಬಯಲು ರಂಗಮಂದಿರ | ಎರಡನೇ ಪಾಳಿ ಮಾತ್ರ | 1,000 | 1,000 | 180 | 2,180 | 4,360 |
ಆರ್ಟ್ ಗ್ಯಾಲರಿ | ಮೊದಲ ಪಾಳಿ-9-2 ಹಾಗೂ ಎರಡನೇ ಪಾಳಿ 4-9 ಪ್ರತ್ಯೇಕ | 500 | 500 | 90 | 1,090 | 2,180 |
ಮಹಿಳಾ ವಿಶ್ರಾಂತಿ ಕೊಠಡಿ | ಮೊದಲ ಪಾಳಿ-9-2 ಹಾಗೂ ಎರಡನೇ ಪಾಳಿ 4-9 ಪ್ರತ್ಯೇಕ | 500 | ಇಲ್ಲ | 90 | 590 | 1,180 |
ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯ(ನಾಟಕ) | ಮೊದಲ ಪಾಳಿ-9-2 ಹಾಗೂ ಎರಡನೇ ಪಾಳಿ 4-9 ಪ್ರತ್ಯೇಕ | 3,000 | 3,000 | 540 | 6,540 | 13,080 |
ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಛಯ(ಸಾಂಸ್ಕೃತಿಕ ಕಾರ್ಯಕ್ರಮ) | ಮೊದಲ ಪಾಳಿ-9-2 ಹಾಗೂ ಎರಡನೇ ಪಾಳಿ 4-9 ಪ್ರತ್ಯೇಕ | 4,000 | 4,000 | 720 | 8,720 | 17,440 |
ಕಲಾಗ್ರಾಮ ಬಯಲು ರಂಗಮಂದಿರ | 1,000 | 1,000 | 180 | 2,180 | 4,360 |