Site icon Vistara News

Congress Guarantee: ರಾಜ್ಯದ ಶೇ.96 ಜನರಿಗೆ ಗ್ಯಾರಂಟಿಗಳಿಂದ ಪ್ರಯೋಜನ: ಸಿದ್ದರಾಮಯ್ಯ ಹರ್ಷ

Siddaramaiah

ಬೆಂಗಳೂರು: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 6 ತಿಂಗಳುಗಳು ಪೂರೈಸಿದೆ. ಈ 6 ತಿಂಗಳ ಅವಧಿಯಲ್ಲಿ ಸರ್ಕಾರ ಜಾರಿಗೆ ಕೊಟ್ಟ ಗ್ಯಾರಂಟಿ ಯೋಜನೆಗಳ ಪ್ರತಿಫಲ, ಮಹಿಳೆಯರು, ಮಕ್ಕಳು, ಯುವಜನರು, ರೈತರು, ಕಾರ್ಮಿಕರು, ಶೋಷಿತರನ್ನು ಕೇಂದ್ರೀಕರಿಸಿ ರೂಪಿಸಿರುವ ಕಾರ್ಯಕ್ರಮಗಳು, ವಿಶೇಷವಾಗಿ ಗ್ಯಾರಂಟಿ ಯೋಜನೆಗಳಿಂದ (Congress Guarantee) ರಾಜ್ಯದ ಶೇ.96ಕ್ಕಿಂತ ಹೆಚ್ಚು ಮಂದಿ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಕಳೆದ 6 ತಿಂಗಳ ಅವಧಿಯಲ್ಲಿ ನಮ್ಮ ಸರ್ಕಾರದ ಯೋಜನೆಗಳ ಮೂಲಕ ನಾಡಿನ ಪ್ರತಿಯೊಬ್ಬರನ್ನೂ ತಲುಪುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ನಮ್ಮ ಈ ಪ್ರಯತ್ನದ ಫಲವಾಗಿ ಇಂದು ಪ್ರತಿ ಮನೆ ಮನೆಯಲ್ಲೂ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳನ್ನು ಕಾಣುವಂತಾಗಿರುವುದು ಅತ್ಯಂತ ಖುಷಿಯ ವಿಚಾರ. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಯನ್ನು ಸಮಾನವಾಗಿ ಮುನ್ನಡೆಸುವ ನಮ್ಮ ಕರ್ನಾಟಕ ಮಾದರಿ ಆಡಳಿತವೆಂಬ ನವ ಕಲ್ಪನೆ ಇಂದು ಇಡೀ ದೇಶಾದ್ಯಂತ ಮನ್ನಣೆ ಗಳಿಸಿದ್ದು, ಇತರೆ ರಾಜ್ಯಗಳು ಕೂಡ ನಮ್ಮನ್ನು ಅನುಸರಿಸುತ್ತಿರುವುದು ಹೆಮ್ಮೆ ಮೂಡಿಸಿದೆ. ಜಾತಿ, ಧರ್ಮ, ಲಿಂಗ ಭೇದವಿಲ್ಲದೆ ಸರ್ವರನ್ನೂ ಒಳಗೊಳ್ಳುವ ಸಮಾನ ಅವಕಾಶಗಳ ಸರ್ವತೋಮುಖ ಪ್ರಗತಿಯ ನಾಡು ಕಟ್ಟುವ ನಮ್ಮ ಕಾರ್ಯಕ್ಕೆ ನಿಮ್ಮ ಬೆಂಬಲವಿರಲಿ ಎಂದು ಮನವಿ ಮಾಡಿದ್ದಾರೆ.

ಶಕ್ತಿಯೋಜನೆಯಲ್ಲಿ 97.2 ಕೋಟಿಗೂ ಅಧಿಕ ಮಹಿಳೆಯರ ಪ್ರಯಾಣ

ಕಳೆದ 6 ತಿಂಗಳ ಅವಧಿಯಲ್ಲಿ ಶಕ್ತಿ ಯೋಜನೆಯಡಿ ನಾಡಿನ ಮಹಿಳೆಯರು ನಿತ್ಯ ಸರಾಸರಿ 60 ಲಕ್ಷದಂತೆ ಒಟ್ಟು 97.2 ಕೋಟಿಗೂ ಅಧಿಕ ಬಾರಿ ಉಚಿತ ಪ್ರಯಾಣ ಬೆಳೆಸಿದ್ದಾರೆ. ಈವರೆಗೆ ಒಟ್ಟು ರೂ. 2,303 ಕೋಟಿ ಮೊತ್ತದ ಉಚಿತ ಟಿಕೆಟ್ ವಿತರಿಸಲಾಗಿದೆ.

ಇದನ್ನೂ ಓದಿ | CM Siddaramaiah : ಬಿಜೆಪಿ ಚುನಾವಣಾ ಗ್ಯಾರಂಟಿ ಯಾರೂ ನಂಬಲ್ಲ ಎಂದ ಸಿದ್ದರಾಮಯ್ಯ

ಗೃಹ ಲಕ್ಷ್ಮಿ ಯೋಜನೆಯಲ್ಲಿ 99.52 ಲಕ್ಷ ಮಹಿಳೆಯರ ಖಾತೆಗೆ ಹಣ

ಬಿಪಿಎಲ್‌, ಎಪಿಎಲ್‌, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಯಜಮಾನಿಗೆ ಮಾಸಿಕ ರೂ. 2,000 ಧನಸಹಾಯ ನೀಡುವ ಗೃಹ ಲಕ್ಷ್ಮಿ ಯೋಜನೆಯಲ್ಲಿ 99.52 ಲಕ್ಷ ನೋಂದಾಯಿತ ಮಹಿಳೆಯರ ಖಾತೆಗೆ ಹಣದ ವರ್ಗಾವಣೆಯಾಗಿದೆ. 17,500 ಕೋಟಿ ರೂ. ಅನುದಾನ ಮೀಸಲು ಇಟ್ಟಿದ್ದು, ಈವರೆಗೆ ರೂ. 11,200 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ. ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.

ಗೃಹ ಜ್ಯೋತಿ ಯೋಜನೆ

ಪ್ರತಿ ಮನೆಗೆ 200 ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಗೃಹ ಜ್ಯೋತಿ ಯೋಜನೆಯಲ್ಲಿ 1.56 ಕೋಟಿಗೂ ಅಧಿಕ ಕುಟುಂಬಗಳಿಗೆ ಅನುಕೂಲವಾಗಿದ್ದು, ಕಳೆದ 3 ತಿಂಗಳ ಅವಧಿಯಲ್ಲಿ ಈ ಯೋಜನೆಗಾಗಿ ರೂ. 2,152 ಕೋಟಿ ಅನುದಾನ ಬಿಡುಗಡೆ.

ಅನ್ನಭಾಗ್ಯ ಯೋಜನೆ

ಅನ್ನಭಾಗ್ಯ ಯೋಜನೆಯಲ್ಲಿ ಬಡವರಿಗೆ ಪ್ರತಿ ತಿಂಗಳು ತಲಾ 10 ಅಕ್ಕಿ ನೀಡುವ ಉದ್ದೇಶ ಅನ್ನಭಾಗ್ಯ ಯೋಜನೆಯದ್ದಾಗಿದೆ. ಇದೀಗ 5 ಕೆಜಿ ಆಹಾರ ಧಾನ್ಯ ಬದಲಾಗಿ 170 ರೂ. ಹಣವನ್ನು ಪರಿತೃ ಚೀಟಿದಾರರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ಉದ್ದೇಶಕ್ಕಾಗಿ ಒಟ್ಟು ರೂ. 2,444 ಕೋಟಿ ಹಣವನ್ನು ವಿನಿಯೋಗಿಸಲಾಗಿದೆ.

ಇದನ್ನೂ ಓದಿ | ವಿಧಾನಸೌಧ ರೌಂಡ್ಸ್: ಅಶೋಕ್‌ ವಿಪಕ್ಷ ನಾಯಕರಾಗಿದ್ದರಿಂದ ಸಿದ್ದರಾಮಯ್ಯಗೆ ಖುಷಿ! ಸರ್ಕಾರಕ್ಕೆ ಕಾದಿದೆ ಅಧಿವೇಶನದ ಬಿಸಿ

ಯುವನಿಧಿ ಯೋಜನೆ

ನಿರುದ್ಯೋಗಿ ಯುವಕ, ಯುವತಿಯರಿಗೆ ಮಾಸಿಕ ಭತ್ಯೆ ನೀಡುವ ಯುವನಿಧಿ ಯೋಜನೆಯಲ್ಲಿ ಪದವೀಧರರಿಗೆ ಪ್ರತಿ ತಿಂಗಳು 3,000 ರೂ. ಡಿಪ್ಲೊಮಾ ಪದವೀಧರರಿಗೆ 1500 ರೂ. ನೀಡುವ ಮೂಲಕ 4.5 ಲಕ್ಷ ಯುವ ಜನರಿಗೆ ನೆರವಾಗುವ ಉದ್ದೇಶವನ್ನು ಸರ್ಕಾರ ಹೊಂದಿದೆ.

Exit mobile version