Site icon Vistara News

Nalin Kumar Kateel : ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಮನೆಯಲ್ಲಿ ಹೋಮ; ಏನಿದರ ರಹಸ್ಯ?

Nalin kumar Kateel homa

#image_title

ಪುತ್ತೂರು (ದಕ್ಷಿಣ ಕನ್ನಡ): ಬಿಜೆಪಿ ರಾಜ್ಯಾಧ್ಯಕ್ಷರಾದ ಮಂಗಳೂರು ಸಂಸದ ನಳಿನ್‌ ಕುಮಾರ್‌ ಕಟೀಲ್‌ (Nalin kumar Kateel) ಅವರ ಪುತ್ತೂರು ಸಮೀಪದ ಸವಣೂರಿನ ಮನೆಯಲ್ಲಿ ವಿಶೇಷ ಹವನವೊಂದು (Special Homa) ನಡೆಯುತ್ತಿದೆ. ಜೂ.11ರಂದು ಪ್ರಾರಂಭವಾಗಿರುವ ಈ ಹೋಮ ಸುಮಾರು 9 ದಿನಗಳ ಕಾಲ ನಡೆದು ಜೂ.18ಕ್ಕೆ ಪೂರ್ಣಾಹುತಿಯಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ನಿರಂತರ 9 ದಿನಗಳ ಕಾಲ ನಡೆಯುವ ಈ ಹೋಮದ ನೇತೃತ್ವವನ್ನು ವಿದ್ವಾನ್ ಬಾಲಕೃಷ್ಣ ಕಾರಂತ್ ವಹಿಸಿದ್ದಾರೆ ಎನ್ನಲಾಗಿದೆ. ಅತ್ಯಂತ ಗೌಪ್ಯವಾಗಿ ಈ ಹವನವನ್ನು ನಡೆಸಲಾಗುತ್ತಿದ್ದು, ಯಾವ ಉದ್ದೇಶ ಪ್ರಾಪ್ತಿಗಾಗಿ ಈ ಹೋಮ ನಡೆಸಲಾಗುತ್ತಿದೆ ಎಂಬ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ.

Secret homa at BJP State president Nalin kumar Kateels hometown

ಒಳಗೆ ನಡೆಸಲಾಗುತ್ತಿರುವ ಧಾರ್ಮಿಕ ಕಾರ್ಯಕ್ರಮದ ವಿವರ ಹೊರ ಹೋಗಬಾರದೆಂಬ ಉದ್ದೇಶದಿಂದ ಜಮೀನಿನ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಿ ರಹಸ್ಯವನ್ನು ಕಾಪಾಡಲಾಗಿದೆ. ಇದು ಸ್ಥಳೀಯರಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಧಾರ್ಮಿಕ ಕಾರ್ಯಕ್ರಮಗಳು ನಡೆಯುವಾಗ ಅಕ್ಕ ಪಕ್ಕದ ಮನೆಯವರಿಗೆ ಹಾಗೂ ನೆಂಟರಿಷ್ಟರಿಗೆ ಹೇಳಿ ಮಾಡುವುದು ವಾಡಿಕೆಯಾಗಿರುವಾಗ ಬಚ್ಚಿಟ್ಟು ಮಾಡುತ್ತಿರುವುದು ಯಾಕೆ ಎನ್ನುವುದು ಸ್ಥಳೀಯರ ಕೌತುಕಕ್ಕೆ ಕಾರಣವಾಗಿರುವ ಪ್ರಮುಖಾಂಶ.

ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿದೆ. ಪಕ್ಷದ ಪ್ರಮುಖ ನಾಯಕರುಗಳ ತಪ್ಪುಗಳು, ಎಡವಟ್ಟು ನಿರ್ಣಯಗಳು, ಅಹಂಕಾರ ಪ್ರವೃತ್ತಿ ಸೋಲಿಗೆ ಕಾರಣವೆಂಬ ಆಕ್ರೋಶ ಪಕ್ಷದ ಕಾರ್ಯಕರ್ತರಲ್ಲಿದೆ. ಪಕ್ಷದ ನಾಯಕತ್ವದಲ್ಲಿ ಅಮೂಲಾಗ್ರ ಪರಿವರ್ತನೆ ಮಾಡುವ ಮೂಲಕ ಪಕ್ಷನ್ನು ಲೋಕ ಸಭೆ ಚುನಾವಣೆಗೆ ಸಿದ್ಧಗೊಳಿಸಬೇಕು ಎಂಬ ಅಗ್ರಹವು ಕಾರ್ಯಕರ್ತರ ವಲಯದಿಂದ ಕೇಳಿ ಬರುತ್ತಿದೆ. ಈ ಕುರಿತ ಅಭಿಯಾನ ಸಾಮಾಜಿಕ ಜಾಲತಾಣದಲ್ಲೂ ನಡೆಯುತ್ತಿದೆ.

ಇದರ ನಡುವೆ ನಳಿನ್ ಕುಮಾರ್ ಕಟೀಲ್ ಅವರಿಗೆ ಈ ಬಾರಿ ಮಂಗಳೂರು ಲೋಕಸಭಾ ಟಿಕೇಟ್ ನೀಡಬಾರದು ಎಂಬ ಚರ್ಚೆಯೂ ನಡೆಯುತ್ತಿದೆ. ಇದೆಲ್ಲದರ ನಡುವೆ ಹೋಮ ನಡೆಯುತ್ತಿದೆ. ನಳಿನ್‌ ಕುಮಾರ್‌ ಕಟೀಲ್‌ ಅವರು ಪಕ್ಷದಲ್ಲಿ ತಮ್ಮ ಸ್ಥಾನಮಾನಕ್ಕೆ ಸಂಚಕಾರ ಬಾರದಿರಲಿ, ಲೋಕಸಭಾ ಟಿಕೆಟ್‌ಗೆ ಕಂಟಕ ಬಾರದಿರಲಿ ಎಂಬ ಕಾರಣಕ್ಕಾಗಿ ಹೋಮ ನಡೆಸುತ್ತಿದ್ದಾರಾ ಎಂಬ ಚರ್ಚೆಯೂ ನಡೆಯುತ್ತಿದೆ.

ಇದನ್ನೂ ಓದಿ : ಸಂಪುಟ ಸಭೆ ನಿರ್ಧಾರ: ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದು ನಿಶ್ಚಿತ; ʼಬಿಜೆಪಿʼ ಪಠ್ಯ ತೆಗೆಯುವುದು ಖಚಿತ

Exit mobile version