ಮಂಡ್ಯ: ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಮೂಡಲು ಬಾಗಿಲ ಆಂಜನೇಯ ಸ್ವಾಮಿ ದೇವಸ್ಥಾನ ಕೆಡವಿ ಜಾಮಿಯಾ ಮಸೀದಿ ಕಟ್ಟಲಾಗಿದೆ. ಅಲ್ಲಿ ವಿಡಿಯೋಗ್ರಫಿ ಸಮೀಕ್ಷೆ ನಡೆಸಬೇಕು, ಹಿಂದೂಗಳಿಗೆ ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮತ್ತು ಹಲವು ಹಿಂದೂ ಪರ ಸಂಘಟನೆಗಳು ಆಗ್ರಹಿಸುತ್ತಿವೆ. ಇದೇ ಕಾರಣಕ್ಕೆ ಜೂ.4ರಂದು ಶ್ರೀರಂಗಪಟ್ಟಣ ಚಲೋ ನಡೆಸಿದ್ದಲ್ಲದೆ, ಜೂ.30ರೊಳಗೆ ಮಸೀದಿಯಲ್ಲಿರುವ ಮದರಸಾ ತೆರವುಗೊಳಿಸದೆ ಇದ್ದರೆ ಮತ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿವೆ. ಇದೇ ಹೊತ್ತಲ್ಲಿ, ಈ ಜಾಮಿಯಾ ಮಸೀದಿ ವಿವಾದಕ್ಕೆ ಒಂದು ಬಿಗ್ ಟ್ವಿಸ್ಟ್ ಸಿಕ್ಕಿದೆ.
ಜಾಮಿಯಾ ಮಸೀದಿ ವಿವಾದ ಇಂದು-ನಿನ್ನೆಯದಲ್ಲ, ಇದು 18-20ವರ್ಷಗಳ ಹಿಂದಿನಿಂದಲೂ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಅದಕ್ಕೆ ದಾಖಲೆಯೂ ಸಿಕ್ಕಿದೆ. ಜಾಮಿಯಾ ಮಸೀದಿ ಇದ್ದಲ್ಲಿ ಹಿಂದು ದೇವಾಲಯವಿತ್ತು. ಆದರೆ ಅದಿತ್ತು ಎಂಬುದಕ್ಕೆ ಇದ್ದ ಕುರುಹನ್ನು ಮುಚ್ಚು ಹಾಕುವ ಪ್ರಯತ್ನ ನಡೆಯುತ್ತಿದ್ದು ಅದನ್ನು ತಡೆಯಬೇಕು ಎಂದು 2004 ರಲ್ಲಿ ಬಜರಂಗದಳದ ಮುಖಂಡ ಗಿರೀಶ್ ಮತ್ತು ವಿಶ್ವ ಹಿಂದೂಪರಿಷತ್‌ನ ಅಂದಿನ ಜಿಲ್ಲಾ ಪ್ರಮುಖ್ ಆಗಿದ್ದ ಭಾಸ್ಕರ್ ಎಂಬುವರು ವಕೀಲ ಸಿ.ವಿ.ಕೇಶವ ಮೂರ್ತಿ ಮೂಲಕ ಪುರಾತತ್ವ ಇಲಾಖೆ, ಕೇಂದ್ರ ಸಂಸ್ಕೃತಿ ಸಚಿವಾಲಯ, ಅಂದಿನ ಜಿಲ್ಲಾಧಿಕಾರಿ ಸೇರಿ ಹಲವರಿಗೆ ಲೀಗಲ್ ನೋಟಿಸ್ ಕಳಿಸಿದ್ದರು. ಆ ನೋಟಿಸ್ ಪ್ರತಿ ಈಗ ಲಭ್ಯವಾಗಿದೆ.
ʼಈಗೊಂದು 20 ವರ್ಷಗಳ ಹಿಂದೆ ಮಸೀದಿಯಲ್ಲಿ ಇದ್ದ ಹಿಂದೂ ದೇವಾಲಯದ ಕುರುಹನ್ನು ಸಿಮೆಂಟ್ ಹಾಕಿ ಮುಚ್ಚುವ ಪ್ರಯತ್ನ ಮಾಡಲಾಗಿತ್ತು. ಆಗ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಿ ತಡೆಯಲಾಗಿತ್ತು. ಬಳಿಕ ಕಾನೂನು ಹೋರಾಟ ಕೈಗೆತ್ತಿಕೊಂಡು ನೋಟಿಸ್ ಕಳಿಸಲಾಗಿತ್ತು. ಅಕ್ರಮ ಮದರಸ ನಡೆಸುತ್ತಿರುವ ಬಗ್ಗೆಯೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಅಧಿಕಾರಿಗಳು ಮಸೀದಿಯೊಳಗೆ ನಡೆಯುತ್ತಿರುವ ಮದರಸಾವನ್ನು ನಿಲ್ಲಿಸುತ್ತೇವೆ ಎಂದಿದ್ದರು. ಆದರೆ ಇದುವರೆಗೂ ಅದು ಆಗಲಿಲ್ಲʼ ಎಂದು ಗಿರೀಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಶ್ರೀರಂಗಪಟ್ಟಣ ಚಲೋ ತಡೆಗೆ ಪೊಲೀಸ್ ಸರ್ಪಗಾವಲು, ಪ್ರತಿಭಟನೆ ಮಾಡೇ ತೀರ್ತಾರಂತೆ ಹಿಂದೂ ಕಾರ್ಯಕರ್ತರು
ವಿಡಿಯೋ ಸತ್ಯ ಬಯಲು
ಶ್ರೀರಂಗಪಟ್ಟಣದಲ್ಲಿ ಹಿಂದೂಪರ ಸಂಘಟನೆಗಳು ಅಕ್ಷರಶಃ ಉಗ್ರರೂಪ ತಾಳಿವೆ. ಅಲ್ಲಿ ನಿಷೇಧಾಜ್ಞೆ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ನಿನ್ನೆ ಅವರಿಗೆ ಶ್ರೀರಂಗಪಟ್ಟಣಕ್ಕೆ ಪ್ರವೇಶ ಸಿಗಲಿಲ್ಲ. ಕಿರಂಗೂರು ಸರ್ಕಲ್ ಬಳಿಯೇ ತಾತ್ಕಾಲಿಕವಾಗಿ ಆಂಜನೇಯ ಸ್ವಾಮಿ ಪ್ರತಿಮೆ ಪ್ರತಿಷ್ಠಾಪಿಸಿ, ಪೂಜೆ ಮಾಡಿ ಪ್ರತಿಭಟನೆ ಮಾಡಿದ್ದಾರೆ. ಅದರ ಬೆನ್ನಲ್ಲೇ ಒಂದಷ್ಟು ಹಿಂದುಗಳು ಜಾಮಿಯಾ ಮಸೀದಿಗೆ ಹೋಗಿ ಅಲ್ಲಿ ಹನುಮನ ಜಪ ಮಾಡಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು. ಜೂ.4ರಂದು ಶ್ರೀರಂಗಪಟ್ಟಣ ಚಲೋ ನಡೆದ ದಿನವೇ ಹಿಂದು ಸಂಘಟನೆಗಳು ಈ ವಿಡಿಯೋ ಹರಿಬಿಟ್ಟಿದ್ದವು. ವಿಡಿಯೋ ನೋಡಿದ ಅನೇಕರು, ಶ್ರೀರಂಗಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದರೂ, ಅದು ಹೇಗೆ ಇವರೆಲ್ಲ ಮಸೀದಿ ಪ್ರವೇಶಿಸಿ ಜಪ ಮಾಡಿದರು ಎಂದು ಪ್ರಶ್ನಿಸಿದ್ದರು. ಆ ಗೊಂದಲಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ತೆರೆ ಎಳೆದಿದ್ದಾರೆ. ಈ ಮೂಲಕ ವೈರಲ್ ವಿಡಿಯೋದ ಹಿಂದಿನ ಸತ್ಯ ಹೊರಬಿದ್ದಿದೆ.
ಶ್ರೀರಂಗಪಟ್ಟಣ ಚಲೋ ವೇಳೆ ಮಸೀದಿಯನ್ನು ಯಾರೂ ಪ್ರವೇಶ ಮಾಡಲಿಲ್ಲ. ಹಿಂದೂ ಸಂಘಟನೆಗಳಿಗೆ ಸೇರಿದ ಮೂವರು ಕಾರ್ಯಕರ್ತರು ಜೂ.3 ರಂದು ಸಂಜೆ 4ಗಂಟೆ ಹೊತ್ತಿಗೆ ಜಾಮಿಯಾ ಮಸೀದಿಗೆ ಹೋಗಿ ಭಜನೆ ಮಾಡಿದ್ದಾರೆ. ಅವರು ಮಸೀದಿಯೊಳಕ್ಕೆ ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ನಾವು ಜೂ.3 ರ ಸಂಜೆ ಆರು ಗಂಟೆಗೆ ನಿಷೇಧಾಜ್ಞೆ ಹೇರಿದ್ದೇವೆ ಮತ್ತು ಅದಾದ ಮೇಲೆ ಯಾವುದೇ ಅಹಿತಕರ ಘಟನೆಗಳು ಇಲ್ಲಿ ನಡೆಯಲಿಲ್ಲ ಎಂದು ಪೊಲೀಸ್ ಅಧಿಕಾರಿ ಯತೀಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶ್ರೀರಂಗಪಟ್ಟಣ ಮಸೀದಿ ವಿವಾದ; ಮದರಸಾ ತೆರವಿಗೆ ಡೆಡ್‌ಲೈನ್ ಕೊಟ್ಟ ಹಿಂದೂ ಪರ ಸಂಘಟನೆಗಳು