ಮಂಗಳೂರು: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ (ಜೂನ್ 27) ರಾತ್ರಿ ಮದರಸದಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು ಎನ್ನಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಕಾಟಿಪಳ್ಳ ಅರನೇ ಬ್ಲಾಕ್‌ನಲ್ಲಿರುವ ಮದರಸದಿಂದ ಮನೆಗೆ ತೆರಳುತ್ತಿದ್ದಾಗ, ಮಾರ್ಗ ಮಧ್ಯೆ ಚಕ್ರವರ್ತಿ ಮೈದಾನದ ಸಮೀಪ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು ಬಾಲಕ ಶಯಾನ್ ತಿಳಿಸಿದ್ದ. ಬಾಲಕನ ಮಾತನ್ನು ನಂಬಿದ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕೋಮು ಸೂಕ್ಷ್ಮ ವಿಚಾರವೂ ಆಗಬಹುದಾಗಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಭಯಾನಕ ಸತ್ಯವೊಂದು ಬೆಳಕಿಗೆ ಬಂದಿದೆ.
ಇದನ್ನೂ ಓದಿ | 11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಕೇರಳದ ಮದರಸಾ ಶಿಕ್ಷಕ, 67 ವರ್ಷ ಜೈಲು ಶಿಕ್ಷೆ
ಬಾಲಕ ಶಯಾನ್ ತನ್ನ ಶರ್ಟ್ ತಾನೇ ಹರಿದು ಹಾಕಿಕೊಳ್ಳವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತು ಬಾಲಕನನ್ನು ಪೊಲೀಸರು ವಿಚಾರಿಸಿದಾಗ, ಸತ್ಯ ಬಾಯಿ ಬಿಟ್ಟಿದ್ದಾನೆ. ಕಲಿಕೆಯಲ್ಲಿ ಹಿಂದೆ ಇದ್ದು, ಗೆಳೆಯರ ಕೊರತೆ ಜತೆಗೆ ಮನೆಯವರೂ ನಿರ್ಲಕ್ಷಿಸುತ್ತಿದ್ದರು. ತನ್ನ ಕಡೆ ಎಲ್ಲರ ಗಮನ ಬರಲಿ ಎನ್ನುವ ಕಾರಣಕ್ಕೆ ಹೀಗೆ ಮಾಡಿರುವುದಾಗಿ ಶಯಾನ್ ಒಪ್ಪಿಕೊಂಡಿದ್ದಾನೆ.
ʻಶಾಲೆಯಲ್ಲಿ ತನ್ನ ಬ್ಯಾಗಿನಲ್ಲಿದ್ದ ಪೆನ್ನಿನ್ನಿಂದ ಶರ್ಟ್ ಹರಿದುಕೊಂಡಿದ್ದಾನೆ. ಸಾಕ್ಷಿಗಳು ಕೂಡ ನಮಗೆ ದೊರೆತಿವೆ. ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ ಹಬ್ಬಿಸುವ ರೀತಿಯಲ್ಲಿ ಈ ಪ್ರಕರಣ ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು. ಅಧಿಕಾರಿಗಳು ಮುತುವರ್ಜಿ ವಹಿಸಿ ಪ್ರಕರಣವನ್ನು ಪರಿಶೀಲನೆ ನಡೆಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಮದರಸದಿಂದ ಮನೆಗೆ ತೆರಳುತ್ತಿದ್ದ ಬಾಲಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ