ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಜನಾದೇಶ ಸ್ಪಷ್ಟವಾಗಿದೆ. ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂದು ಎಕ್ಸಿಟ್ ಪೋಲ್‌ಗಳು ಹೇಳಿದ್ದವು. ಅದನ್ನೂ ನಿಜವಾಗಿಸಿ, ಅದನ್ನೂ ಮೀರಿಸಿ ಹೆಚ್ಚಿನ ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಲು ಅಗತ್ಯವಾದ ಬಹುಮತವನ್ನು ಕಾಂಗ್ರೆಸ್ ಪಡೆದಿದೆ. ಇದರಿಂದಾಗಿ, ಅತಂತ್ರ ಸರ್ಕಾರ ರಚನೆಯಾಗಬಹುದು ಎಂಬ ಆತಂಕ ದೂರವಾಗಿದೆ. ಕಳೆದ ಸಲ ಉಂಟಾದಂಥ ಅಸ್ಥಿರತೆ, ಪಕ್ಷಾಂತರಗಳು, ಅದನ್ನು ಹಿಂಬಾಲಿಸಿ ನಡೆದ ಉಪಚುನಾವಣೆಗಳು, ಮಧ್ಯಂತರದಲ್ಲಿ ಚುನಾವಣೆಯ ವ್ಯರ್ಥ ಖರ್ಚುವೆಚ್ಚಗಳು ಈ ಸಲ ಇಲ್ಲ ಎಂಬುದು ಸಂತೋಷದ ಅಂಶ. ಈ ಫಲಿತಾಂಶದ ಮೂಲಕ ನಾಡಿನ ಮತದಾರ ಹಲವು ಸಂದೇಶಗಳನ್ನು ಮೂರೂ ಪ್ರಮುಖ ಪಕ್ಷಗಳಿಗೆ ರವಾನಿಸಿದ್ದಾನೆ.
ಮುಖ್ಯವಾಗಿ, ಆಡಳಿತದಲ್ಲಿದ್ದ ಬಿಜೆಪಿಗೆ ಕಹಿಯಾದ ಸಂದೇಶ ರವಾನೆಯಾಗಿದೆ. ನಾಲ್ಕು ವರ್ಷದ ಹಿಂದೆ ಬಿಜೆಪಿ ಅಡ್ಡಬಾಗಿಲಿನಿಂದ ಅಧಿಕಾರ ಹಿಡಿದಿತ್ತು. ಇದಕ್ಕಾಗಿ ಪ್ರತಿಪಕ್ಷಗಳ ಹತ್ತಾರು ಶಾಸಕರನ್ನು ತನ್ನ ಕಡೆಗೆ ಸೆಳೆದುಕೊಂಡಿತ್ತು. ಉಪಚುನಾವಣೆಯಲ್ಲಿ ಅವರಲ್ಲಿ ಹೆಚ್ಚಿನವರನ್ನು ಮತದಾರ ಗೆಲ್ಲಿಸಿದ್ದ; ಆದರೆ ಈ ಬಾರಿ ಅವರಲ್ಲಿ ಹೆಚ್ಚಿನವರನ್ನು ಮನೆಗೆ ಕಳಿಸಿ ತಕ್ಕ ಪಾಠ ಕಲಿಸಿದ್ದಾನೆ. ಬಿಜೆಪಿ ಕೂಡ ಸ್ಥಿರ ಪಾರದರ್ಶಕ ಆಡಳಿತ, ಅಭಿವೃದ್ಧಿ ಕಾರ್ಯಗಳ ಮೂಲಕ ಚುನಾವಣೆ ಎದುರಿಸಬೇಕಿತ್ತು. ಆದರೆ ಧಾರ್ಮಿಕ, ಮತೀಯ ವಿಚಾರಗಳನ್ನು ಹೆಚ್ಚಾಗಿ ನೆಚ್ಚಿಕೊಂಡಿತು. ಇದು ಫಲ ನೀಡಲಿಲ್ಲ ಮಾತ್ರವಲ್ಲ, ತಿರುಗೇಟಾಗಿಯೂ ವರ್ತಿಸಿತು. ಉರಿಗೌಡ- ನಂಜೇಗೌಡ, ನಂದಿನಿ-ಅಮುಲ್ ಮುಂತಾದ ವಿಚಾರಗಳು ಪಕ್ಷಕ್ಕೆ ಘನತೆ ತರಲಿಲ್ಲ. ಪಕ್ಷದ ರಾಜ್ಯದ ನಾಯಕತ್ವ ಹಾಗೂ ಹೈಕಮಾಂಡ್ ನಡುವೆ ಸಮನ್ವಯ ಇರಲಿಲ್ಲ. ಹೈಕಮಾಂಡ್ ಮುಖ್ಯಸ್ಥರು ರಾಜ್ಯದ ಮೇಲೆ ತಮ್ಮದೇ ವಿಚಾರಗಳನ್ನು ಹೇರಲು ಮುಂದಾದರು. ಇದನ್ನು ಕಾರ್ಯಕರ್ತರು ಸಹಿಸಲಿಲ್ಲ. ಹಲವು ದಶಕಗಳಿಂದ ಜನಮಾನಸದಲ್ಲಿ ಪ್ರತಿಷ್ಠಾಪಿತರಾದ ನಾಯಕರನ್ನು ಬಿಟ್ಟು ಹೊಸಬರಿಗೆ ಟಿಕೆಟ್ ನೀಡಲು ಮುಂದಾದದ್ದು ಕೂಡ ಋಣಾತ್ಮಕವಾಯಿತು.
ಅತ್ತ ಕಾಂಗ್ರೆಸ್ ಕಳೆದ ಎರಡು ವರ್ಷಗಳಿಂದ ಆಕ್ರಮಣಕಾರಿಯಾಗಿ, ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಾಚರಿಸಿತು. ರಾಜ್ಯ ಸರ್ಕಾರದ ಮೇಲೆ ಬಂದ ಶೇಕಡಾ ನಲುವತ್ತು ಕಮಿಷನ್ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಸಮರ್ಥವಾಗಿ ತನ್ನ ಆಯುಧವಾಗಿ ಉಪಯೋಗಿಸಿಕೊಂಡಿತು. ರಾಜ್ಯದ ಮೂಲೆಮೂಲೆಗೂ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ತಲುಪಿಸಿತು. ಬಿಜೆಪಿ ಅಭಿವೃದ್ಧಿ ವಿಚಾರವನ್ನು ಬಿಟ್ಟು ಭಾವನಾತ್ಮಕ ರಾಜಕೀಯವನ್ನು ಮಾಡುತ್ತಿದೆ ಎಂದು ಮನದಟ್ಟು ಮಾಡಿಸಿತು. ಸರ್ಕಾರದ ಹಲವು ಸಚಿವರೇ ಸೋತುದರಲ್ಲಿ, ಅವರ ವಿಫಲ ಕಾರ್ಯವೈಖರಿಯ ಬಗ್ಗೆ ಗಮನ ಸೆಳೆಯಲು ಕಾಂಗ್ರೆಸ್ ಸಫಲವಾದದ್ದೇ ಕಾರಣ. ಕೊನೆಯ ಕ್ಷಣದಲ್ಲಿ ಬಂದ ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿ ಕೂಡ ಬಿಜೆಪಿ ಪರವಾಗಿ ಕೆಲಸ ಮಾಡಲಿಲ್ಲ. ಅತ್ತ ಭಾರತ್ ಜೋಡೋ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಕೆಲವಷ್ಟಾದರೂ ಮನಸ್ಸುಗಳನ್ನು ಸೆಳೆಯಲು ಸಫಲರಾದರು. ತನ್ನಲ್ಲಿದ್ದ ನಾಯಕತ್ವದ ಎಲ್ಲ ಬಿಕ್ಕಟ್ಟುಗಳನ್ನು ಬದಿಗಿಟ್ಟುಕೊಂಡು ಸಂಘಟನಾತ್ಮಕವಾಗಿ ಕೆಲಸ ಮಾಡಿದ ಕಾಂಗ್ರೆಸ್ ಈ ಗೆಲುವಿಗೆ ಅರ್ಹವಾಗಿದೆ.
ಇದನ್ನೂ ಓದಿ : Karnataka Election results 2023: ಕಾಂಗ್ರೆಸ್ ಸುನಾಮಿಯಲ್ಲಿ ಕೊಚ್ಚಿ ಹೋದ ಬಿಜೆಪಿ, ಕೈಗೆ ಅಧಿಕಾರ ಗದ್ದುಗೆ
ಆದರೆ ಕಾಂಗ್ರೆಸ್ ಈ ಗೆಲುವಿನ ಅಮಲಿನ ಅಲೆಯಲ್ಲಿ ತೇಲಬಾರದು. ಕಾಂಗ್ರೆಸ್ ಹಲವಾರು ಉಚಿತಗಳನ್ನು, ಗ್ಯಾರಂಟಿಗಳನ್ನು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಅವುಗಳನ್ನು ಈಡೇರಿಸಲು ಪ್ರಯತ್ನ ಮಾಡದಿದ್ದರೆ ಅವು ಬಾಯಿ ಬಡಾಯಿಗಳೆನಿಸಿಕೊಳ್ಳುವುದು ಖಚಿತ. ಈ ಪ್ರಯತ್ನದಲ್ಲಿ ರಾಜ್ಯದ ಬೊಕ್ಕಸಕ್ಕೆ ಹೊರೆಯನ್ನೂ ಸೃಷ್ಟಿಸಬಾರದು. ಕೇಂದ್ರದ ಬಿಜೆಪಿ ಸರ್ಕಾರದ ಜತೆ ಸಮನ್ವಯವನ್ನೂ ಸಾಧಿಸಿಕೊಂಡು ರಾಜ್ಯದ ಪ್ರಗತಿಗೆ ದುಡಿಯಬೇಕಿರುವುದು ಅಗತ್ಯ. ಇತ್ತ ಸೋತಿರುವ ಬಿಜೆಪಿಗೆ ಸಹಜವಾಗಿಯೇ ಇದು ಆತ್ಮಾವಲೋಕನದ ಕಾಲ. ಕೇಂದ್ರದಲ್ಲಿ ಮೋದಿಯವರಂತಹ ಸಮರ್ಥ ನಾಯಕತ್ವ ಇದ್ದಾಗ್ಯೂ ರಾಜ್ಯದಲ್ಲಿ ಈ ಪರಿಸ್ಥಿತಿ ಯಾಕೆ ಎಂಬುದನ್ನು ನಾಯಕರು ತಮಗೆ ತಾವೇ ಕೇಳಿಕೊಳ್ಳಬೇಕು. ಕರ್ನಾಟಕದ ಮತದಾರರು ಐದು ವರ್ಷಕ್ಕೊಮ್ಮೆ ಸರ್ಕಾರವನ್ನು ಬದಲಿಸುವ ಇತಿಹಾಸವನ್ನು ಹೊಂದಿದ್ದಾರೆ. ಹೀಗಾಗಿ ಅಧಿಕಾರದಲ್ಲಿರುವ ಪಕ್ಷ ಎಷ್ಟು ಎಚ್ಚರವಿದ್ದರೂ ಸಾಲದು.
ಕೇಂದ್ರದ ಬಿಜೆಪಿ ನಾಯಕರು ಹಾಗೂ ರಾಜ್ಯದ ನಾಯಕರು ಆಗಾಗ ʼಡಬಲ್ ಇಂಜಿನ್ ಸರ್ಕಾರʼದ ಮಾತುಗಳನ್ನು ಆಡುತ್ತಿರುತ್ತಾರೆ. ಡಬಲ್ ಇಂಜಿನ್ ಸರ್ಕಾರ ಎಂಬುದು ಪ್ರಗತಿಗೆ ಅನಿವಾರ್ಯವಾದುದೇನೂ ಅಲ್ಲ. ಮುಖ್ಯವಾಗಿ ಇರಬೇಕಾದುದು ಕೇಂದ್ರ- ರಾಜ್ಯ ಸರ್ಕಾರಗಳ ಸಮನ್ವಯ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಮುನ್ನಡೆದರೆ ಆಡಳಿತ ಸುಸೂತ್ರa