Site icon Vistara News

ಚಿತ್ರದುರ್ಗ ಮುರುಘಾಮಠ ಆವರಣದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗು ಪತ್ತೆ; ಅನಧಿಕೃತ ಪೋಷಣೆ ಆರೋಪ

madilu murugamat

ಚಿತ್ರದುರ್ಗ: ಮುರುಘಾ ಮಠಕ್ಕೆ ಸಂಬಂಧಪಟ್ಟಂತೆ ಒಂದಿಲ್ಲೊಂದು ವಿವಾದಗಳು ಉಂಟಾಗುತ್ತಲೇ ಇದ್ದು, ಈಗ ಶ್ರೀಮಠದಲ್ಲಿ ನಾಲ್ಕೂವರೆ ವರ್ಷದ ಹೆಣ್ಣು ಮಗುವೊಂದು ಪತ್ತೆಯಾಗಿರುವ ವರದಿಯಾಗಿದೆ. ಈ ಮಗುವನ್ನು ಅನಧಿಕೃತವಾಗಿ ಇಟ್ಟುಕೊಳ್ಳಲಾಗಿದೆ ಎಂದು ಆರೋಪ ಕೇಳಿಬಂದಿದ್ದು, ಯಾರ ಮಗು? ಇಲ್ಲಿಗೆ ಯಾರು ತಂದು ಬಿಟ್ಟರು? ಇಷ್ಟು ದಿನ ಯಾಕೆ ಈ ವಿಷಯವನ್ನು ಗೌಪ್ಯವಾಗಿಡಲಾಗಿದೆ? ಅಧಿಕಾರಿಗಳು ಪತ್ರಿಕಾ ಜಾಹೀರಾತಿಗಷ್ಟೇ ಸೀಮಿತವಾದರೇ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

ಬಾಲಕಿ ಚಿಗುರು

ಈ ಹೆಣ್ಣು ಮಗುವು ಬಹಳ ಸಮಯದಿಂದ ಮುರುಘಾ ಮಠದಲ್ಲಿದೆ ಎಂದು ಹೇಳಲಾಗಿದೆ. ಅಲ್ಲಿಯೇ ವಸತಿ, ಆರೈಕೆಯ ವ್ಯವಸ್ಥೆಯನ್ನು ಇದಕ್ಕೆ ಮಾಡಲಾಗಿದ್ದು, ಇದು ಬೃಹನ್ಮಠದಲ್ಲಿ ವೀಣಾ ಎಂಬುವವರ ಸುಪರ್ದಿಯಲ್ಲಿತ್ತು. ಮಠದ ಆವರಣದಲ್ಲಿಯೇ ಇರುವ “ಮಡಿಲು” ಸಂಸ್ಥೆಗೂ ಸೇರ್ಪಡೆಗೊಳಿಸಲಾಗಿಲ್ಲ. ಅಲ್ಲಿಯೇ ಅನಧಿಕೃತವಾಗಿ ಆಟವಾಡಿಕೊಂಡಿತ್ತು.

ಆಗಸ್ಟ್‌ ೨೬ರಂದು ಮುರುಘಾ ಮಠದ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗುತ್ತಿದ್ದಂತೆ ವಸತಿ ಶಾಲೆಯಲ್ಲಿದ್ದ ಮಕ್ಕಳನ್ನು ಸರ್ಕಾರಿ ವಸತಿ ಶಾಲೆ, ಬಾಲ ಮಂದಿರಕ್ಕೆ ಸ್ಥಳಾಂತರ ಮಾಡಲಾಯಿತು. ಆಗ ಈ ವಿಷಯ ಬೆಳಕಿಗೆ ಬಂದಿದೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಡಾ. ಜೆ.ಎಸ್. ಮಧುಕುಮಾರ್‌ ಎಂಬುವವರು ದೂರು ನೀಡಿ ಗಮನ ಸೆಳೆದಿದ್ದರು.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಎರಡೂವರೆ ವರ್ಷದಿಂದ ಲೈಂಗಿಕ ಕಿರುಕುಳ; ಬಡವರಾಗಿದ್ದರಿಂದ ಹೆದರಿದರು: ಸ್ಟ್ಯಾನ್ಲಿ

ಅನಧಿಕೃತವಾಗಿ ಮಗು ಪೋಷಣೆ
ವಸತಿ ಶಾಲೆಯಲ್ಲಿದ್ದ ಮಕ್ಕಳನ್ನು ಸರ್ಕಾರಿ ವಸತಿ ಶಾಲೆ, ಬಾಲ ಮಂದಿರಕ್ಕೆ ಸ್ಥಳಾಂತರ ಮಾಡುವಾಗ ದಾಖಲಾತಿ ಪುಸ್ತಕವನ್ನು ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಈ ಮಗುವನ್ನು ಅನಧಿಕೃತವಾಗಿ ಬಿಟ್ಟುಕೊಂಡಿರುವುದು ತಿಳಿದುಬಂದಿದೆ. ಮಡಿಲು ಸಂಸ್ಥೆಯಲ್ಲಿದ್ದರೂ ಯಾಕೆ ದಾಖಲು ಮಾಡಿಕೊಂಡಿಲ್ಲ ಎಂಬ ಪ್ರಶ್ನೆ ಇದೇ ವೇಳೆ ಉದ್ಭವಿಸಿದೆ. ಆದರೆ, ಈ ಬಗ್ಗೆ ಯಾವುದೇ ವಿಚಾರಣೆ ಮಾಡಲಾಗಿದೆಯೇ? ಅನಧಿಕೃತವಾಗಿ ಬಿಟ್ಟುಕೊಂಡಿದ್ದಕ್ಕೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಯಾವ ಮಾಹಿತಿಯನ್ನೂ ನೀಡಲಾಗಿಲ್ಲ. ಈ ವಿಷಯದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಮಧುಕುಮಾರ್‌ ಮಕ್ಕಳ ಕಲ್ಯಾಣ ಸಮಿತಿ, ಜಿಲಾಡಳಿತಕ್ಕೆ ದೂರು ನೀಡಿ ತನಿಖೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಬಾಲಕಿ ಹೆಸರು, ಫೋಟೊ ಸಹಿತ ಜಾಹೀರಾತು ಪ್ರಕಟ
ಈ ಹೆಣ್ಣುಮಗುವಿಗೆ “ಚಿಗುರು” ಎಂದು ಹೆಸರಿಡಲಾಗಿದ್ದು, ನಾಲ್ಕೂವರೆ ವರ್ಷವಾಗಿದೆ. ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ. ಈ ಮಗುವು ಮುರುಘಾಮಠದ ಅಕ್ಕಮಹಾದೇವಿ ವಸತಿ ನಿಲಯದಲ್ಲಿ ಸಿಕ್ಕಿದೆ. ಗೋಧಿ ಮೈಬಣ್ಣವನ್ನು ಹೊಂದಿದ್ದು, ೧೬ ಕೆಜಿ ತೂಕವಿದೆ. ಈ ಹೆಣ್ಣು ಮಗುವಿನ ಪೋಷಕರ ಬಗ್ಗೆ ವಿವರ ಲಭ್ಯವಾಗಿಲ್ಲ. ಹೀಗಾಗಿ ವಿವರ ಗೊತ್ತಿದ್ದವರು, ಇಲ್ಲವೇ ಪೋಷಕರು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಅಥವಾ ಮಕ್ಕಳ ಕಲ್ಯಾಣ ಸಮಿತಿಯನ್ನು ಸಂಪರ್ಕಿಸಬೇಕು ಎಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿದೆ. ಮಾಹಿತಿ ಇದ್ದವರು ಮೊ. ೮೯೭೦೦೭೨೬೦೯ಗೆ ಸಂಪರ್ಕಿಸುವಂತೆ ಕೋರಲಾಗಿದೆ. ಹಾಲಿ ಮಗುವು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸುಪರ್ದಿಯಲ್ಲಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಎರಡೂವರೆ ವರ್ಷದಿಂದ ಲೈಂಗಿಕ ಕಿರುಕುಳ; ಬಡವರಾಗಿದ್ದರಿಂದ ಹೆದರಿದರು: ಸ್ಟ್ಯಾನ್ಲಿ

Exit mobile version