ಬೆಂಗಳೂರು: ರಾಜ್ಯದಲ್ಲಿ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಬೆತ್ತಲಾಗಿಸಿ ಹಣ ಲೂಟಿ ಮಾಡುತ್ತಿದ್ದ ಗ್ಯಾಂಗ್ ಪೊಲೀಸರ ಬಲೆಗೆ ಬಿದ್ದಿದೆ. ಈ ಗ್ಯಾಂಗ್‌ಗೆ ವಿಚ್ಛೇದನ ಹೊಂದಿರುವ ಹಾಗೂ ಗಂಡ ಸತ್ತಿರುವ ಒಂಟಿ ಮಹಿಳೆಯರೇ ಟಾರ್ಗೆಟ್. ಮಹಿಳೆಯರನ್ನು ಬೆತ್ತಲಾಗಿಸಿ, ವಿಡಿಯೊ ಮಾಡಿ ಹಣ ದೋಚಿ ಪರಾರಿಯಾಗುವುದೇ ಈ ಖತರ್‌ನಾಕ್ ಗ್ಯಾಂಗ್‌ನ ಗುರಿ. ಇವರು ಎಂಟು ಮಹಿಳೆಯರನ್ನು ರಾಬರಿ ಮಾಡಿರುವುದು ಬಯಲಿಗೆ ಬಂದಿದೆ.
ಒಂಟಿ ಮಹಿಳೆಯರನ್ನು ಶೋಧಿಸುವ ಖತರ್ನಾಕ್ ಗ್ಯಾಂಗ್
ಮೊದಲು ಈ ಗುಂಪಿನವರು ಒಂಟಿ ಮಹಿಳೆಯರ ಬಗ್ಗೆ ಅಧ್ಯಯನ ಮಾಡಿ ನಂತರ ಗೆಳೆತನ ಸಂಪಾದಿಸುತ್ತಾರೆ. ಬಳಿಕ ಫೋನ್‌ನಲ್ಲಿ ಮಾತನಾಡಿ ಭೇಟಿ ಮಾಡಬೇಕೆಂದು ಕರೆಯುತ್ತಾರೆ. ಭೇಟಿಗೆ ಬಂದ ಮಹಿಳೆಯರನ್ನು ಕಾರಿನಲ್ಲಿ ಕಿಡ್ನಾಪ್ ಮಾಡಿಕೊಂಡು ಹೋಗುತ್ತಾರೆ. ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಹಿಳೆಗೆ ಬಟ್ಟೆ ಬಿಚ್ಚಲು ಹೇಳುತ್ತಾರೆ. ಒಪ್ಪದೇ ಇದ್ದಾಗ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸುತ್ತಾರೆ. ನಗ್ನ ವಿಡಿಯೊ ಮಾಡಿ ಮೊಬೈಲ್‌ನಲ್ಲಿ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಾರೆ. ಮಹಿಳೆ ಹಣ ಕೊಡಲು ಒಪ್ಪದೇ ಇದ್ದರೆ ವಿಡಿಯೊ ಲೀಕ್ ಮಾಡುತ್ತೇವೆ ಎಂದು ಬೆದರಿಸಿ ಅವರಿಂದ ಹಣ ಕೀಳುತ್ತಾರೆ.
ಇದನ್ನೂ ಓದಿ | ತನಿಖೆ ನಡೆದಿದ್ದು ಎಟಿಎಂ ರಾಬರಿ ಕೇಸ್: ಸಿಕ್ಕಿದ್ದು ಖತರ್ನಾಕ್ ಗ್ಯಾಂಗ್
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳ ಮತ್ತು ರವಿ ದಂಪತಿ, ಶಿವಕುಮಾರ್ ಮತ್ತು ಶ್ರೀನಿವಾಸ್ ಪೊಲೀಸರ ವಶ ಆಗಿದ್ದಾರೆ.
ನಡು ರಸ್ತೆಯಲ್ಲಿ ಮಹಿಳೆಯನ್ನು ಬಿಟ್ಟು ಎಸ್ಕೇಪ್ ಆಗುವ ಗ್ಯಾಂಗ್
ಈ ಕಿರಾತಕರು ಮಹಾಲಕ್ಷ್ಮೀ ಲೇಔಟ್‌ನ ಮಹಿಳೆಯೊಬ್ಬರಿಗೆ ಈ ರೀತಿ ಕೃತ್ಯ ಎಸೆದು ಒಂದು ಚಿನ್ನದ ಚೈನ್, ಕಿವಿ ಓಲೆ ಹಾಗೂ ಉಂಗುರ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲದೆ ಫೋನ್ ಫೇ ಮೂಲಕ 84 ಸಾವಿರ ರೂ. ವರ್ಗಾವಣೆ ಮಾಡಿಕೊಂಡಿದ್ದರು. ಮತ್ತೆ ಹಣ ಬೇಕು ಎಂದು ಎಟಿಎಂ ಕಾರ್ಡ್ ಮೂಲಕ ನಲವತ್ತು ಸಾವಿರ ರೂ. ಡ್ರಾ ಮಾಡಿಸಿ ಪಡೆದಿದ್ದರು. ನಂತರ ಮೊಬೈಲ್ ಸಿಮ್ ಕಾರ್ಡ್ ಕಿತ್ತುಕೊಂಡು ನಡು ರಸ್ತೆಯಲ್ಲಿ ಮಹಿಳೆಯನ್ನು ಬಿಟ್ಟು ಪರಾರಿಯಾಗಿದ್ದರು. ಈ ಖತರ್ನಾಕ್ ಗ್ಯಾಂಗ್ ಬಹುತೇಕ ಬಾರಿ ತಾವರೆಕೆರೆ ಕಡೆಯ ಅರಣ್ಯ ಪ್ರದೇಶದಲ್ಲಿ ಕೃತ್ಯ ಎಸಗುತ್ತಿತ್ತು ಎಂಬುದು ತನಿಖೆ ಮೂಲಕ ತಿಳಿದು ಬಂದಿದೆ.
ಘಟನೆ ನಂತರ ಮಹಿಳೆ ಮಹಾಲಕ್ಷ್ಮಿ ಲೇಔಟ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಕೇಸ್ ದಾಖಲು ಮಾಡಿ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಿಚಾರಣೆ ವೇಳೆ ಇದೇ ರೀತಿ ಎಂಟು ಮಹಿಳೆಯರಿಗೆ ಹಿಂಸೆ ನೀಡಿ ರಾಬರಿ ಮಾಡಿರುವುದು ಬಯಲಿಗೆ ಬಂದಿದೆ. ಎಂಟು ಮಹಿಳೆಯರು ಹೆದರಿ ಪೊಲೀಸ್ ಠಾಣೆಗೆ ದೂರು ನೀಡಲೇ ಇಲ್ಲ. ಇವರಿಂದ ಲೂಟಿಗೊಳಗಾದ ಮಹಿಳೆಯರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ | ಜಾಲತಾಣದಲ್ಲಿ ಕೊಡವ ಜನಾಂಗ, ಮಹಿಳೆಯರನ್ನು ಅವಮಾನಿಸಿದವನ ವಿರುದ್ಧ FIR