ಉಡುಪಿ: ಕಾಲೇಜು, ವಿಶ್ವವಿದ್ಯಾಲಯಗಳ ಲೆಕ್ಚರರ್‌ಗಳು, ಪ್ರೊಫೆಸರ್‌ಗಳಿಗಿಂತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಶಿಕ್ಷಕರನ್ನು ಹೆಚ್ಚು ಗೌರವದಿಂದ ಕಾಣುತ್ತೇವೆ. ಆರಂಭದಿಂದ ಅಕ್ಷರ ಕಲಿಸಿದವರು, ಜೀವನಕ್ಕೆ ಭದ್ರ ಅಡಿಪಾಯ ಹಾಕಿದವರು, ಬೈದು ಬುದ್ಧಿ ಹೇಳಿದವರು, ಮಕ್ಕಳಂತೆ ನೋಡಿಕೊಂಡರು ಎಂಬ ಕಾರಣಕ್ಕಾಗಿ ಹೆಚ್ಚಿನ ಗೌರವ ನೀಡುತ್ತೇವೆ. ಆದರೆ, ಉಡುಪಿ ಜಿಲ್ಲೆ ಕುಂದಾಪುರ ಶಿಕ್ಷಕನೊಬ್ಬ ಐದು ವರ್ಷದಿಂದ ಶಾಲೆಗೆ ಹಾಜರಾಗದೆ, ಸಂಬಳ ಮಾತ್ರ ಪಡೆದು ಶಿಕ್ಷಕ ವೃತ್ತಿಗೆ (Fraud Teacher) ದ್ರೋಹ ಬಗೆದಿದ್ದಾನೆ.
ಹೌದು, ಕುಂದಾಪುರ ತಾಲೂಕಿನ ಆನಗಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಅಂಪಾರು ದಿನಕರ ಶೆಟ್ಟಿ ಎಂಬಾತನ ವಂಚನೆ ಬಯಲಾಗಿದೆ. ಉಡುಪಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷನೂ ಆಗಿರುವ ಈತ 2017ರಿಂದಲೂ ಶಾಲೆಗೆ ಹಾಜರಾಗದೆ, ಅನಾರೋಗ್ಯದ ನೆಪ ಹೇಳಿ ಇಷ್ಟು ವರ್ಷಗಳ ಕಾಲ ಸುಮ್ಮನೆ ಸಂಬಳ ಪಡೆದುಕೊಂಡಿದ್ದಾನೆ. ಒಂದು ದಿನವೂ ತರಗತಿ ತೆಗೆದುಕೊಳ್ಳದೆ, ಆಗಾಗ ಬಂದು ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಹೋಗುತ್ತಿದ್ದ ಎಂಬ ಪ್ರಕರಣವೀಗ ಬಟಾಬಯಲಾಗಿದೆ.
ಅಂಪಾರು ದಿನಕರ ಶೆಟ್ಟಿಯು ಶಾಲೆ ಕಡೆಗೆ ಸುಳಿಯದೆ, ಆಗಾಗ ಬಂದು ಸಹಿ ಮಾಡಿ ಹೋಗಿ ಸಂಬಳ ಎಣಿಸುತ್ತಿರುವ, ಯಾವುದೇ ಪ್ರಮುಖ ಕಾರ್ಯಕ್ರಮಗಳಿಗೂ ಹಾಜರಾಗದೆ ತಿಂದುಂಡು, ಓಡಾಡಿಕೊಂಡಿರುವ ಕುರಿತು ಪಂಚಾಯಿತಿ ಅಧ್ಯಕ್ಷರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಗಮನಕ್ಕೆ ತಂದಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಯು ಶಾಲೆಗೆ ಆಗಮಿಸಿದ್ದಾಗ ಎಂದಿನಂತೆ ಅಂಪಾರು ದಿನಕರ ಶೆಟ್ಟಿ ಶಾಲೆಯಲ್ಲಿ ಇರಲಿಲ್ಲ. ಹಾಗಾಗಿ, ಕ್ಷೇತ್ರ ಶಿಕ್ಷಣಾಧಿಕಾರಿಯು ಅಂಪಾರು ದಿನಕರ ಶೆಟ್ಟಿಯನ್ನು ಅಮಾನತುಗೊಳಿಸಿದ್ದಾರೆ.
ಇದನ್ನೂ ಓದಿ: Attempt murder Case : ಪತಿಯಿಂದ ದೂರಾಗಿದ್ದ ಶಿಕ್ಷಕಿಗೆ ಚಾಕು ಹಾಕಿದ ಫೈಟರ್!
ಐದಾರು ವರ್ಷದಿಂದ ತರಗತಿ ತೆಗೆದುಕೊಳ್ಳದೆ, ಸರ್ಕಾರದ ಸಂಬಳ ಪಡೆದು ಶಿಕ್ಷಕರ ವೃತ್ತಿಗೆ ದ್ರೋಹ ಬಗೆದಿರುವ, ಮಕ್ಕಳ ಭವಿಷ್ಯವನ್ನೂ ಲೆಕ್ಕಿಸದೆ ಮೋಜು ಮಾಡಿದ ಶಿಕ್ಷಕನಿಗೆ ಅಮಾನತು ಶಿಕ್ಷೆ ಬದಲು, ಶಿಕ್ಷಣ ಇಲಾಖೆಯಿಂದಲೇ ವಜಾಗೊಳಿಸಿ ಎಂಬುದಾಗಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಕೆಲವೊಬ್ಬ ಶಿಕ್ಷಕರು ವೃತ್ತಿಯ ಘನತೆ ಮರೆತು, ಮಕ್ಕಳಿಗೆ ದ್ರೋಹ ಮಾಡುವ ಮೂಲಕ ಗುರುವಿನ ಮೌಲ್ಯವನ್ನು ಕುಂಠಿತಗೊಳಿಸುತ್ತಿರುವುದು ಬೇಸರದ ಸಂಗತಿಯಾಗಿದೆ.