ಬೆಳಗಾವಿ: ಇತ್ತೀಚಿನ ವರ್ಷಗಳಲ್ಲಿ ಹಿಂಡಲಗಾ ಸೆಂಟ್ರಲ್ ಜೈಲಿನಲ್ಲಿ ಪದೇ ಪದೆ ಭದ್ರತಾ ಲೋಪದ ಪ್ರಕರಣಗಳು ದಾಖಲಾಗುತ್ತಿವೆ. ಜೈಲಿನೊಳಗೆ ಕೈದಿಗಳಿಗೆ ಗಾಂಜಾ, ಅಫೀಮು ಮೊದಲಾದ ಮಾದಕ ವಸ್ತುಗಳು ಪೂರೈಕೆಯಾಗುತ್ತಿವೆ ಎಂಬ ಆರೋಪಗಳು ಪದೇಪದೆ ಕೇಳಿಬರುತ್ತಿವೆ. ಈಗ ಜೈಲಿನಲ್ಲಿ (Hindalga Central Jail) ಕೈದಿಗಳು ರಾಜಾರೋಷವಾಗಿ ಮೊಬೈಲ್, ಟಿವಿ ಬಳಸುವುದು ಕಂಡುಬಂದಿದೆ. ದುಡ್ಡಿದ್ದರೆ ಇಲ್ಲಿ ಕೈದಿಗಳಿಗೆ ವಿಲಾಸಿ ಜೀವನ ಸಿಗುತ್ತಿದ್ದು, ಇಲ್ಲವೆಂದರೆ ನರಕಯಾತನೆ ಎನ್ನಲಾಗಿದೆ.
ಇಲ್ಲಿನ ಕೈದಿಯೊಬ್ಬ ಕಳೆದ ಕೆಲ ತಿಂಗಳ ಹಿಂದೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ಸಂಚಲನ ಮೂಡಿಸಿತ್ತು. ಮಂಗಳೂರು ಕುಕ್ಕರ್ ಸ್ಫೋಟದ ಸಂಚು ನಡೆದದ್ದು ಕೂಡ ಈ ಜೈಲಿನಿಂದಲೇ. ಈ ಪ್ರಕರಣಗಳಿಂದ ಜೈಲಿನೊಳಗೆ ಕೈದಿಗಳಿಗೆ ಮೊಬೈಲ್ ಲಭ್ಯವಾಗುತ್ತಿರುವುದು ಜಗಜ್ಜಾಹೀರಾಗಿತ್ತು. ಜೈಲಿನ ಅಕ್ರಮಗಳಿಗೆ ಕಡಿವಾಣ ಹಾಕಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ವಾರ್ನಿಂಗ್ ನೀಡಿದ್ದರೂ ಜೈಲಿನ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ.
ಹಣ ಕೊಟ್ಟರೆ ರೂಮ್‌ಗೆ ಟಿವಿನೂ ಬರುತ್ತದೆ, ಮೊಬೈಲ್ ಕೂಡ ಸಿಗುತ್ತದೆ
ಈ ಜೈಲಿನ ಕರ್ಮಕಾಂಡದ ಬಗ್ಗೆ ಮಾಧ್ಯಮಗಳಲ್ಲಿ ಎಷ್ಟೇ ಬಾರಿ ಪ್ರಸಾರವಾದರೂ ಇಲ್ಲಿನ ಅಕ್ರಮಗಳಿಗೆ ಕಡಿವಾಣ ಬೀಳುತ್ತಿಲ್ಲ. ನಾವು ಇರುವುದೇ ಹೀಗೆ ಎಂಬಂತೆ ಜೈಲಿನ ಅಧಿಕಾರಿಗಳ ವರ್ತನೆಯಿದೆ. ಹಣ ಕೊಟ್ಟರೆ ರೂಮ್‌ಗೆ ಟಿವಿನೂ ಬರುತ್ತದೆ, ಕೈಗೆ ಮೊಬೈಲ್ ಕೂಡ ಸಿಗುತ್ತದೆ. ಮೊಬೈಲ್ ಬಳಕೆ ನಿಷೇಧವಿದ್ದರೂ ಕೈದಿಗಳು ರಾಜಾರೋಷವಾಗಿ ಮೊಬೈಲ್, ಟಿವಿ ಬಳಸುವ ದೃಶ್ಯ ಲಭ್ಯವಾಗಿದೆ. ಹಣ ಕೊಟ್ಟರೆ ಕೈದಿಗಳಿಗೆ ವಿಲಾಸಿ ಜೀವನ ಸಿಗುತ್ತದೆ. ಜುಲೈ 12ರಂದು ಜೈಲಿನಲ್ಲಿ ತೆಗೆದಿರುವ ವಿಡಿಯೊವೊಂದು ವೈರಲ್ ಆಗಿದ್ದು, ಇದರಲ್ಲಿ ಕೈದಿಗಳು ಮೊಬೈಲ್ ಹಾಗೂ ಟಿವಿ ಬಳಸುತ್ತಿರುವುದು ಸೆರೆಯಾಗಿದೆ.
ಇದನ್ನೂ ಓದಿ | Murder Attempt : ನಾಯಿ ಬೊಗಳಿದ್ದಕ್ಕೆ ಕೋಪ; ಶ್ವಾನದ ಮಾಲೀಕನೆಂದು ಯಾರನ್ನೋ ಇರಿದ ಭೂಪ!
ದುಡ್ಡು ಕೊಡುವವರಿಗೆ ವಿಲಾಸಿ ಜೀವನ ಸಿಗುತ್ತಿದ್ದರೆ, ಮತ್ತೊಂದೆಡೆ ದುಡ್ಡು ಕೊಡದವರಿಗೆ ನರಕಯಾತನೆ ಇದೆ. ಕೈದಿಗಳಿಗೆ ಕಳಪೆ ಆಹಾರ ನೀಡಲಾಗುತ್ತಿದ್ದು, ಅಂತ್ಯಕ್ರಿಯೆ ವೇಳೆ ಬಳಸುವ, ಸಂರಕ್ಷಣೆ ಉದ್ದೇಶಕ್ಕೆ ಉಪಯೋಗಿಸುವ ಕಳಪೆ ಉಪ್ಪನ್ನು ಆಹಾರದಲ್ಲಿ ಬಳಸಲಾಗುತ್ತಿದೆ. ಅಯೋಡಿನ್ ರಹಿತ ಉಪ್ಪು ಸೇವಿಸಬೇಕಾದ ಅನಿವಾರ್ಯತೆ ಕೈದಿಗಳಿಗೆ ಇದೆ ಎಂಬ ಆರೋಪ ಕೇಳಿಬಂದಿದೆ.