ರಾಮನಗರ: ಮಾಗಡಿ ಶಾಸಕ ಎ.ಮಂಜುನಾಥ್ (A Manjunath) ಬಿಜೆಪಿ ಸೇರಲು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೊಗೇಶ್ವರ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. ಇದೀಗ ಈ ವಿಷಯ ಶಾಸಕ ಎ.ಮಂಜುನಾಥ್ ಮತ್ತು ಎಚ್.ಸಿ.ಬಾಲಕೃಷ್ಣ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಮಂಜುನಾಥ್ ಜೆಡಿಎಸ್‌ನಿಂದ ಶಾಸಕರಾಗಿ ಆಯ್ಕೆಯಾದಾಗ ಬಾಲಕೃಷ್ಣರನ್ನೂ ಕರೆದುಕೊಂಡು, ನಾನೂ ಬಿಜೆಪಿಗೆ ಬರುತ್ತೇನೆ. ಬಾಲಕೃಷ್ಣ ಲೋಕಸಭಾ ಚುನಾವಣೆಗೆ ನಿಲ್ಲಲಿ, ನಾನು ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿಯಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಸಿ.ಪಿ. ಯೋಗೇಶ್ವರ್ ಬಳಿ ಸ್ವತಃ ಎ. ಮಂಜುನಾಥ್ ಹೇಳಿದ್ದರು ಎಂಬುದಾಗಿ ಬಾಲಕೃಷ್ಣ ಆರೋಪಿಸಿಸುವ ಮೂಲಕ ಇದು ಸತ್ಯವೋ, ಸುಳ್ಳೋ ಶಾಸಕರೇ ಹೇಳಲಿ ಎಂದು ಸವಾಲನ್ನೂ ಹಾಕಿದ್ದರು.
ಶಾಸಕ ಮಂಜುನಾಥ್ ಬಿಜೆಪಿಯಿಂದ ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ ಎಂದು ನಾನೂ ಸಹ ಯೋಗೇಶ್ವರ್ ಅವರಿಗೆ ಹೇಳಿದ್ದೇನೆ. ಈ ಹಿಂದೆ ಸಿ.ಪಿ.ಯೋಗೇಶ್ವರ್ ಜತೆ ಕಾರಿನಲ್ಲಿ ಕುಳಿತು ಚರ್ಚಿಸುವ ವೇಳೆ ಈ ವಿಷಯ ಪ್ರಸ್ತಾಪವಾದಾಗ ಪತ್ನಿಯೊಂದಿಗೆ ಚರ್ಚಿಸಿ ಮಾತನಾಡುತ್ತೇನೆ ಎಂದು ಹೇಳಿ ಮಂಜುನಾಥ್ ಸುಮ್ಮನಾಗಿದ್ದರು. ಆದರೆ ಅವರು, ಭಯದಿಂದ ಜೆಡಿಎಸ್‌ನಲ್ಲಿದ್ದಾರೆಯೇ ಹೊರತು ಜೆಡಿಎಸ್ ಮೇಲಿನ ಗೌರವದಿಂದಲ್ಲ. ಮಂಜುನಾಥ್ ಮಾಗಡಿಯಲ್ಲಿ ರಾಜಕೀಯ ಮಾಡಲು ಸಾಧ್ಯವಿಲ್ಲ. ಹೀಗಾಗಿ ಬಿಜೆಪಿ ಸಚಿವ ಅಶ್ವತ್ಥನಾರಾಯಣ್ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಬಾಲಕೃಷ್ಣ ಸೋಮವಾರ ಹೇಳಿದ್ದಾರೆ.
ಇದನ್ನೂ ಓದಿ | Karnataka Election : ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುವೆ: ಸಿದ್ದರಾಮಯ್ಯ ಘೋಷಣೆ
ಮಾಗಡಿ ಶಾಸಕ ಎ.ಮಂಜುನಾಥ್ ತಿರುಗೇಟು.
ಮಾಜಿ ಶಾಸಕ ಬಾಲಕೃಷ್ಣ ಆರೋಪಕ್ಕೆ ಮಾಗಡಿ ಶಾಸಕ ಎ.ಮಂಜುನಾಥ್ ಸುದ್ದಿಗೋಷ್ಠಿ ಮೂಲಕ ತಿರುಗೇಟು ನೀಡಿದ್ದು, ನಾನು ನಿಮ್ಮ ಹಾಗೆ ಹಲ್ಕಾ ಅಲ್ಲ, ನಿಯತ್ತಿನ ನಾಯಿ ಎಂದು ತಿಳಿಸಿದ್ದಾರೆ.
ಜೆಡಿಎಸ್ ವರಿಷ್ಠ, ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕೆ ಹೆಸರಿನಲ್ಲಿ ನಾಯಿ, ನರಿಗಳೆಲ್ಲ ಗೆದ್ದಿವೆ ಎಂಬ ಬಾಲಕೃಷ್ಣ ಹೇಳಿಕೆಗೆ ಕೆಂಡಾಮಂಡಲವಾಗಿರುವ ಅವರು, ಬಾಲಕೃಷ್ಣಗೆ ಆತ್ಮಸಾಕ್ಷಿ ಇದೆಯಾ? ಈ ಹಿಂದೆ ಅವರೂ ಜೆಡಿಎಸ್‌ನಿಂದ ಗೆದ್ದಿದ್ದರು. ಹಾಗಿದ್ದರೆ ಇವರೇನು? ಬಾಲಕೃಷ್ಣ ಅವರಿಗೆ ಮಾತಿನಲ್ಲಿ ಹಿಡಿತ ಇರಬೇಕು. ಹೌದು, ನನಗೂ ಬಿಜೆಪಿಯಿಂದ ಆಫರ್ ಬಂದಿದ್ದು ನಿಜ. ಆದರೆ, ಬಾಲಕೃಷ್ಣ ರೀತಿ ಮಣ್ಣು ತಿನ್ನುವ ಕೆಲಸವನ್ನು ನಾನು ಮಾಡಲಿಲ್ಲ. ನಿಮ್ಮ ಹಾಗೆ 10 ಕೋಟಿ ರೂ.ಗಳಿಗೆ ತಲೆಮಾರಿಕೊಳ್ಳುವ ಕೆಲಸ ಮಾಡಲಿಲ್ಲ ಎಂದು ಕಿಡಿಕಾರಿದ್ದಾರೆ.
ನಾನು ದೇವೇಗೌಡರು ಹಾಗೂ ಎಚ್‌ಡಿಕೆ ಆಶೀರ್ವಾದದಲ್ಲಿ ಗೆದ್ದಿದ್ದೇನೆ. ನೇರವಾಗಿ ಬಿಜೆಪಿ ಸಚಿವರ ಮನೆಗೆ ಹೋಗಿ ಕ್ಷೇತ್ರದ ಕೆಲಸ ಮಾಡಿಸುತ್ತೇನೆ. ನಾನು ತಾಲೂಕಿಗೋಸ್ಕರ ಕೆಲಸ ಮಾಡುವ ನಾಯಿ. ನಾನು ಹೊಟ್ಟೆ ಪಾಡಿಗೆ ರಾಜಕಾರಣಕ್ಕೆ ಬಂದಿಲ್ಲ. ನಿಮ್ಮನ್ನು ಮನೆಗೆ ಕಳುಹಿಸಲು ರಾಜಕಾರಣಕ್ಕೆ ಬಂದಿದ್ದೇನೆ ಎಂದು ಬಾಲಕೃಷ್ಣ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಿಪಿವೈ ಭೇಟಿ ಮಾಡಿದ್ದರು
ಬಿಜೆಪಿ ಸೇರಲು ಸಿಪಿವೈ ಜತೆ ಚರ್ಚೆ ಬಗ್ಗೆ ಎ.ಮಂಜುನಾಥ್ ಪ್ರತಿಕ್ರಿಯಿಸಿ, ಹೌದು, ಮೈತ್ರಿ ಸರ್ಕಾರ ತೆಗೆಯುವ ಸಂದರ್ಭದಲ್ಲಿ ಯೋಗೇಶ್ವರ್ ಅವರೇ ನನ್ನನ್ನು ಭೇಟಿಯಾಗಿ ಬಿಜೆಪಿಗೆ ಆಹ್ವಾನಿಸಿದ್ದರು. ಆಗ ನಾನು ಅದನ್ನು ರಿಜೆಕ್ಟ್ ಮಾಡಿದ್ದೆ. ಬೇಕಿದ್ದರೆ ಯೋಗೇಶ್ವರ್ ಅವರನ್ನೇ ಕೇಳಲಿ. ನಾನು ಮಾಜಿ ಶಾಸಕರ ರೀತಿ ಸೇಲ್ ಆಗೋ ಗಿರಾಕಿ ಅಲ್ಲ. ಬೇಕಿದ್ದರೆ ಮಾಗಡಿ ರಂಗನಾಥ ಸ್ವಾಮಿ ದೇವಾಲಯದಲ್ಲಿ ಪ್ರಮಾಣ ಮಾಡುತ್ತೇನೆ. ಅವರೂ ಬಂದು ಪ್ರಮಾಣ ಮಾಡಲಿ ಎಂದು ಮಾಜಿ ಶಾಸಕ ಬಾಲಕೃಷ್ಣಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ | Karnataka Election : ನಾನು ಕೋಲಾರದಿಂದಲೇ ಸ್ಪರ್ಧೆ ಮಾಡುವೆ: ಸಿದ್ದರಾಮಯ್ಯ ಘೋಷಣೆ