ವಿಜಯಪುರ: ಹೆಣ್ಣು ಮಕ್ಕಳು ಇದ್ದ ಮನೆ ಕನ್ನಡಿಯ ಹಾಗೆ ಎಂದು ಹೇಳುತ್ತಾರೆ. ಹೆಣ್ಣಿಗೆ ದೇವರ ಸ್ಥಾನವನ್ನೂ ಕೊಡಲಾಗಿದೆ. ಆದರೆ, ಇಲ್ಲೊಬ್ಬಳು ತನಗೆ ಕೇವಲ ಹೆಣ್ಣು ಮಕ್ಕಳೇ ಹುಟ್ಟುತ್ತಿದ್ದಾರೆ ಎಂದು ಮಾನಸಿಕವಾಗಿ ಅಸ್ವಸ್ಥಗೊಂಡು ತನ್ನ ಎರಡು ಹಣ್ಣು ಮಕ್ಕಳನ್ನು ಬಾವಿಗೆ ನೂಕಿ ತಾನೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಹಂದಿಗನೂರು ಗ್ರಾಮದ ತೋಟದ ಮನೆಯ ಬಳಿ ಪ್ರಕರಣ ನಡೆದಿದೆ. ಸಿಂದಗಿ ತಾಲೂಕಿನ ಹಚ್ಯಾಳ ಗ್ರಾಮದ ಅಕ್ಕಮ್ಮ 10 ವರ್ಷದ ಹಿಂದೆ ಹಂದಿಗನೂರಿನ ಶ್ರೀಶೈಲ್ ಎಂಬುವವರನ್ನು ವಿವಾಹವಾಗಿದ್ದರು.
ಅಕ್ಕಮ್ಮ ಕೆಲ ತಿಂಗಳಿನಿಂದ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದರು ಎನ್ನಲಾಗಿದೆ. ಈವರೆಗೆ ಒಟ್ಟು ನಾಲ್ಕು ಹೆಣ್ಣು ಮಕ್ಕಳು ಜನಿಸಿದ್ದರು. ಹೆಣ್ಣು ಮಕ್ಕಳೇ ಜನಿಸುತ್ತಿದ್ದಾರೆ ಎಂದು ಮಾನಸಿಕವಾಗಿ ನೊಂದಿದ್ದ ಅಕ್ಕಮ್ಮ ಅವರು 4 ಮಕ್ಕಳ ಸಮೇತ ಬಾವಿಗೆ ಹಾರುವ ಪ್ಲಾನ್ ಮಾಡಿದ್ದರು.
ಇಬ್ಬರು ಮಕ್ಕಳು ಶಾಲೆಗೆ ಹೋಗಿದ್ದರು. ಶಾಲೆಗೆ ಹೋದ ಇಬ್ಬರು ಮಕ್ಕಳನ್ನು ತನ್ನೊಂದಿಗೆ ಕರೆತಂದು 4 ಮಕ್ಕಳ ಜತೆ ಬಾವಿಗೆ ಹಾರಬೇಕೆಂದು ಅಂದುಕೊಂಡಿದ್ದರು. ಶಾಲೆಗೆ ಕರೆತರಲು ಹೋದ ಸಂದರ್ಭದಲ್ಲಿ ಆ ಇಬ್ಬರು ಹೆಣ್ಣು ಮಕ್ಕಳು ತಾಯಿ ಜೊತೆಗೆ ಬರಲು ಒಪ್ಪಲಿಲ್ಲ. ಹಾಗಾಗಿ ಅವರಿಬ್ಬರನ್ನು ಬಿಟ್ಟು ಇವರು ಮತ್ತಿಬ್ಬರನ್ನು ಬಾವಿಗೆ ತಳ್ಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವರ ಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾರ ಹುಣ್ಣಿಮೆ ಕರಿ ದಿನವೇ ಕರಾಳ ದುರಂತ: 3 ಮಕ್ಕಳನ್ನು ಕೃಷಿ ಹೊಂಡಕ್ಕೆ ಎಸೆದು ತಾಯಿ ಆತ್ಮಹತ್ಯೆ