Site icon Vistara News

ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೂ ಸಿಗದ ಪ್ಯಾಕೇಜ್‌; 2ನೇ ಹಂತದ ಪಾದಯಾತ್ರೆಗೆ ಮಹಿಳೆಯರು ಸಜ್ಜು

ಗರ್ಭಕೋಶ ಶಸ್ತ್ರಚಿಕಿತ್ಸೆ

ಹಾವೇರಿ: ಅನಧಿಕೃತ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರ ನೆರವಿಗಾಗಿ ಸರ್ಕಾರವು ವಿಶೇಷ ಆರ್ಥಿಕ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ಎರಡನೇ ಹಂತದ ಪಾದಯಾತ್ರೆಗೆ ತಯಾರಿ ನಡೆದಿದೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಮೊದಲ ಹಂತದ ಪಾದಯಾತ್ರೆ ರಾಣೇಬೆನ್ನೂರಿನಿಂದ ಆರಂಭವಾಗಿತ್ತು. ಈ ವೇಳೆ ಆ.15ರಂದು ಶಿಗ್ಗಾಂವಿಯ ಮುಖ್ಯಮಂತ್ರಿಗಳ ನಿವಾಸದ ಎದುರು ಮಹಿಳೆಯರು ಪ್ರತಿಭಟನೆಗೆ ನಿರ್ಧರಿಸಿದ್ದರು. ಆಗ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ಮೇರೆಗೆ ಹಾವೇರಿಯ ನೆಲೋಗಲ್ ಬಳಿ ಪಾದಯಾತ್ರೆಯನ್ನು ಮೊಟಕುಗೊಳಿಸಿದ್ದರು. ಆದರೆ ತಿಂಗಳು ಕಳೆದರೂ ಸಿಎಂ ನೀಡಿದ ಭರವಸೆ ಈಡೇರದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮಹಿಳೆಯರು ಬೀದಿಗಿಳಿಯಲು ನಿರ್ಧಾರ ಮಾಡಿದ್ದು, ಜಿಲ್ಲಾಧಿಕಾರಿಗಳ ಸಭೆ ವಿಫಲವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.

ಜಿಲ್ಲಾಧಿಕಾರಿಗಳ ಸಭೆ ವಿಫಲ

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಪರ ಜಿಲ್ಲಾಧಿಕಾರಿಯೊಂದಿಗೆ ಸಂತ್ರಸ್ತ ಮಹಿಳೆಯರು ಸಭೆ ನಡೆಸಿದರು. ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಶ್ರೀನಿವಾಸ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ ಸಭೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಆಗುವವರೆಗೂ ಧರಣಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಮಹಿಳೆಯರು ಪಟ್ಟು ಹಿಡಿದರು. ಆದರೆ, ಒಂದು ವಾರದ ಕಾಲಾವಕಾಶವನ್ನು ಅಧಿಕಾರಿಗಳು ಕೇಳಿದರೂ, ಮನವಿಗೆ ಒಪ್ಪದ ಮಹಿಳೆಯರು ಧರಣಿ ಆರಂಭಿಸಿದ್ದಾರೆ. ಎರಡನೇ ಹಂತದ ಪಾದಯಾತ್ರೆ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಇನ್ನೂ ದಿನಾಂಕ ಪ್ರಕಟ ಮಾಡಿಲ್ಲ.

ಇದನ್ನೂ ಓದಿ | Cancer cure | ಕ್ಯಾನ್ಸರ್‌ಗೆ ತುತ್ತಾಗಲು ಮೂರೇ ಮೂರು ಕಾರಣಗಳು

Exit mobile version