Site icon Vistara News

ಕೆಲಸ ಕೊಡುವ ನೆಪದಲ್ಲಿ 150ಕ್ಕೂ ಹೆಚು ಜನರಿಗೆ ವಂಚಿಸಿದ ಪೊಲೀಸ್‌ ದಂಪತಿ

ಪೋಲಿಸ್‌ ದಂಪತಿ

ತುಮಕೂರು: ಈಗಿನ ಕಾಲದಲ್ಲಿ ಯಾರನ್ನೂ ನಂಬಲು ಆಗುವುದಿಲ್ಲ. ಪ್ರಾಮಾಣಿಕರಿಗಿಂತ ಮೋಸ ಮಾಡುವ ಜನರೇ ಹೆಚ್ಚು. ಪೊಲೀಸ್‌ ದಂಪತಿ ಸಾರ್ವಜನಿಕರಿಗೆ ಕೆಲಸದ ಆಮಿಷವೊಡ್ಡಿ ಮೋಸ ಮಾಡಿರುವ ಪ್ರಕರಣ ತುಮಕೂರಿನಲ್ಲಿ ನಡೆದಿದೆ.

ಜಿಲ್ಲೆಯ ಕೊರಟಗೆರೆ ತಾಲೂಕಿನ ಎಲೆರಾಂಪುರ ಗ್ರಾಮದ ನಿವಾಸಿಯಾಗಿರುವ ಮಹೇಶ್ ಪೊಲೀಸ್‌ ಹೆಡ್ ಕಾನ್‌ಸ್ಟೇಬಲ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಈ ಹಿಂದೆ ಬ್ಯಾಂಕ್‌ಗಳಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ್ದರಿಂದ ಮಹೇಶ್‌ನನ್ನು 2019ರಲ್ಲಿ ಪೊಲೀಸ್ ಇಲಾಖೆಯಿಂದ ವಜಾ ಮಾಡಲಾಗಿತ್ತು.

ಪೊಲೀಸ್ ಇಲಾಖೆಯಿಂದ ವಜಾಗೊಂಡರೂ ತನ್ನ ಚಾಳಿಯನ್ನು ಮುಂದುವರಿಸಿದ್ದನು. ಪರಿಚಯಸ್ಥರು, ಸ್ನೇಹಿತರು ಸೇರಿದಂತೆ ಹಲವರ ಕಡೆಯಿಂದ ತಮ್ಮ ಮಕ್ಕಳಿಗೆ ಬ್ಯಾಂಕ್‌ನಲ್ಲಿ ಹಾಗೂ ವಿವಿಧ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಿದ್ದ‌. ಈ ಕಾರ್ಯವನ್ನು ತನ್ನ ಪತ್ನಿ ಸುಧಾ ಜತೆ ಸೇರಿ ಮಾಡುತ್ತಿದ್ದ.

ಇಬ್ಬರೂ ಸೇರಿ ವಿವಿಧ ಇಲಾಖೆಗಳಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಇಲ್ಲಿಯವರೆಗೆ 150ಕ್ಕೂ ಹೆಚ್ಚು ಜನರಿಗೆ ನಂಬಿಸಿ ವಂಚನೆ ಮಾಡಿದ್ದಾರೆ. ಒಬ್ಬೊಬ್ಬರಿಂದ 2 ಲಕ್ಷದಿಂದ 5 ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಂಡು ಕೆಲಸ‌ ಕೊಡಿಸದೇ ನಾಮ ಹಾಕಿದ್ದಾರೆ.

ಮಹೇಶ್ ಪತ್ನಿ ಸುಧಾ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದರೆ, ಮಹೇಶ್ ತನ್ನ ಸ್ನೇಹಿತರು ಹಾಗೂ ಪರಿಚಯಸ್ಥರನ್ನು ಟಾರ್ಗೆಟ್ ಮಾಡುತ್ತಿದ್ದ. ತಾನು ವಾಸವಿದ್ದ ತುಮಕೂರು ನಗರದ ಜಯನಗರದ ಮನೆಯನ್ನೇ ಮೂವರಿಗೆ ಲೀಸ್‌ಗೆ ಕೊಟ್ಟಿದ್ದ.

ಮುಂದಿನ ತಿಂಗಳು ನಾನು ಬೇರೆ ಮನೆಗೆ ಶಿಫ್ಟ್ ಆಗುತ್ತಿದ್ದೇವೆ ಎಂದು ಒಬ್ಬರ ಬಳಿ 5 ಲಕ್ಷ ರೂಪಾಯಿ, ಮತ್ತೊಬ್ಬರಿಗೆ 15 ದಿನಗಳ ಬಳಿಕ ನಾವು ಬೇರೆ ಮನೆಗೆ ಶಿಫ್ಟ್ ಆಗುತ್ತಿದ್ದೇವೆ ಎಂದು 7 ಲಕ್ಷ ರೂ. ಹಾಗೂ ಎಸ್ಕೇಪ್ ಆಗುವ ಮೂರು ದಿನದ ಮುಂಚೆ 9 ಲಕ್ಷ ರೂಪಾಯಿಯನ್ನು ಇನ್ನೊಬ್ಬರಿಂದ ಪಡೆದು ಪಂಗನಾಮ ಹಾಕಿದ್ದಾನೆ. ತಮ್ಮ ಹಣ ವಾಪಸ್ ಕೊಡಿ ಅಂತ ಕೇಳಲು ಹೋದರೆ, ಅಂತವರಿಗೆ ಖಾಲಿ ಚೆಕ್ ಕೊಟ್ಟು ಕಳುಹಿಸಿದ್ದಾನೆ.

ಇನ್ನು ಕೆಲವರಿಗೆ ಬೆದರಿಕೆಯನ್ನು ಸಹ ಹಾಕಿದ್ದಾನೆ. ಇದೇ ರೀತಿ ಮೋಸಮಾಡಿ ಕೆಲಸದ ಆಮಿಷವೊಡ್ಡಿ 2 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಈ ದಂಪತಿ ವಂಚನೆ ಮಾಡಿದ್ದಾರೆ. ನಾಪತ್ತೆಯಾಗಿರುವ ಈ ದಂಪತಿ ವಿರುದ್ಧ ತುಮಕೂರು ಎಸ್.ಪಿಗೆ ಮೋಸ ಹೋದವರು ದೂರು ನೀಡಿದ್ದಾರೆ.

ಇದನ್ನೂ ಓದಿ: ನೂರಾರು ಕೋಟಿ ವಂಚಿಸಿ‌ ವಿದೇಶಕ್ಕೆ ಹಾರಿದ್ದ ಕಾರು ಚಾಲಕ ಅರೆಸ್ಟ್!

Exit mobile version