Site icon Vistara News

Dasara | ನಿಪ್ಪಾಣಿಯಲ್ಲಿ 10 ಸಾವಿರ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆಯ ದಾಖಲೆ

Dasara

ನಿಪ್ಪಾಣಿ: ಸುಮಾರು 10 ಸಾವಿರ ಮಹಿಳೆಯರನ್ನು ಒಗ್ಗೂಡಿಸಿ, ಬೃಹತ್ ಕುಂಕುಮಾರ್ಚನೆ ನೆರವೇರಿಸುವ ಮೂಲಕ ದಾಖಲೆ ಮಾಡಲಾಗಿದೆ. ಇನ್ನು ಮುಂದೆ ಪ್ರತಿ ನವರಾತ್ರಿಯ(Dasara) ಸಂದರ್ಭದಲ್ಲೂ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮ ಅಯೋಜಿಸಲಾಗುವುದು ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಿಪ್ಪಾಣಿಯಲ್ಲಿ ಶುಕ್ರವಾರ ಆಯೋಜಿಸಿದ್ದ ರಾಜ್ಯಮಟ್ಟದ ಬೃಹತ್ ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಆರತಿ ಬೆಳಗಿ ಮಾತನಾಡಿದರು. ನಮ್ಮ ಸಂಸ್ಕೃತಿಯಲ್ಲಿ ನವರಾತ್ರಿಗೆ ವಿಶೇಷ ಸ್ಥಾನವಿದೆ. ಮೈಸೂರು ದಸರಾ ಸಂಭ್ರಮ ಒಂದೆಡೆಯಾದರೆ, ರಾಜ್ಯದ ವಿವಿಧ ಭಾಗಗಳಲ್ಲಿ ಇರುವಂತಹ ದೇವಸ್ಥಾನಗಳ ಮೂಲಕ ಈ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸುವುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಇಂದು ರಾಜ್ಯದ ಧಾರ್ಮಿಕ ಇಲಾಖೆಯ ಹಲವಾರು ದೇವಸ್ಥಾನಗಳಲ್ಲಿ ಶಕ್ತಿ ಸ್ವರೂಪಿಣಿ ಮಾತೆಯ ವಿಶೇಷ ಪೂಜೆಗೊಸ್ಕರ ಕುಂಕುಮಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | Navaratri 2022 | 6ನೇ ದಿನ ದೇವಿಯ ಯಾವ ಸ್ವರೂಪವನ್ನು ಪೂಜಿಸಬೇಕು? ಯಾವ ವರ್ಣದ ವಸ್ತ್ರ ಶ್ರೇಷ್ಠ?

ನನ್ನ ಮತಕ್ಷೇತ್ರದಲ್ಲಿ ಸುಮಾರು 10 ಸಾವಿರ ಮಹಿಳೆಯರನ್ನು ಒಗ್ಗೂಡಿಸಿ ಬೃಹತ್ ಕುಂಕುಮಾರ್ಚನೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪದ್ಧತಿ ಮುಂದುವರಿಯಬೇಕು ಎನ್ನುವ ಆಶಯ ನಮ್ಮದಾಗಿದ್ದು, ಈ ಬಗ್ಗೆ ಸೂಕ್ತ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಸಾಮೂಹಿಕ ಕುಂಕುಮಾರ್ಚನೆಯ ದಾಖಲೆ
ನಿಪ್ಪಾಣಿ ಕ್ಷೇತ್ರದ ಹಾಗೂ ಹಾಗೂ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ 10 ಸಾವಿರಕ್ಕೂ ಹೆಚ್ಚು ಮಹಿಳೆಯರ ಜತೆಗೂಡಿ ಸಚಿವೆ ಸಾಮೂಹಿಕ ಕುಂಕುಮಾರ್ಚನೆ ನೆರವೇರಿಸಿದರು. ಕೊಲ್ಲಾಪುರದ ಮಹಾಲಕ್ಷ್ಮೀ ದೇಗುಲದ ಅರ್ಚಕರ ಮುಂದಾಳತ್ವದಲ್ಲಿ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು. ಸುಮಾರು 1 ಸಾವಿರಕ್ಕೂ ಹೆಚ್ಚು ಮಹಿಳೆಯರು ಏಕಕಾಲಕ್ಕೆ ಕುಂಕುಮಾರ್ಚನೆಯನ್ನು ನೆರವೇರಿಸುವ ಮೂಲಕ ವಿಶೇಷ ದಾಖಲೆಗೆ ಸಾಕ್ಷಿಯಾದರು.

ಬೇಳೆ ಹೋಳಿಗೆಯ ಹಬ್ಬದೂಟ
ಕುಂಕುಮಾರ್ಚನೆಯಲ್ಲಿ ಭಾಗವಹಿಸಿದ್ದ 10 ಸಾವಿರಕ್ಕೂ ಹೆಚ್ಚು ಮಹಿಳೆಯರು ಹಾಗೂ ಅವರ ಕುಟುಂಬದವರಿಗೆ ಬೇಳೆ ಹೋಳಿಗೆಯ ಹಬ್ಬದೂಟವನ್ನು ಆಯೋಜಿಸಲಾಗಿತ್ತು. ಚಿಕ್ಕೋಡಿ ಸಂಸದರು ಹಾಗೂ ಜೊಲ್ಲೆ ಗ್ರೂಪ್‌ನ ಮುಖ್ಯಸ್ಥರಾದ ಅಣ್ಣಾ ಸಾಹೇಬ ಜೊಲ್ಲೆ ಅವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 2 ಟನ್‌ ಬೇಳೆಯನ್ನು ಬಳಸಿ ಹೋಳಿಗೆಯನ್ನು ತಯಾರಿಸಲಾಗಿತ್ತು.

ಕುಂಕುಮಾರ್ಚನೆಯ ಪೂಜಾ ಕಿಟ್‌
ಮಹಿಳೆಯರು ತಮ್ಮ ಮನೆಯಿಂದ ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಬರುವ ತೊಂದರೆ ಆಗಬಾರದು ಎನ್ನುವ ದೃಷ್ಟಿಯಿಂದ ಜೊಲ್ಲೆ ಗ್ರೂಪ್‌ ವತಿಯಿಂದ 11 ಸಾವಿರ ಕುಂಕುಮಾರ್ಚನೆಯ ಕಿಟ್‌ಗಳನ್ನು ಸಿದ್ಧಗೊಳಿಸಲಾಗಿತ್ತು.

ರಾಜ್ಯದ ಹಲವು ದೇವಸ್ಥಾನಗಳಲ್ಲಿ ಸಂಭ್ರಮ ಕುಂಕುಮಾರ್ಚನೆ
ಮುಜರಾಯಿ ಸಚಿವೆ ನಿರ್ದೇಶನದಂತೆ ರಾಜ್ಯದ ವಿವಿಧ ಧಾರ್ಮಿಕ ಇಲಾಖೆಯ ದೇವಸ್ಥಾನಗಳಲ್ಲಿ ಲಲಿತಾ ಪಂಚಮಿ ಅಂಗವಾಗಿ ಮಹಿಳೆಯರನ್ನು ಆಹ್ವಾನಿಸಿ ಸಾಮೂಹಿಕ ಕುಂಕುಮಾರ್ಚನೆ ಆಚರಿಸಲಾಯಿತು. ಇಂದು ಕಾರ್ಯಕ್ರಮ ಆಯೋಜಿಸಲು ಸಾಧ್ಯವಾಗದೆ ಇರುವ ದೇವಸ್ಥಾನಗಳಲ್ಲಿ ಅಕ್ಟೊಬರ್ 3ರಂದು ಕಾರ್ಯಕ್ರಮ ಆಯೋಜಿಸಲು ಸೂಚಿಸಲಾಗಿದೆ. ಕಾರ್ಯಕ್ರಮದಲ್ಲಿ ಚಿಕ್ಕೋಡಿ ಸಂಸದರಾದ ಅಣ್ಣಾ ಸಾಹೇಬ್‌ ಜೊಲ್ಲೆ ಸೇರಿದಂತೆ ಪ್ರಮುಖ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ | Navaratri 2022 | ಸರಸ್ವತಿ ಪೂಜೆ ಎಂದು? ಪೂಜೆ ಹೇಗೆ ಮಾಡಬೇಕು?

Exit mobile version