ಬಳ್ಳಾರಿ: ಬೇಸಿಗೆ ರಜೆ ಮುಗಿಸಿ, ಇಂದು ಖುಷಿ-ಉತ್ಸಾಹದಿಂದ ಶಾಲೆಗೆ ಬಂದ ಮಕ್ಕಳಿಗೆ ಶಾಕ್ ಕಾದಿತ್ತು. ಮಕ್ಕಳು ಬರುವಷ್ಟರಲ್ಲಿ ಶಾಲೆಯೇ ಸೀಸ್ ಆಗಿತ್ತು. ಶಾಲಾ ಆಡಳಿತ ಮಂಡಳಿಯವರು ಬ್ಯಾಂಕ್ನಿಂದ ಮಾಡಿದ್ದ ಸಾಲವನ್ನು ಮರುಪಾವತಿ ಮಾಡದ ಪರಿಣಾಮ, ಬ್ಯಾಂಕ್ ಅಧಿಕಾರಿಗಳು ಆ ಶಾಲೆಯನ್ನು ಮುಟ್ಟುಗೋಲು (Ballari School Seized) ಹಾಕಿಕೊಂಡಿದ್ದರು. ಶಾಲೆಗೆ ಬೀಗ ಹಾಕಿದ್ದರು.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿರುವ ರಾಜೀವ್ ಗಾಂಧಿ ಸ್ಮಾರಕ ವಿದ್ಯಾ ಸಂಸ್ಥೆಯನ್ನು ಬ್ಯಾಂಕ್ ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ. ರಾಜ್ಯಾದ್ಯಂತ ಇಂದಿನಿಂದ ಶಾಲೆ ಮರು ಆರಂಭಗೊಂಡಿದೆ. ಅಂತೆಯೇ ಈ ಶಾಲೆಯ ಮಕ್ಕಳೂ ಬೆಳಗ್ಗೆಯೇ ಬಂದಿದ್ದಾರೆ. ಶಿಕ್ಷಕರೂ ಬಂದಿದ್ದರು. ಆದರೆ ವಿದ್ಯಾಸಂಸ್ಥೆ ಗೇಟ್ಗೆ ಸೀಲ್ ಹಾಕಲಾಗಿತ್ತು. ಶಾಲೆ ಆಡಳಿತ ಮಂಡಳಿ ಸಾಲ ಪಡೆದಿದ್ದ ಹಣಕಾಸು ಸಂಸ್ಥೆಯ ಬ್ಯಾನರ್ ಹಾಕಿಡಲಾಗಿತ್ತು. ಶಾಲೆ ಗೇಟ್ ತೆರೆಯದ ಕಾರಣ ಶಿಕ್ಷಕರೊಬ್ಬರು ಅಲ್ಲೇ ಸಮೀಪದಲ್ಲಿ ಇದ್ದ ಮರದ ಕೆಳಗೆ ಒಂದಷ್ಟು ಮಕ್ಕಳಿಗೆ ಪಾಠ ಮಾಡಿದ್ದಾರೆ.
ಇದನ್ನೂ ಓದಿ: Viral News : ಇವರು ಭಲೇ ಸ್ಟೂಡೆಂಟ್ಸ್, ಶಾಲೆಯನ್ನೇ ಮಾರಾಟಕ್ಕೆ ಇಟ್ಟಿದ್ದಾರೆ ನೋಡಿ!
ಸಿರಗುಪ್ಪ ಪಟ್ಟಣದಲ್ಲಿರುವ ರಾಜೀವ್ ಗಾಂಧಿ ಸ್ಮಾರಕ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯು ಆಂಧ್ರಪ್ರದೇಶ ಮೂಲದ ಇನ್ಕ್ರೆಡ್ ಫೈನಾನ್ಸಿಯಲ್ ಲಿಮಿಟೆಡ್ ಎಂಬ ಹಣಕಾಸು ಸಂಸ್ಥೆಯಿಂದ ಒಂದು ಕೋಟಿ ರೂ.ಗೂ ಅಧಿಕ ಮೊತ್ತದ ಸಾಲ ಪಡೆದುಕೊಂಡಿದೆ. ಆದರೆ ಅದನ್ನು ಮರುಪಾವತಿ ಮಾಡದೆ ಇರುವ ಹಿನ್ನೆಲೆಯಲ್ಲಿ ಆ ಬ್ಯಾಂಕ್ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ನಿಂದ ನೋಟಿಸ್ ತಂದು ವಿದ್ಯಾಸಂಸ್ಥೆಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇನ್ನು ಶಾಲಾ ಆಡಳಿತ ಮಂಡಳಿ ವಿರುದ್ಧ ಪಾಲಕರು ಕಿಡಿಕಾರಿದ್ದಾರೆ. ನಮ್ಮ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದಿದ್ದಾರೆ. ಹಾಗೇ, ಮಕ್ಕಳನ್ನು ಹೊರಗೆ ಕೂರಿಸಿ ಪಾಠ ಮಾಡುವುದು ಬೇಡ, ಬೇರೆ ವ್ಯವಸ್ಥೆ ಮಾಡಿ ಎಂದು ಶಿಕ್ಷಕರಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.