Site icon Vistara News

Modi Birthday | ನರೇಂದ್ರ ಮೋದಿ ಜನ್ಮದಿನ ಪ್ರಯುಕ್ತ 15 ದಿನಗಳ ಕಾಲ ಆರೋಗ್ಯ ರಕ್ಷಣೆ ವಿಶೇಷ ಅಭಿಯಾನ

Modi Birthday

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Modi Birthday) ಅವರ ಜನ್ಮದಿನದ ಪ್ರಯುಕ್ತ ಸೆಪ್ಟೆಂಬರ್‌ 17 ರಿಂದ ಅ.2ರಂದು ಮಹಾತ್ಮ ಗಾಂಧಿ ಜಯಂತಿವರೆಗೆ ರಾಜ್ಯದಲ್ಲಿ ಆರೋಗ್ಯ ತಪಾಸಣೆ, ರಕ್ತದಾನ ಸೇರಿದಂತೆ ಆರೋಗ್ಯ ರಕ್ಷಣೆಯ ವಿಶೇಷ ಅಭಿಯಾನ ನಡೆಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಈ ಅಭಿಯಾನಕ್ಕೆ ಸೆಪ್ಟೆಂಬರ್‌ 17 ರಂದು ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ(ಬಿಎಂಸಿಆರ್‌ಐ)ಯಲ್ಲಿ ಚಾಲನೆ ದೊರೆಯಲಿದೆ.

ಈ ಅಭಿಯಾನದ ರೂಪುರೇಷೆ ಸಿದ್ಧಪಡಿಸಲು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ವಿವಿಧ ಆಸ್ಪತ್ರೆಗಳ ನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದ ಆರೋಗ್ಯಾಧಿಕಾರಿಗಳೊಂದಿಗೆ ವಿಡಿಯೋ ಸಭೆ ನಡೆಸಿ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಜನರಲ್ಲಿ ಹೆಚ್ಚು ಅರಿವು ಇಲ್ಲ. ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯ ನಡೆಯಬೇಕು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | ಈಗ ಭಾರತಕ್ಕೆ ಚೀತಾಗಳು ಬರುತ್ತಿರುವುದೇ ಕಾಂಗ್ರೆಸ್​ನಿಂದ; ಫೋಟೋ ಟ್ವೀಟ್ ಮಾಡಿ, ಪ್ರತಿಪಾದಿಸಿದ ಪಕ್ಷ

ರಾಜ್ಯದಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದಾಗಿ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಆದ್ದರಿಂದ ಮಧುಮೇಹ, ರಕ್ತದೊತ್ತಡ ಮೊದಲಾದ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ಎಷ್ಟು ಎಂಬುದನ್ನು ಪತ್ತೆ ಮಾಡಬೇಕಿದೆ. ಆರೋಗ್ಯ ಉಪಕೇಂದ್ರಗಳ ವ್ಯಾಪ್ತಿಯಲ್ಲಿ 15 ದಿನಗಳ ಕಾಲ ನಿರಂತರವಾಗಿ ಈ ಕಾರ್ಯ ನಡೆಯಬೇಕಿದೆ. ಆಶಾ ಕಾರ್ಯಕರ್ತೆಯರಿಗೆ ಈ ಬಗ್ಗೆ ತಿಳಿಸಿ, ಗುರಿ ನಿಗದಿ ಮಾಡಿ ಜನರನ್ನು ಉಪಕೇಂದ್ರಕ್ಕೆ ಕರೆದುಕೊಂಡು ಬರಲು ಸೂಚಿಸಬೇಕು. ರಾಜ್ಯದಲ್ಲಿ ಕೋವಿಡ್‌ ಮೂರನೇ ಡೋಸ್‌ ಪ್ರಮಾಣ ಶೇ.20 ರಷ್ಟು ಮಾತ್ರ ಆಗಿದೆ. ಈ ಹದಿನೈದು ದಿನಗಳಲ್ಲಿ ಲಸಿಕಾಕರಣವು ದೊಡ್ಡ ಮಟ್ಟದಲ್ಲಿ ನಡೆಯಲು ಕ್ರಮ ವಹಿಸಬೇಕು. ಎನ್‌ಜಿಒಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳನ್ನು ಆಹ್ವಾನಿಸಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ಕರೆ ನೀಡಬೇಕು ಎಂದು ಸೂಚಿಸಿದರು.

ರಾಜ್ಯದಲ್ಲಿ ಕ್ಯಾನ್ಸರ್‌ ತಪಾಸಣೆಯನ್ನು ಕೂಡ ಮಾಡಬೇಕು. ಜಿಲ್ಲಾ ಮಟ್ಟ ಅಥವಾ ತಾಲೂಕು ಮಟ್ಟದಲ್ಲಿ ತಪಾಸಣೆ ವ್ಯವಸ್ಥೆ ಮಾಡಿ, ಜನರೇ ಮುಂದೆ ಬಂದು ತಪಾಸಣೆ ಮಾಡಿಸಿಕೊಳ್ಳಲು ಅರಿವು ಮೂಡಿಸಬೇಕು. ಐದು ವರ್ಷಕ್ಕೊಮ್ಮೆ ಇಂತಹ ಕಾರ್ಯಕ್ರಮ ನಡೆಯಬೇಕು. ಹೀಗೆ ತಪಾಸಣೆ ಮಾಡಿದರೆ ಸಾವುಗಳನ್ನು ತಪ್ಪಿಸಬಹುದು. ಜತೆಗೆ 8, 9, 10 ನೇ ವರ್ಷ ವಯಸ್ಸಿನ ಮಕ್ಕಳಿಗೆ ಕಣ್ಣಿನ ತಪಾಸಣೆ ಮಾಡಬೇಕು ಎಂದು ಸೂಚಿಸಿದರು.

1 ಕೋಟಿ ಆಯುಷ್ಮಾನ್‌ ಕಾರ್ಡ್‌ ವಿತರಣೆಯ ಗುರಿ
ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಕಾರ್ಡ್‌ಗಳನ್ನು 35 ಲಕ್ಷ ಜನರಿಗೆ ನೀಡಲಾಗಿದೆ. ಇನ್ನೂ 65 ಲಕ್ಷದಷ್ಟು ಕಾರ್ಡ್‌ಗಳನ್ನು ನೀಡಿ 1 ಕೋಟಿಯ ಗುರಿಯನ್ನು ತಲುಪಬೇಕು. ದೇಶದಲ್ಲಿ ಕರ್ನಾಟಕವೇ 1 ಕೋಟಿಯ ಗುರಿಯನ್ನು ಮೊದಲು ತಲುಪಬೇಕು ಎಂದು ಸಚಿವ ಡಾ.ಕೆ.ಸುಧಾಕರ್‌ ಸೂಚನೆ ನೀಡಿದರು.

ಪ್ರತಿ ದಿನ ಮಾಡುವ ಕೆಲಸಗಳೇ ಆರೋಗ್ಯ ರಕ್ಷಣೆಗೆ ಸಾಕು ಎಂಬ ತಪ್ಪು ಭಾವನೆ ಜನರಲ್ಲಿದೆ. ಆದ್ದರಿಂದ ಯೋಗ, ಧ್ಯಾನ, ಪ್ರಾಣಾಯಾಮದ ಬಗ್ಗೆಯೂ ಈ ಅಭಿಯಾನದಲ್ಲಿ ಒತ್ತು ನೀಡಬೇಕು. ಇದಕ್ಕಾಗಿ ಯೋಗ ಸಂಸ್ಥೆಗಳು, ಶಾಲಾ ಕಾಲೇಜುಗಳು, ಸಂಘ ಸಂಸ್ಥೆಗಳ ಸಹಕಾರ ಪಡೆಯಬಹುದು. ಮಾತೃ ಮರಣ, ಶಿಶು ಮರಣ ಇಳಿಕೆಗೂ ಈ ಅಭಿಯಾನದಲ್ಲಿ ಗಮನಹರಿಸಬೇಕು ಎಂದು ಸಚಿವರು ಸೂಚನೆ ನೀಡಿದರು.

ರಕ್ತದಾನ, ಕ್ಷಯಮುಕ್ತ ಅಭಿಯಾನ
ಪ್ರತಿ ಆರೋಗ್ಯ ಕೇಂದ್ರಗಳಿಗೆ ಈ ಹದಿನೈದು ದಿನಗಳಲ್ಲಿ ಒಂದು ಗುರಿಯನ್ನು ನೀಡಿ ರಕ್ತ ಸಂಗ್ರಹ ಮಾಡಬೇಕು. ಹಾಗೆಯೇ ಅಂಗಾಂಗಗಳ ದಾನಕ್ಕೆ ಹೆಸರು ನೋಂದಾಯಿಸುವ ಚಟುವಟಿಕೆ ನಡೆಸಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಮಾತೃ ಮರಣದ ಕುರಿತು ಡೆತ್‌ ಆಡಿಟ್‌ ನಡೆಸಬೇಕು. ಹಾಗೆಯೇ ಪ್ರತಿ ಆಸ್ಪತ್ರೆಗಳಲ್ಲಿ ಪ್ರತಿ ಮರಣದ ಬಗ್ಗೆಯೂ ಡೆತ್‌ ಆಡಿಟ್‌ ಮಾಡುವ ಕ್ರಮ ಜಾರಿ ಮಾಡಬೇಕು ಎಂದು ಸಚಿವ ಡಾ.ಕೆ.ಸುಧಾಕರ್‌ ಸೂಚಿಸಿದರು.
ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್‌ಕುಮಾರ್‌ ಮಾತನಾಡಿ, ರಾಜ್ಯದಲ್ಲಿ 248 ರಕ್ತನಿಧಿ ಕೇಂದ್ರಗಳಿದ್ದು, ಇವುಗಳಿಗೆ ಸೂಚನೆ ನೀಡಿ ರಕ್ತ ಸಂಗ್ರಹ ಪ್ರಮಾಣ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಇದೇ ರೀತಿ ಕ್ಷಯ ಮುಕ್ತ ಅಭಿಯಾನದ ಬಗ್ಗೆಯೂ ಅರಿವು ಮೂಡಿಸಲಾಗುವುದು ಎಂದರು.

ಕಾರ್ಯಕ್ರಮಗಳು
ರಕ್ತದಾನ, ಆಯುಷ್ಮಾನ್‌ ಭಾರತ್‌ ಕಾರ್ಡ್‌ ವಿತರಣೆ, ಅಂಗಾಂಗ ದಾನ ಅಭಿಯಾನ, ಕೋವಿಡ್‌ ಬೂಸ್ಟರ್‌ ಲಸಿಕೆ ವಿತರಣೆ, ಮಕ್ಕಳ ಆರೋಗ್ಯ ತಪಾಸಣೆ, ಕ್ಯಾನ್ಸರ್‌ ತಪಾಸಣೆ, ಕಣ್ಣಿನ ತಪಾಸಣೆ ಹಾಗೂ ವೃದ್ಧರು ಮತ್ತು ಶಾಲಾ ಮಕ್ಕಳಿಗೆ ಕನ್ನಡಕ ವಿತರಣೆ, ಮಕ್ಕಳು ಹಾಗೂ ವೃದ್ಧರಿಗೆ ಕಿವಿ ಆರೋಗ್ಯ ತಪಾಸಣೆ, ಗರ್ಭಿಣಿ ಹಾಗೂ ಮಕ್ಕಳಿಗಾಗಿ ಅನಿಮಿಯಾ ತಪಾಸಣೆ. ಅಸಾಂಕ್ರಾಮಿಕ ರೋಗಗಳ ತಪಾಸಣೆ, ವಿಶೇಷವಾಗಿ ಯುವಜನರಲ್ಲಿ ಹಾಗೂ ಮಕ್ಕಳಲ್ಲಿ ಹೃದಯ ಸಂಬಂಧಿ ರೋಗಗಳ ತಪಾಸಣೆ, ಮಧುಮೇಹ ತಪಾಸಣೆ, ಆಹಾರ ಸುರಕ್ಷತೆಯಡಿ ಈಟ್‌ ರೈಟ್‌ ಅಭಿಯಾನ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ನಕ್ಸಲರ ಅಡ್ಡೆಯಾಗಿತ್ತು ಮಠ ಎಂದ ಯತ್ನಾಳ್‌: ಹೈಕೋರ್ಟ್‌ CJಗೆ ಪತ್ರ

Exit mobile version