Site icon Vistara News

School Toilet | ಶಾಲೆಯಲ್ಲಿ ಬಹಿರ್ದೆಸೆಗೆ ತೆರಳಿದ ವಿದ್ಯಾರ್ಥಿ ನೀರಿನ ಹೊಂಡದಲ್ಲಿ ಬಿದ್ದು ಸಾವು

ಸಾವು

ಯಾದಗಿರಿ: ಶಾಲೆಯ ಆವರಣದಲ್ಲಿ ಶೌಚಾಲಯವಿದ್ದರೂ ನೀರು ಇಲ್ಲದ ಪರಿಸ್ಥಿತಿ. ಇದು ವಿದ್ಯಾರ್ಥಿಯೊಬ್ಬ ಜೀವವನ್ನೇ ತೆಗೆದಿದೆ. ಶೌಚಾಲಯದಲ್ಲಿ ನೀರಿಲ್ಲವೆಂದು ಶಾಲೆಯ ಹಿಂಬದಿಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಿನ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ.

ಶೈಕ್ಷಣಿಕವಾಗಿ ಮೂಲ ಸೌಕರ್ಯಗಳನ್ನು ಒದಗಿಸಬೇಕೆಂಬ ಕೂಗು ಕೇಳಿಬರುತ್ತಲೇ ಇದ್ದರೂ ದಿವ್ಯ ನಿರ್ಲಕ್ಷ್ಯವಹಿಸುತ್ತಿರುವುದಕ್ಕೆ ಸಾರ್ವಜನಿಕವಾಗಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ನಾಗರಬಂಡಾ ಗ್ರಾಮದ 8ನೇ ತರಗತಿ ವಿದ್ಯಾರ್ಥಿ ಮಲ್ಲಿಕಾರ್ಜುನ ಲಿಂಗೇರಿ(14) ಮೃತ ಬಾಲಕ.

ಯಾದಗಿರಿ ತಾಲೂಕಿನ ಲಿಂಗೇರಿ ಸ್ಟೇಷನ್ ಬಳಿಯ ಪ್ರೌಢಶಾಲೆಯಲ್ಲಿ ಘಟನೆ ನಡೆದಿದೆ. ಶಾಲೆಯ ಆವರಣದಲ್ಲಿ ಶೌಚಾಲಯವಿದ್ದರೂ ನೀರು ಇಲ್ಲದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಬಹಿರ್ದೆಸೆಗಾಗಿ ವಿದ್ಯಾರ್ಥಿ ಹೊಂಡದ ಸಮೀಪ ಹೋಗಿದ್ದ. ಈ ವೇಳೆ ಹೊಂಡಕ್ಕೆ ಜಾರಿ ಬಿದ್ದು ದುರಂತ ನಡೆದಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ, ವಿದ್ಯಾರ್ಥಿ ಮೃತದೇಹವನ್ನು ಹೊರತೆಗೆದಿದ್ದಾರೆ.

ಶಾಲೆಯ ಶೌಚಾಲಯದಲ್ಲಿ ವಿದ್ಯುತ್ ಸಮಸ್ಯೆಯಿಂದ ನೀರಿನ ಕೊರತೆಯಾಗಿದೆ. ವಿದ್ಯಾರ್ಥಿ ಹೊಂಡದ ಸಮೀಪ ಹೋಗಿದ್ದಾಗ ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟಿದ್ದಾನೆ. ಇದಕ್ಕೆ ಶಾಲೆಯ ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ ಸಮರ್ಪಕ ನೀರಿನ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ಬಿಇಒ ಚಂದ್ರಕಾಂತರೆಡ್ಡಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡು, ನೀರಿನ ಸೌಲಭ್ಯ ಕಲ್ಪಿಸಲು ಒತ್ತಾಯಿಸಿದ್ದಾರೆ.

ಇದನ್ನೂ ಓದಿ | Toilet Facility | ಮಂಡ್ಯದ ಬಸರಾಳು ಸರ್ಕಾರಿ ಶಾಲೆಯಲ್ಲಿ ಇಲ್ಲ ಶೌಚಾಲಯ; ವಿದ್ಯಾರ್ಥಿಗಳಿಗೆ ಬಯಲು ಬಹಿರ್ದೆಸೆಯೇ ಗತಿ

Exit mobile version