Site icon Vistara News

Karnataka Election: ಹಾಸನ ಟಿಕೆಟ್ಟೇ ಬಗೆಹರಿದಿಲ್ಲ, ರಾಜ್ಯದ ಸಮಸ್ಯೆ ಏನು ಪರಿಹರಿಸುತ್ತೀರಿ: ರೇವಣ್ಣ ವಿರುದ್ಧ ಎ.ಟಿ. ರಾಮಸ್ವಾಮಿ ಕಿಡಿ

A T Ramaswamy says to hd revanna that Hassan ticket confusion has not been resolved, what will you solve the problem of the state

ಹಾಸನ: ಹಾಸನ ಕ್ಷೇತ್ರದ (Karnataka Election 2023) ಟಿಕೆಟ್ ಸಮಸ್ಯೆಯನ್ನೇ ಬಗೆಹರಿಸಲು ಆಗಿಲ್ಲ, ಇನ್ನು ರಾಜ್ಯದ ಸಮಸ್ಯೆ ಏನು ಬಗೆಹರಿಸುತ್ತೀರಿ. ಜಿಲ್ಲೆಯಲ್ಲಿ ಗೊಂದಲ ಮಾಡುತ್ತಿರುವವರು ಯಾರು? ಬಿಜೆಪಿ ಮಾಡುತ್ತಿದೆಯಾ, ಬೇರೆ ಪಕ್ಷ ಮಾಡುತ್ತಿದೆಯಾ? ನಿಮ್ಮ ಸ್ವಾರ್ಥಕ್ಕಾಗಿ, ಕುಟುಂಬಕ್ಕಾಗಿ ಇಷ್ಟೆಲ್ಲ ಮಾಡುತ್ತಿದ್ದೀರಿ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ವಿರುದ್ಧ ಅರಕಲಗೂಡು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಕಿಡಿಕಾರಿದ್ದಾರೆ.

ಬಿಜೆಪಿ ಸೇರ್ಪಡೆಯಾದ ಬಳಿಕ ಮೊದಲ ಬಾರಿಗೆ ಹಾಸನ ಬಿಜೆಪಿ ಕಚೇರಿಗೆ ಬುಧವಾರ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಲೂರು ಜಾತ್ರೆಯಲ್ಲಿ ದೇವರ ಬಳಿ ರೈತರಿಗೆ, ನಾಡಿಗೆ ಒಳ್ಳೆಯದಾಗಲಿ ಎಂದು ಕೇಳಿರುವುದಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳುತ್ತಾರೆ. ಆದರೆ, ನಾನು ಬಗರ್‌ಹುಕುಂ ಸಾಗುವಳಿ ಪತ್ರ ವಿತರಣೆ ಬಗ್ಗೆ ಸಭೆ ನಡೆಸಿ ಹಕ್ಕುಪತ್ರ ನೀಡಲು ಹೋದರೆ ಮೀಟಿಂಗ್‌ಗೆ ಹೋಗಬೇಡಿ ಎಂದು ತಹಸೀಲ್ದಾರ್‌ಗೆ ಫೋನ್ ಮಾಡುತ್ತಾರೆ. ರೈತರಿಗೆ ಅನ್ನ ಕೊಡುವ ಬದಲು ಕಲ್ಲು ಹಾಕುತ್ತಾರೆ ಎಂದು ಹರಿಹಾಯ್ದರು.

ಡಿಸಿಸಿ ಬ್ಯಾಂಕ್‌ನಲ್ಲಿ ರೈತರ ಹೆಸರಿನಲ್ಲಿ ನಕಲಿ ಸಾಲ ಕೊಟ್ಟಿದ್ದಾರೆ. ರೈತರ ಹೆಸರು ಹೇಳುತ್ತಾರೆ ಆದರೆ, ಮಾಡುವುದು ಅನಾಚಾರ ಎಂದ ಅವರು, ಡಿಸಿಸಿ ಬ್ಯಾಂಕ್‌ ಬಗ್ಗೆ ಕೆಡಿಪಿ‌ ಮೀಟಿಂಗ್‌ನಲ್ಲಿ ಮಾತನಾಡಿದೆ. ರೇವಣ್ಣ ಅವರು ಮಾತನಾಡಬೇಡಿ ಅಂದರು, ಆದರೂ ಪ್ರಶ್ನೆ ಮಾಡಿದೆ. ಹಾಸನದಲ್ಲಿ ಇವತ್ತು ಏನು ನಡೆಯುತ್ತಿದೆ. ಇಡೀ ಜಿಲ್ಲೆಯನ್ನು ಇವರ ಕುಟುಂಬದ ಆಸ್ತಿ ಮಾಡಿಕೊಳ್ಳಲು ಹೊರಟಿದ್ದಾರಾ? ಜನರನ್ನು ಗುಲಾಮರನ್ನಾಗಿ ಮಾಡಿಕೊಳ್ಳಲು ಹೊರಟಿದ್ದೀರಾ? ಯಾರಿಗೋಸ್ಕರ ಕಿತ್ತಾಟ, ಅವರ ಕುಟುಂಬಕ್ಕಾಗಿ, ಸ್ವಂತಕ್ಕಾಗಿಯೇ ಎಂದು ಹರಿಹಾಯ್ದರು.

ಇದನ್ನೂ ಓದಿ: Border Dispute: ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ವಿಮೆ ಜಾರಿ ಮಾಡಬೇಕಾಗುತ್ತದೆ ಹುಷಾರ್‌ ಎಂದ ಸಿಎಂ ಬಸವರಾಜ ಬೊಮ್ಮಾಯಿ

ಯಾವುದೇ ಷರತ್ತು ಇಲ್ಲದೆ ಬಿಜೆಪಿ ಸೇರಿದ್ದೇನೆ

ನಾನು ಬಹಳ ಸಂತೋಷದಿಂದ ಭಾರತೀಯ ಜನತಾ ಪಾರ್ಟಿಯನ್ನು ಸೇರಿದ್ದೇನೆ. ಯಾವುದೇ ಷರತ್ತು, ಆಸೆ, ಆಕಾಂಕ್ಷೆ ಇಲ್ಲದೇ ಬಿಜೆಪಿ ಸೇರಿದ್ದೇನೆ. ನಾನು ಟಿಕೆಟ್ ಆಕಾಂಕ್ಷಿ ಕೂಡ ಅಲ್ಲ ಎಂಬುವುದನ್ನು ವರಿಷ್ಠರು ಹಾಗೂ ಕಾರ್ಯಕರ್ತರಿಗೆ ಸ್ಪಷ್ಟಪಡಿಸುತ್ತೇನೆ. ನಾನು ಬಡಜನರ ಸೇವೆ ಮಾಡಿ, ಅವರ ಪರ ಧ್ವನಿ ಎತ್ತಿದವನು. ಲೂಟಿಕೋರರು, ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಾ ಬಂದವನು. ವರಿಷ್ಠರು ನೀವು ದೆಹಲಿಗೆ ಬಂದೇ ಪಕ್ಷ ಸೇರ್ಪಡೆಯಾಗಬೇಕೆಂದು ಹೇಳಿದ್ದಕ್ಕೆ ಅಲ್ಲಿಗೆ ಹೋಗಿ ಬಿಜೆಪಿ ಸೇರ್ಪಡೆಯಾದೆ ಎಂದು ರಾಮಸ್ವಾಮಿ ತಿಳಿಸಿದರು.

ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯವರು ಅತ್ಯಂತ ಪ್ರೀತಿ ಗೌರವದಿಂದ ಸ್ವಾಗತ ಮಾಡಿಕೊಂಡಿದ್ದಾರೆ. ಅವರಿಗೆ ನಾನು ತುಂಬಾ ಆಭಾರಿಯಾಗಿದ್ದೇನೆ ಎಂದ ಅವರು, ಎಸ್‌ಸಿ ಒಳ ಮೀಸಲಾತಿಗಾಗಿ ಸದಾಶಿವ ಆಯೋಗದ ವರದಿ ಜಾರಿ ಮಾಡುವಂತೆ ಎಲ್ಲರೂ ಒತ್ತಾಯ ಮಾಡಿದರು. ಜಾರಿ ಆದ ಮೇಲೆ ಜನರನ್ನು ಎತ್ತಿಕಟ್ಟುವ ಕೆಲಸ‌ವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಆದರೆ, ಈ ಬಗ್ಗೆ ವಿರೋಧ ಪಕ್ಷದವರ ನಿಲುವೇನು ಎಂಬುವುದನ್ನು ಸ್ಪಷ್ಟಪಡಿಸಬೇಕು. ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿ ರಾಜಕೀಯ ಪಿತೂರಿ ಮಾಡುತ್ತಿರುವುದು ಸರಿಯಾದ ನಡೆಯಲ್ಲ ಎಂದು ಕಿಡಿಕಾರಿದರು.

ಇದನ್ನೂ ಓದಿ: Kiccha Sudeepa: ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಕಿಚ್ಚ ಸುದೀಪ್‌ ಮೆಚ್ಚುಗೆ: ಸುದ್ದಿಗೋಷ್ಠಿಯಲ್ಲಿ ಕಿಚ್ಚ ಹೇಳಿದ್ದೇನು?

ರಾಹುಲ್‌ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹವಾಗಿದ್ದು, ಈಗ ಹೋರಾಟ ಮಾಡುತ್ತಿದ್ದಾರೆ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಯಾಕೆ ಹೇರಿದರು. ಜಯಪ್ರಕಾಶ್ ನಾರಾಯಣ್, ದೇವೇಗೌಡರು, ರಾಮಕೃಷ್ಣ ಹೆಗಡೆ ಅವರು ಜೈಲಿಗೆ ಹೋದರು. ಆಗ ಪ್ರಜಾಪ್ರಭುತ್ವ ಸಮಾಧಿ ಆಗಿರಲಿಲ್ಲವೇ? ಜಯಲಲಿತಾ, ಲಾಲೂ ಪ್ರಸಾದ್ ಯಾದವ್ ಅವರನ್ನು ಜೈಲಿಗೆ ಹಾಕಿದ್ದರಲ್ಲಾ ಆಗ ಪ್ರಜಾಪ್ರಭುತ್ವ ಸತ್ತಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು, 2013ರಲ್ಲಿ ರಾಹುಲ್‌ ಗಾಂಧಿ ಸುಗ್ರೀವಾಜ್ಞೆ ಪತ್ರವನ್ನು ಹರಿದು ಬಿಸಾಕಿದ್ದರು. ಈಗ ಅವರ ಬುಡಕ್ಕೆ ಬಂದ ಮೇಲೆ, ನ್ಯಾಯಾಲಯದ ತೀರ್ಪು ಒಪ್ಪಿಕೊಳ್ಳದೆ ಹೋರಾಟ ಮಾಡುತ್ತಿರುವುದು ನಾಚಿಕೆಗೇಡಿನ ವಿಷಯ ಎಂದು ಹೇಳಿದರು.

ಬಿಜೆಪಿಯವರು ಅತ್ಯಂತ ಪ್ರೀತಿ, ವಿಶ್ವಾಸದಿಂದ, ಗೌರವಯುತವಾಗಿ ಆಹ್ವಾನ ಮಾಡಿದ್ದಾರೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನರೇಂದ್ರ ಮೋದಿ ಅವರು ಭಾರತವನ್ನು ಇಡೀ ವಿಶ್ವದಲ್ಲಿಯೇ ಮಾದರಿ ರಾಷ್ಟ್ರವನ್ನಾಗಿ ರೂಪಿಸುತ್ತಿದ್ದಾರೆ. ಭಾರತ ದೇಶದ ಘನತೆ, ಗೌರವವನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಪಕ್ಷ ಏನು ಹೇಳುತ್ತದೋ ನಾನು ಅದನ್ನು ಮಾಡುತ್ತೇನೆ. ಚುನಾವಣೆಗೆ ಸ್ಪರ್ಧಿಸುವ ವಿಷಯದಲ್ಲಿ ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದರು.

Exit mobile version