ಬೆಂಗಳೂರು: ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಮಂಗಳವಾರ ಬೆಳಗ್ಗೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
ಫೇಜರ್‌ಟೌನ್ ಬಡಾವಣೆಯಲ್ಲಿ ಇರುವ ಶಾಸಕರ ನಿವಾಸದ ಮೇಲೆ ೪೦ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಎಸಿಬಿ ಅಧಿಕಾರಿಗಳು ಶಾಸಕರ ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಒಟ್ಟು ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದೆ.
ಜಾರಿ ನಿರ್ದೇಶನಾಲಯದ ವರದಿಯನ್ನು ಆಧರಿಸಿ ಎಸಿಬಿ, ಶಾಸಕ ಜಮೀರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್ ದಾಖಲಿಸಿದೆ.
ಕಾಂಟೋನ್ಮೆಂಟ್ ರೈಲ್ವೆ ವಲಯದಲ್ಲಿರುವ ಶಾಸಕರ ನಿವಾಸ, ಸಿಲ್ವರ್ ಓಕ್ ಅಪಾರ್ಟ್‌ಮೆಂಟ್‌ನಲ್ಲಿ ಇರುವ ಫ್ಲ್ಯಾಟ್, ಸದಾಶಿವ ನಗರದಲ್ಲಿರುವ ಗೆಸ್ಟ್ ಹೌಸ್, ಬನಶಂಕರಿಯಲ್ಲಿರುವ ಜಿಕೆ ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದಲ್ಲಿರುವ ನ್ಯಾಶನಲ್ ಟ್ರಾವೆಲ್ಸ್ ಕಚೇರಿ ಮೇಲೆ ಎಸಿಬಿ ದಾಳಿ ನಡೆದಿದೆ. ತನಿಖೆ ಮುಂದುವರಿದಿದೆ.
ಕಳೆದ ವರ್ಷ ಇ.ಡಿ ದಾಳಿ
ಚಾಮರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಜಮೀರ್ ವಿರುದ್ಧ ಕಳೆದ ವರ್ಷ ಆಗಸ್ಟ್‌ನಲ್ಲಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. 4,000 ಕೋಟಿ ರೂ.ಗಳ ಐಎಂಎ ಹೂಡಿಕೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ತನಿಖೆ ಕೈಗೊಂಡಿತ್ತು. ಹಲವಾರು ಬಾರಿ ಇ.ಡಿ ಎದುರು ವಿಚಾರಣೆಗೂ ಹಾಜರಾಗಿದ್ದರು.
6 ತಿಂಗಳಿನ ಹಿಂದೆ ಐಟಿ ಇಲಾಖೆಯೂ ದಾಳಿ ನಡೆಸಿತ್ತು. ಶಾಸಕರ ಆಸ್ತಿಪಾಸ್ತಿಗಳ ಬಗ್ಗೆ ತನಿಖೆ ನಡೆಸಿತ್ತು. ಇದೀಗ ಎಸಿಬಿ ತನಿಖೆ ಕೈಗೊಂಡಿದೆ.
ಕೆ.ಜಿ.ಎಫ್ ಬಾಬು ನಿವಾಸಕ್ಕೆ ನಡೆದಿತ್ತು ದಾಳಿ
ಕೆಲ ದಿನಗಳ ಹಿಂದೆ ಕೆ.ಜಿ.ಎಫ್ ಬಾಬು ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಈ ಸಂದರ್ಭ ಜಮೀರ್ ಮತ್ತು ಕೆ.ಜಿ.ಎಫ್ ಬಾಬು ಅವರ ಹಣಕಾಸು ವ್ಯವಹಾರಗಳ ನಂಟಿನ ಬಗ್ಗೆ ಮಾಹಿತಿ ಲಭಿಸಿತ್ತು.
ಕೆ.ಜಿ.ಎಫ್ ಬಾಬು, ಶಾಸಕ ಜಮೀರ್ ಅವರಿಗೆ ಕೋಟ್ಯಂತರ ರೂ. ಸಾಲ ನೀಡಿದ್ದ. ಈ ಬಗ್ಗೆ ಇ.ಡಿಯಿಂದ ಎಸಿಬಿಗೆ ಪ್ರಸ್ತಾಪ ಸಲ್ಲಿಕೆಯಾಗಿತ್ತು. ಈ ವರದಿಯ ಆಧಾರದಲ್ಲಿ ಎಸಿಬಿ ಇಂದು ಬೆಳಗ್ಗೆ ಶಾಸಕ ಜಮೀರ್ ಬಂಗಲೆ, ಕಚೇರಿಗೆ ದಾಳಿ ನಡೆಸಿರುವ ಸಾಧ್ಯತೆ ಇದೆ.
ಶಾಸಕ ಜಮೀರ್ ಅವರ ಆದಾಯಕ್ಕಿಂತ ಆಸ್ತಿಯ ಪಾಲು ಹೆಚ್ಚಿದೆ ಎಂದು ಇ.ಡಿ ತನ್ನ ವರದಿಯಲ್ಲಿ ತಿಳಿಸಿತ್ತು. ದಾಳಿ ಹಿನ್ನೆಲೆಯಲ್ಲಿ ಜಮೀರ್ ನಿವಾಸದ ಸುತ್ತಮುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.