ಯಾದಗಿರಿ: ಇಲ್ಲೊಬ್ಬ ಟಿಪ್‌ಟಾಪ್ ಆಗಿ ಸಫಾರಿ ಧರಿಸಿ ರಸ್ತೆ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ ನಿಲ್ಲಿಸಿದ್ದಾನೆ. ಬಸ್ ಹತ್ತಿದವನೇ ನಿರ್ವಾಹಕನಿಗೆ ತಾನು ಟಿಕೆಟ್ ತಪಾಸಣೆ ಅಧಿಕಾರಿ ಎಂದು ಹೇಳಿ ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸಲು ಮುಂದಾಗಿದ್ದಾನೆ. ಆದರೆ, ಪ್ರಯಾಣಿಕರಿಗೆ ಅನುಮಾನ ಬಂದು ಐಡಿ ಕೇಳುತ್ತಿದ್ದಂಗೆ ನಿಜಬಣ್ಣ ಬಯಲಾಗಿದೆ.
ಸದ್ಯಕ್ಕೆ ಆತ ನಕಲಿ ಅಧಿಕಾರಿ ಎಂಬುದು ಮಾತ್ರ ಗೊತ್ತಾಗಿದ್ದು, ಯಾರು ಎಂಬ ಬಗ್ಗೆ ತಿಳಿದುಬಂದಿಲ್ಲ. ಕೆಎ.33, ಎಫ್ 0203 ಸಂಖ್ಯೆಯ ಸಾರಿಗೆ ಬಸ್ ಸುರಪುರದಿಂದ ಯಾದಗಿರಿಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಬಸ್ ನಿಲ್ಲಿಸಿ ಈತ ಟಿಕೆಟ್ ತಪಾಸಣಾ ಅಧಿಕಾರಿ ಎಂದು ಹೇಳಿಕೊಂಡು ತಪಾಸಣೆಯನ್ನು ಪ್ರಾರಂಭಿಸಿದ್ದಾನೆ.
ಸಫಾರಿ ಧರಿಸಿದ್ದರಿಂದ ಮೊದಲು ಯಾರಿಗೂ ಅನುಮಾನ ಬಂದಿಲ್ಲ. ಆದರೆ, ಆತನ ನಡವಳಿಕೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದರಿಂದ ಅನುಮಾನಗೊಂಡ ಪ್ರಯಾಣಿಕರು ಐಡಿ ಕಾರ್ಡ್ ಕೇಳಿದ್ದಾರೆ. ಇದರಿಂದ ಗಾಬರಿಗೊಂಡ ಆತ ಮೊದಲು ವಿಚಲಿತನಾಗಿದ್ದಾನೆ. ಕೊನೆಗೆ ಅಲ್ಲಿಂದ ಓಡಿಹೋಗುವ ಸಲುವಾಗಿ ಬಸ್ ಬಾಗಿಲ ಬಳಿ ಬರುವಷ್ಟರಲ್ಲಿ ಆತನಿಂದ ನಿರ್ವಾಹಕ ಮತ್ತು ಪ್ರಯಾಣಿಕರು ಸೇರಿ ಮೊಬೈಲ್ ಕಿತ್ತುಕೊಂಡಿದ್ದಾರೆ. ಆದರೂ ಅವರಿಂದ ತಪ್ಪಿಸಿಕೊಂಡ ನಕಲಿ ಅಧಿಕಾರಿ ಚಲಿಸುತ್ತಿರುವ ಬಸ್‌ನಿಂದ ಜಿಗಿದು ಕಿಲೋ ಮೀಟರ್ ದೂರದವರೆಗೂ ಓಡಿದ್ದಾನೆ.
ಯಾದಗಿರಿಯ ಸಾರಿಗೆ ಅಧಿಕಾರಿಗೆ ಬಸ್ ನಿರ್ವಾಹಕ ತಾವು ವಶಪಡಿಸಿಕೊಂಡಿದ್ದ ಮೊಬೈಲ್ ಒಪ್ಪಿಸಿದ್ದು, ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ಚಿನ್ನ, ಬೆಳ್ಳಿ, ಹಣ ಅಲ್ಲ; ಬೈಕ್‌ನಲ್ಲಿ ಬಂದು ಪಾಟ್, ಚಪ್ಪಲಿ ಕದಿಯುವ ಕಳ್ಳರು ಇವರು