ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದ ಮಹಿಳೆ ನಾಲ್ಕು ದಿನಗಳ ಕಾಲ ಹಾವಿನೊಂದಿಗೆ ಜೀವನ ಮಾಡಿದ್ದಾಳೆ! ಊರಿನ ಜನರೆಲ್ಲಾ ಏನಾಗಿದೆಯಮ್ಮಾ ನಿನಗೆ ಹಾವನ್ನು ಮನೇಲಿಟ್ಟುಕೊಂಡಿದ್ದೀಯಲ್ಲಾ ಬಿಟ್ಟು ಬಿಡಮ್ಮಾ ಎಂದರೂ ಆಕೆ ಕೇಳಲೇ ಇಲ್ಲ. ಮನೆಗೆ ಬಂದ ಹಾವನ್ನು ಮನೆಯಲ್ಲೇ ಇಟ್ಟುಕೊಂಡು ಪ್ರೀತಿ ತೋರಿದ್ದು ಯಾಕೆಂದರೆ, ಗಂಡನೇ ಹಾವಿನ ರೂಪದಲ್ಲಿ ಬಂದಿದ್ದಾನೆ ಎನ್ನುವುದು ಆಕೆಯ ನಂಬಿಕೆ!
ಏನಾಯಿತು ಅಲ್ಲಿ?
ಶಾರವ್ವ ಕಂಬಾರ ಅವರು ಕುಲಹಳ್ಳಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾರೆ. ಅವರ ಗಂಡ ಮೌನೇಶ ಎರಡು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಕೆಲವು ದಿನದ ಹಿಂದೆ ಮನೆಯಲ್ಲಿ ಅವರಿಗೆ ಒಂದು ಕೇರೆ ಹಾವು ಕಾಣಿಸಿದೆ. ಶಾರವ್ವ ಹಾವನ್ನು ನೋಡಿ ತುಂಬ ಖುಷಿಯಾದರು. ಹಾವನ್ನು ಚಾಪೆಯಲ್ಲೇ ಇಟ್ಟುಕೊಂಡು ಸಾಕಿದ್ದಾರೆ. ಹಾವು ಹಲವು ಬಾರಿ ಮನೆಯಿಂದ ಹೊರಗೆ ಹೋಗಲು ಯತ್ನಿಸಿದರೂ ಅವರು ಬಿಟ್ಟಿಲ್ಲ.
ಈ ನಡುವೆ ಶಾರವ್ವ ತಾವು ಮನೆಯಲ್ಲಿ ಮಾಡುವ ಎಲ್ಲ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಹಾವು ಕೂಡಾ ಯಾಕೋ ಹೆಚ್ಚು ಕಿರಿಕಿರಿ ಮಾಡದೆ ಮನೆಯೊಳಗೆ ವಾಸ ಮಾಡಿದೆ. ಈ ನಡುವೆ, ಅಕ್ಕಪಕ್ಕದ ಮನೆಯಲ್ಲಿ ಯಾರಿಗೋ ಈ ಮನೆಯಲ್ಲಿ ಹಾವು ಇದೆ, ಶಾರವ್ವ ಅದರೊಂದಿಗೇ ವಾಸವಾಗಿದ್ದಾಳೆ ಎನ್ನುವ ಸಂಗತಿ ಗೊತ್ತಾಗಿ ಊರಿಗೆಲ್ಲ ತಿಳಿಯಿತು.
ಊರಿನ ಕೆಲವರು ಬಂದು ಹಾವನ್ನು ಬಿಟ್ಟು ಬಿಡವ್ವ ಎಂದು ಶಾರವ್ವನನ್ನು ಕೇಳಿಕೊಂಡಿದ್ದಾರೆ. ಆದರೆ, ಶಾರವ್ವ ಮಾತ್ರ ʻಅದು ಏನೂ ಮಾಡುವುದಿಲ್ಲ, ನೀವು ಕೊಲ್ಲಬೇಡಿʼ ಎಂದಿದ್ದಾರೆ. ಗ್ರಾಮಸ್ಥರು ಕೊನೆಗೂ ಶಾರವ್ವನ ಮನವೊಲಿಸಿ ಚಾಪೆ ಸಮೇತವಾಗಿ ಹಾವು ಹೊತ್ತು ತಂದು ಚೀಲವೊಂದರಲ್ಲಿ ಹಾಕಿ ಗ್ರಾಮದ ಹೊರವಲಯದಲ್ಲಿ ಬಿಟ್ಟು ಬಂದಿದ್ದಾರೆ.
ಗಂಡ ಬರ್ತಾನೆ ಎಂಬ ನಂಬಿಕೆ
ಎರಡು ವರ್ಷಗಳ ಹಿಂದೆ ಶಾರವ್ವ ಅವರ ಗಂಡ ಮೌನೇಶ ಮೃತಪಟ್ಟಿದ್ದು, ಆಗಿನಿಂದಲೂ ಪತಿ ನಾನಾ ರೂಪದಲ್ಲಿ ಮನೆಗೆ ಬರುತ್ತಾನೆ ಎಂದು ಶಾರವ್ವ ನಂಬಿದ್ದಾರೆ. ಪತಿಯ ಅಗಲಿಕೆಯಿಂದ ಮಾನಸಿಕವಾಗಿ ನೊಂದಿರುವ ಶಾರವ್ವ ಹೀಗೆ ವರ್ತಿಸಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಹಾವಿನ ರೂಪದಲ್ಲಿ ಗಂಡ ಬಂದಿದ್ದಾನೆ ಎಂದುಕೊಂಡು ಸುಮ್ಮನಿದ್ದಳು, ನಾವೇ ಆಕೆಯನ್ನು ಸಂತೈಸಿ ಹಾವು ಬಿಟ್ಟು ಬಂದಿದ್ದೇವೆ, ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಮೊಸಳೆ ಪಾರ್ಕ್ ಆರಂಭಿಸಿ ಎಂದು ಅಂಗಲಾಚುತ್ತಿರುವ ಜನರು