ಮಂಗಳೂರು: ಠಾಣೆಗೆ ಕರೆದು ವಿಚಾರಣೆ ಮಾಡುವ ವೇಳೆ ಯುವತಿಯೊಬ್ಬಳು ಮಹಿಳಾ ಪೊಲೀಸ್ ಸಿಬ್ಬಂದಿಗೆ ಕಾಲಿನಿಂದ ಒದ್ದು ಪುಂಡಾಟಿಕೆ ಮೆರೆದಿರುವ ಘಟನೆ ನಗರದ (Mangalore News) ಕದ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಡ್ರಗ್ಸ್ ಸೇವನೆ ಶಂಕೆ ಮೇರೆಗೆ ಯುವತಿಯನ್ನು ಪೊಲೀಸರು ಠಾಣೆಗೆ ಕರೆತಂದಿದ್ದಾಗ ಯುವತಿ ರಂಪಾಟ ಮಾಡಿದ್ದಾಳೆ.
ಮೆಡಿಕಲ್ ಸ್ಟೋರ್ ಬಳಿ ಅಮಲಿನಲ್ಲಿದ್ದಂತೆ ಯುವತಿ ವರ್ತಿಸುತ್ತಿದ್ದಳು. ಹೀಗಾಗಿ ಆಕೆಯನ್ನು ಪೊಲೀಸರು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾಗ ಮಹಿಳಾ ಪೊಲೀಸ್ ಸಿಬ್ಬಂದಿಗೆ ಕಾಲಿನಿಂದ ಒದ್ದಿದ್ದಾಳೆ. ಯುವತಿಯ ರಂಪಾಟದಿಂದ ಮಹಿಳಾ ಪೊಲೀಸ್ ಸಿಬ್ಬಂದಿ ಹೈರಾಣಾಗಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸೆ.1 ರಂದು ನಡೆದಿದ್ದ ಈ ಘಟನೆಯ ವಿಡಿಯೊ ಲಭ್ಯವಾಗಿದೆ.
ಇದನ್ನೂ ಓದಿ | Chikkamagaluru News: ಎತ್ತಿನ ಗಾಡಿ ಸ್ಪರ್ಧೆಯಲ್ಲಿ ನೊಗ ಹಿಡಿಯಲು ಹೋಗಿ ಯುವಕ ಸಾವು
ತನಿಖೆ ವೇಳೆ ಒಂಟಿಯಾಗಿ ವಾಸವಾಗಿದ್ದ ಯುವತಿ ಮಾನಸಿಕ ಖಿನ್ನತೆಯಿಂದ ಬಳುತ್ತಿದ್ದಳು ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಮಾದಕ ದ್ರವ್ಯ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿದೆ. ನಂತರ ಆಕೆಯನ್ನು ಪೋಷಕರ ವಶಕ್ಕೆ ಒಪ್ಪಿಸಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.