ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಆಮ್ ಆದ್ಮಿ ಪಾರ್ಟಿಗೆ ಗುಡ್ ಬೈ ಹೇಳಿ ಬುಧವಾರ ಬೆಳಗ್ಗೆ ಕಮಲ ಪಾಳಯ ಸೇರಿಕೊಂಡರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ಅವರು ಬಿಜೆಪಿ ಕಚೇರಿಯಲ್ಲಿ (Karnataka politics) ಪಕ್ಷ ಸೇರಿದರು.
ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಶಾಲು ಹಾಕಿ, ಧ್ವಜ ನೀಡಿ ಭಾಸ್ಕರ್ ರಾವ್ ರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಭಾಸ್ಕರ ರಾವ್ ಅವರ ಜತೆ ಅವರ ಬೆಂಬಲಿಗರು ಕೂಡಾ ಬಿಜೆಪಿಗೆ ಸೇರ್ಪಡೆಯಾದರು. ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷರಾಗಿದ್ದ ಭಾಸ್ಕರ ರಾವ್ ಅವರು ಆಪ್‌ನ ಪ್ರಣಾಳಿಕೆ ಸಮಿತಿಯಲ್ಲೂ ಇದ್ದರು.
ಆಪ್ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ
ʻʻಪೊಲೀಸ್ ಉದ್ಯೋಗದಿಂದ ನಿವೃತ್ತಿ ಪಡೆದುಕೊಂಡು ರಾಜಕೀಯದಲ್ಲಿ ಬದಲಾವಣೆ ತರಲು ಬಯಸಿದ್ದೆ. ಭಾರಿ ನಿರೀಕ್ಷೆಯೊಂದಿಗೆ ಆಮ್ ಆದ್ಮಿ ಪಾರ್ಟಿಯನ್ನು ಸೇರಿಕೊಂಡಿದ್ದೆನಾದರೂ ಈ ಪಕ್ಷ ಕರ್ನಾಟಕದಲ್ಲಿ ಬೆಳೆಯುತ್ತಿಲ್ಲ ಎನ್ನುವುದು ಮನವರಿಕೆ ಆಯಿತು. ಇದಕ್ಕೆ ಪಕ್ಷ ಮತ್ತು ಅದರ ನಾಯಕರ ಕಾರ್ಯ ಶೈಲಿಯೂ ಕಾರಣʼʼ ಎಂದು ಬಿಜೆಪಿ ಸೇರಿದ ಬಳಿಕ ಭಾಸ್ಕರ ರಾವ್ ಹೇಳಿದರು.
ʻʻಈಗ ನಾನು ಸನಾತನ ಧರ್ಮದ ಪಕ್ಷವನ್ನು ಸೇರಿಕೊಂಡಿದ್ದೇನೆ, ರಾಷ್ಟ್ರೀಯತೆಯನ್ನು ಅಳವಾಗಿ ಮೈಗೂಡಿಸಿಕೊಂಡಿರುವ ಪಕ್ಷ ಬಿಜೆಪಿ. ಬಾಲ್ಯದಿಂದಲೂ ಸನಾತನ ಧರ್ಮ, ರಾಷ್ಟ್ರೀಯತೆಗೆ ನಾನು ಬದ್ಧವಾಗಿದ್ದೇನೆ. ಹಾಗಾಗಿ ನಾನು ಬಿಜೆಪಿಗೆ ಸೇರ್ಪಡೆ ಆಗಿದ್ದೇನೆʼʼ ಎಂದು ಹೇಳಿದರು.
ರಾಜಕೀಯ ಅನುಭವ ಪಡೆದ ಅಧಿಕಾರಿ
ʻʻಭಾಸ್ಕರ್ ರಾವ್ ಅರು ನಿವೃತ್ತಿ ನಂತರ ಆಮ್ ಆದ್ಮಿ ಪಾರ್ಟಿ ಸೇರಿ ರಾಜಕೀಯ ಅನುಭವ ಪಡೆದಿದ್ದಾರೆ. ಡಬಲ್ ಎಂಜಿನ್ ಸರ್ಕಾರದಿಂದ ಕಲ್ಯಾಣ ಕರ್ನಾಟಕ ಸಾಧ್ಯ ಎಂದು ಪಕ್ಷಕ್ಕೆ ಬಂದಿದ್ದಾರೆ. ಇವತ್ತು ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಬೇರೆ ಬೇರೆ ನಾಯಕರು ಇನ್ನೂ ಬಿಜೆಪಿ ಸೇರಲು ರೆಡಿ ಆಗಿದ್ದಾರೆ. ಅವರ ಆಡಳಿತಾತ್ಮಕ ಅನುಭವ ಗಳನ್ನು ಪಾರ್ಟಿ ಸ್ವೀಕಾರ ಮಾಡುತ್ತದೆʼʼ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಭಾಸ್ಕರ ರಾವ್ ಅವರು ಯಾವುದೇ ಆಸೆ ಆಕಾಂಕ್ಷೆ ಇಟ್ಟುಕೊಂಡು ಪಕ್ಷಕ್ಕೆ ಬಂದಿಲ್ಲ ಎಂದ ನಳಿನ್, ಅವರಿಗೆ ಪಕ್ಷದಲ್ಲಿ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಭಾಸ್ಕರ ರಾವ್ ಅವರು ಮಂಗಳವಾರವೇ ಬಿಜೆಪಿ ಕಚೇರಿಗೆ ಆಗಮಿಸಿ ಮಾತುಕತೆ ನಡೆಸಿದ್ದರು.
ರಾಜಕೀಯ ಮಹತ್ವಾಕಾಂಕ್ಷೆಯ ಅಧಿಕಾರಿ
ಭಾಸ್ಕರ್ ರಾವ್ ಅವರು 1990ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿ ಹುಟ್ಟಿ ಬೆಳೆದ ಅವರು 2019ರ ಆಗಸ್ಟ್ 1ರಿಂದ 2020ರ ಆಗಸ್ಟ್ 1ರವರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರೂ ಆಗಿದ್ದರು.
2022ರ ಏಪ್ರಿಲ್‌ನಲ್ಲಿ ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಅವರು ಆಮ್ ಆದ್ಮಿ ಪಾರ್ಟಿ ಸೇರಿದ್ದರು. ಮೊದಲು ಅವರು ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು. ಆಪ್ ರಾಜ್ಯ ಉಪಾಧ್ಯಕ್ಷರಾಗಿ ರಾಜ್ಯವಿಡೀ ಸುತ್ತಿದ್ದ ಭಾಸ್ಕರ ರಾವ್ ಅವರನ್ನು ಇತ್ತೀಚೆಗೆ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ವೇದಿಕೆ ರೂಪಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಭಾಸ್ಕರ್ ರಾವ್ ಅವರು ಎಎಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಆದರೆ, ಪಕ್ಷ ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎಂಬ ಕಾರಣಕ್ಕಾಗಿ ಅವರು ಆಮ್ ಆದ್ಮಿಯಿಂದ ದೂರ ಸರಿದಿದ್ದಾರೆ.
ಬಸವನಗುಡಿಯ ಟಿಕೆಟ್ ಆಕಾಂಕ್ಷಿಯಾಗಿದ್ದರು
ಭಾಸ್ಕರ್ ರಾವ್ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಡಿದ್ದಾಗ ಅವರು ಬಸವನ ಗುಡಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಹೇಳಲಾಗುತ್ತಿತ್ತು. ಆಮ್ ಆದ್ಮಿ ಪಾರ್ಟಿ ಸೇರಿದ ಬಳಿಕ ಈ ಟಿಕೆಟ್ ಅವರ ಪಾಲಿಗೆ ಭದ್ರವಾಗಿತ್ತು. ಆಮ್ ಆದ್ಮಿ ಪಾರ್ಟಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಈಗ ಬಿಜೆಪಿಯಲ್ಲಿ ಆ ಅವಕಾಶ ಕಾಣಿಸುತ್ತಿಲ್ಲ. ಹಾಲಿ ಶಾಸಕರಾಗಿರುವ ರವಿ ಸುಬ್ರಹ್ಮಣ್ಯ ಅವರೇ ಈ ಬಾರಿಯೂ ಬಿಜೆಪಿ ಟಿಕೆಟ್ ಪಡೆಯುವುದು ಬಹುತೇಕ ಪಕ್ಕಾ ಆಗಿದೆ. ಕಾಂಗ್ರೆಸ್‌ನಿಂದ ಅವರ ಪ್ರತಿಸ್ಪರ್ಧಿಯಾಗಿ ಯು.ಬಿ. ವೆಂಕಟೇಶ್ ಅವರಿಗೆ ಟಿಕೆಟ್ ಆಗಿದೆ.
ಇದನ್ನೂ ಓದಿ : ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ನಾಳೆ ಬಿಜೆಪಿ ಸೇರ್ಪಡೆ; ಅರವಿಂದ್ ಕೇಜ್ರಿವಾಲ್ ಭೇಟಿಗೆ ಮುನ್ನ ಬಿಗ್ ಶಾಕ್