Site icon Vistara News

ಆಮ್‌ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಬಿಜೆಪಿ ಸೇರ್ಪಡೆ; ಅರವಿಂದ್‌ ಕೇಜ್ರಿವಾಲ್‌ ಭೇಟಿಗೆ ಮುನ್ನ ಬಿಗ್‌ ಶಾಕ್‌

AAP leader Bhaskar Rao with Minister R Ashok

#image_title

ಬೆಂಗಳೂರು: ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಉಪಾಧ್ಯಕ್ಷರಾಗಿ (AAP State vice president) ಸಕ್ರಿಯರಾಗಿದ್ದ, ಸಮಾಜಸೇವೆಯಲ್ಲಿ ನಿರತರಾಗಿದ್ದ ಮಾಜಿ ಪೊಲೀಸ್‌ ಅಧಿಕಾರಿ ಭಾಸ್ಕರ ರಾವ್‌ ಅವರು ಬುಧವಾರ (ಮಾರ್ಚ್‌ 1) ಬಿಜೆಪಿ ಸೇರಲಿದ್ದಾರೆ. ಆಮ್‌ ಆದ್ಮಿ ಪಾರ್ಟಿ ರಾಷ್ಟ್ರೀಯ ಸಂಚಾಲಕರಾಗಿರುವ ಅರವಿಂದ ಕೇಜ್ರಿವಾಲ್‌ ಅವರು ಮಾರ್ಚ್‌ ನಾಲ್ಕರಂದು ಬೆಂಗಳೂರಿಗೆ ಭೇಟಿ ನೀಡಿ ಸಮಾವೇಶವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ. ಅದರ ನಡುವೆಯೇ ಪಕ್ಷಕ್ಕೆ ಈ ಶಾಕ್‌ ಎದುರಾಗಿದೆ.

ಮಾಜಿ ಐಪಿಎಸ್‌ ಅಧಿಕಾರಿಯಾಗಿರುವ ಭಾಸ್ಕರ ರಾವ್‌ ಅವರು ಮಂಗಳವಾರ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ರಾಜ್ಯದ ಕಂದಾಯ ಸಚಿವರಾಗಿರುವ ಆರ್‌. ಅಶೋಕ್‌ ಅವರನ್ನು ಭೇಟಿಯಾಗಿದ್ದಾರೆ. ಆರಂಭಿಕ ಹಂತದಲ್ಲಿ ಈ ಭೇಟಿ ಕುತೂಹಲ ಮೂಡಿಸಿತ್ತು. ಬಳಿಕ ಭಾಸ್ಕರ ರಾವ್‌ ಅವರು ಬಿಜೆಪಿ ಸೇರುವುದು ಖಚಿತಪಟ್ಟಿತು. ಅವರು ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಚುನಾವಣಾ ಸಹ ಉಸ್ತುವಾರಿ ಕೆ.ಅಣ್ಣಾಮಲೈ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್ ಅವರೊಂದಿಗೆ ಚರ್ಚೆ ಮಾಡಿದ್ದಾರೆ.

ಆಮ್‌ ಆದ್ಮಿ ಪಾರ್ಟಿಯ ನಾಯಕರ ಜತೆ ಆರ್‌. ಅಶೋಕ್

ಬುಧವಾರ ಅವರು ಬಿಜೆಪಿ ಸೇರಲಿದ್ದಾರೆ. ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಥಯಾತ್ರೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಉದ್ಘಾಟಿಸುವ ಕಾರ್ಯಕ್ರಮವಿದೆ. ಬಹುಶಃ ಅದರಲ್ಲಿ ಅವರು ಬಿಜೆಪಿ ಸೇರುವ ನಿರೀಕ್ಷೆ ಇದೆ.

ಭಾಸ್ಕರ್ ರಾವ್ ಅವರು 1990ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದಾರೆ. ಬೆಂಗಳೂರಿನ ಬಸವನಗುಡಿಯಲ್ಲಿ ಹುಟ್ಟಿ ಬೆಳೆದ ಅವರು 2019ರ ಆಗಸ್ಟ್ 1ರಿಂದ 2020ರ ಆಗಸ್ಟ್ 1ರವರೆಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರೂ ಆಗಿದ್ದರು.

2022ರ ಏಪ್ರಿಲ್‌ನಲ್ಲಿ ಐಪಿಎಸ್‌ ಹುದ್ದೆಗೆ ರಾಜೀನಾಮೆ ನೀಡಿದ್ದ ಅವರು ಆಮ್‌ ಆದ್ಮಿ ಪಾರ್ಟಿ ಸೇರಿದ್ದರು. ಮೊದಲು ಅವರು ಕಾಂಗ್ರೆಸ್‌ಗೆ ಸೇರುತ್ತಾರೆ ಎಂಬ ಸುದ್ದಿ ಹರಡಿತ್ತು. ಆಪ್‌ ರಾಜ್ಯ ಉಪಾಧ್ಯಕ್ಷರಾಗಿ ರಾಜ್ಯವಿಡೀ ಸುತ್ತಿದ್ದ ಭಾಸ್ಕರ ರಾವ್‌ ಅವರನ್ನು ಇತ್ತೀಚೆಗೆ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಕರ್ನಾಟಕದಲ್ಲಿ ನೆಲೆ ಕಂಡುಕೊಳ್ಳಲು ವೇದಿಕೆ ರೂಪಿಸಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಭಾಸ್ಕರ್‌ ರಾವ್‌ ಅವರು ಎಎಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಆದರೆ, ಪಕ್ಷ ನಿರೀಕ್ಷಿತ ಮಟ್ಟದಲ್ಲಿ ಬೆಳೆಯುತ್ತಿಲ್ಲ ಎಂಬ ಕಾರಣಕ್ಕಾಗಿ ಅವರು ಆಮ್‌ ಆದ್ಮಿಯಿಂದ ದೂರ ಸರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಬಸವನಗುಡಿಯ ಟಿಕೆಟ್‌ ಆಕಾಂಕ್ಷಿಯಾಗಿದ್ದರು

ಭಾಸ್ಕರ್‌ ರಾವ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿ ಹರಡಿದ್ದಾಗ ಅವರು ಬಸವನ ಗುಡಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎಂದು ಹೇಳಲಾಗುತ್ತಿತ್ತು. ಆಮ್‌ ಆದ್ಮಿ ಪಾರ್ಟಿ ಸೇರಿದ ಬಳಿಕ ಈ ಟಿಕೆಟ್‌ ಅವರ ಪಾಲಿಗೆ ಭದ್ರವಾಗಿತ್ತು. ಆಮ್‌ ಆದ್ಮಿ ಪಾರ್ಟಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿತ್ತು. ಈಗ ಬಿಜೆಪಿಯಲ್ಲಿ ಆ ಅವಕಾಶ ಕಾಣಿಸುತ್ತಿಲ್ಲ. ಹಾಲಿ ಶಾಸಕರಾಗಿರುವ ರವಿ ಸುಬ್ರಹ್ಮಣ್ಯ ಅವರೇ ಈ ಬಾರಿಯೂ ಬಿಜೆಪಿ ಟಿಕೆಟ್‌ ಪಡೆಯುವುದು ಬಹುತೇಕ ಪಕ್ಕಾ ಆಗಿದೆ. ಕಾಂಗ್ರೆಸ್‌ನಿಂದ ಅವರ ಪ್ರತಿಸ್ಪರ್ಧಿಯಾಗಿ ಯು.ಬಿ. ವೆಂಕಟೇಶ್‌ ಅವರಿಗೆ ಟಿಕೆಟ್‌ ಆಗಿದೆ.\

ಇದನ್ನೂ ಓದಿ : ವಿಸ್ತಾರ Interview | ನಮಗಿಂತ ದಡ್ಡರ ಜತೆ ಕೆಲಸ ಮಾಡಬಾರದು ಎಂದು AAP ಸೇರಿದ್ದೇನೆ!: ನಿವೃತ್ತ IPS ಅಧಿಕಾರಿ ಭಾಸ್ಕರ ರಾವ್‌

Exit mobile version