Site icon Vistara News

Karnataka Election: ಸಿಎಂ ಹುದ್ದೆ ಬೇಡ, ಮೋದಿ ನೇತೃತ್ವದಲ್ಲಿ ಕೆಲಸ ಮಾಡುವೆ: ಪ್ರಲ್ಹಾದ್‌ ಜೋಶಿ ಸ್ಪಷ್ಟ ನುಡಿ

Absolutely no: Pralhad Joshi denies Karnataka CM aspirations, prefers to work under PM Modi

ಪ್ರಲ್ಹಾದ್‌ ಜೋಶಿ

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ (Karnataka Election) ಕೆಲವೇ ದಿನಗಳು ಬಾಕಿ ಉಳಿದಿವೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನ ಕೇಂದ್ರ ನಾಯಕರು ಸಾಲು ಸಾಲು ರ‍್ಯಾಲಿ, ರೋಡ್‌ ಶೋಗಳ ಮೂಲಕ ಜನರ ಮತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಇನ್ನು, ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕೆ ಬಂದರೆ, ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ, ಆಕಾಂಕ್ಷಿಗಳು ಯಾರ‍್ಯಾರು ಎಂಬ ಚರ್ಚೆಗಳೂ ನಡೆಯುತ್ತಿವೆ. ಇದರ ಬೆನ್ನಲ್ಲೇ, “ನಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ” ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ಸ್ಪಷ್ಟಪಡಿಸಿದ್ದಾರೆ.

“ಖಂಡಿತವಾಗಿಯೂ ನನಗೆ ಮುಖ್ಯಮಂತ್ರಿ ಹುದ್ದೆ ಬೇಡ. ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ. ನಾನು ಕೇಂದ್ರ ಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತೇನೆ. ನನಗೆ ರಾಜ್ಯದ ಮುಖ್ಯಮಂತ್ರಿಯಾಗುವ ಆಸೆ ಇಲ್ಲ” ಎಂದು ಪಿಟಿಐ ಜತೆ ಮಾತನಾಡುವಾಗ ಪ್ರಲ್ಹಾದ್‌ ಜೋಶಿ ತಿಳಿಸಿದ್ದಾರೆ.

“ನನಗೆ ಎಲ್ಲಿಯವರೆಗೆ ದೇವರು, ಜನ ಹಾಗೂ ಪ್ರಧಾನಿಯವರ ಆಶೀರ್ವಾದ ಇರುತ್ತದೆಯೋ, ಅಲ್ಲಿಯವರೆಗೆ ನಾನು ಮೋದಿ ಅವರ ಅಧೀನದಲ್ಲಿಯೇ ಕಾರ್ಯನಿರ್ವಹಿಸಲು ಇಷ್ಟಪಡುತ್ತೇನೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಏಳಿಗೆಯಾಗುತ್ತಿದೆ. ದೇಶದ ಇತಿಹಾಸದಲ್ಲಿಯೇ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಅಧ್ಯಾಯಕ್ಕೆ ಮೋದಿ ಮುನ್ನುಡಿ ಬರೆದಿದ್ದಾರೆ. ನಾನು ಸಂಸದೀಯ ವ್ಯವಹಾರಗಳ ಸಚಿವನಾಗಿ ಹಲವು ಉತ್ತಮ ಅವಕಾಶಗಳನ್ನು ಪಡೆದಿದ್ದೇನೆ” ಎಂದು ತಿಳಿಸಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ಬಸವರಾಜ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಘೋಷಿಸಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಗೆದ್ದರೆ ಪ್ರಲ್ಹಾದ್‌ ಜೋಶಿ ಅವರೇ ಸಿಎಂ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದು ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಹಾಗಾಗಿ, ಸಿಎಂ ರೇಸ್‌ನಲ್ಲಿ ಜೋಶಿ ಹೆಸರು ಕೇಳಿಬರುತ್ತಿದೆ. ಆದರೆ, ಇದಕ್ಕೂ ಮೊದಲು ಕೂಡ ಜೋಶಿ ಅವರು ನಾನು ಸಿಎಂ ಸ್ಥಾನದ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: Karnataka Election 2023: ಬಿಜೆಪಿಗೆ ನಮ್ಮ ಸಪೋರ್ಟ್‌ ಎಂದು ಹೇಳಿದ್ದು ಯಾರು; ಪ್ರಲ್ಹಾದ್‌ ಜೋಶಿಗೆ ಎಚ್‌ಡಿಕೆ ತಿರುಗೇಟು

Exit mobile version