Site icon Vistara News

ABVP Protest | ಗೃಹ ಸಚಿವ ಆರಗ ನಿವಾಸಕ್ಕೆ ಮುತ್ತಿಗೆ ಪ್ರಕರಣ: ಡಿಸಿಪಿ ವರದಿ ಸಲ್ಲಿಕೆ

ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಗೃಹ ಸಚಿವ ಆರಗ ಜ್ಞಾನೇಂದ್ರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರ (ABVP Protest) ಮುತ್ತಿಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ವಿಭಾಗ ಡಿಸಿಪಿ ವಿನಾಯಕ ಪಾಟೀಲ್ ಪೊಲೀಸ್ ಕಮೀಷನರ್‌ಗೆ ವರದಿ ನೀಡಿದ್ದಾರೆ. ವರದಿಯಲ್ಲಿ ಕರ್ತವ್ಯ ಲೋಪ ಹಾಗೂ ಭದ್ರತಾ ವೈಫಲ್ಯದ ಬಗ್ಗೆ ಉಲ್ಲೇಖಗೊಂಡಿದೆ. ಗೃಹ ಸಚಿವರ ನಿವಾಸಕ್ಕೆ ಸೂಕ್ತ ರೀತಿಯಲ್ಲಿ ಭದ್ರತೆ ಕಲ್ಪಿಸದ ಬಗ್ಗೆ ಪ್ರಸ್ತಾಪಿಸಲಾಗಿದೆ.

ಗೃಹ ಸಚಿವರ ನಿವಾಸದ ಬಳಿ ಸಿಎಆರ್ ಪೊಲೀಸರನ್ನೊಳಗೊಂಡ ಭದ್ರತೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಇದೇ ವೇಳೆ ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದರು. ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಜೆಸಿ ನಗರ ಠಾಣೆಗೆ ಸಿಎಆರ್ ಕಾನ್ಸ್‌ಟೇಬಲ್ ಮಾಹಿತಿ ನೀಡಿದ್ದರು. ಆದರೆ, ಕಳೆದ ಹತ್ತು ದಿನಗಳ ಹಿಂದೆ ಠಾಣೆಯ‌ ಇನ್ಸ್‌ಪೆಕ್ಟರ್ ಟ್ರಾನ್ಸ್‌ಫರ್ ಆಗಿದ್ದರು. ಜೆ ಸಿ ನಗರ ಠಾಣೆಗೆ ಇನ್ನೂ ಇನ್ಸ್‌ಪೆಕ್ಟರ್ ನಿಯೋಜನೆ ಆಗಿರಲಿಲ್ಲ. ಈ ವೇಳೆ ಸಬ್ ಇನ್ಸ್‌ಪೆಕ್ಟರ್ ಗೆ ಜವಾಬ್ದಾರಿ ನೀಡಲಾಗಿತ್ತು. ಎಬಿವಿಪಿ ಪ್ರತಿಭಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ಇರಲಿಲ್ಲ. ಘಟನೆ ನಡೆದಾಗ ಠಾಣೆಯಲ್ಲಿ ಸೂಕ್ತ ಪೊಲೀಸ್ ಫೋರ್ಸ್ ಸಹ ಇರಲಿಲ್ಲ. ಜವಾಬ್ದಾರಿ ಹೊತ್ತಿದ್ದ ಸಬ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಬರಲು ತಡವಾಗಿತ್ತು. ಅಷ್ಟರಲ್ಲಿ ಎಬಿವಿಪಿ ಕಾರ್ಯಕರ್ತರು ರಂಪಾಟ ಮಾಡಿದ್ದರು. ಮೇಲ್ನೋಟಕ್ಕೆ ಭದ್ರತಾ ವೈಫಲ್ಯ ಹಾಗೂ ಪ್ರತಿಭಟನೆ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರು ವಿಳಂಬ ಮಾಡಿದವರಂತೆ ತೋರಿತ್ತು.

ಇದನ್ನೂ ಓದಿ | ವಿಸ್ತಾರ TOP 10 NEWS | ಆರಗ ಮನೆ ಮುತ್ತಿಗೆಯಿಂದ ಕಂಚಿಗೆ ಮುತ್ತಿಟ್ಟ ಕನ್ನಡಿಗನವರೆಗಿನ ಪ್ರಮುಖ ಸುದ್ದಿಗಳಿವು

ಇದೀಗ ಈ ಬಗ್ಗೆ ತನಿಖೆ ನಡೆಸಿ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿಗೆ ಡಿಸಿಪಿ ವಿನಾಯಕ ಪಾಟೀಲ್ ವರದಿ ನೀಡಿದ್ದಾರೆ. ವರದಿ ಆಧರಿಸಿ ಕಮಿಷನರ್ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ | Surathkal Murder | ಗೃಹ ಸಚಿವ ಆರಗ ಖಂಡನೆ; ಶಾಂತಿ ಕಾಪಾಡುವಂತೆ ಮನವಿ

Exit mobile version