ಬೆಂಗಳೂರು: ಎಸಿಬಿಯನ್ನು ರದ್ದು ಮಾಡಬೇಕು, ಅಲ್ಲಿರುವ ಎಲ್ಲ ಕೇಸುಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಬೇಕು ಮತ್ತು ಲೋಕಾಯುಕ್ಕ್ಕೆ ಬಲ ತುಂಬಬೇಕು ಎಂಬ ರಾಜ್ಯ ಹೈಕೋರ್ಟ್‌ನ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ರಾಜ್ಯ ಸರಕಾರವಲ್ಲ, ಬದಲಾಗಿ ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿ ಇದಾಗಿದೆ ಎಂದು ತಿಳಿದುಬಂದಿದೆ. ನಿಜವೆಂದರೆ, ರಾಜ್ಯ ಸರಕಾರ ಲೋಕಾಯುಕ್ತಕ್ಕೆ ಬಲ ತುಂಬಲು ಸಮಾಲೋಚನೆಗಳನ್ನು ಆರಂಭಿಸಿದೆ.
ಅರ್ಜಿ ಸಲ್ಲಿಸಿದ್ದು ಯಾರು?
ರಾಜ್ಯ ಹೈಕೋರ್ಟ್‌ನ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದು ಕಾಂತರಾಜು ಎಂಬವರು. ಅವರ ಪರವಾಗಿ ವಕೀಲ ಅಶೋಕ್ ಪಾಣಿಗ್ರಾಹಿ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ, ಸಿ.ಟಿ. ರವಿ ಕುಮಾರ್ ಅವರ ಪೀಠದ ಎದುರು ವಿಚಾರಣೆಗೆ ಬಂದಿದೆ. ಈ ಅರ್ಜಿಯ ವಿಚಾರಣೆಗೆ ಪೀಠ ಒಪ್ಪಿಗೆ ನೀಡಿದೆ.
ʻಹಣಕ್ಕಾಗಿ ಬೇಡಿಕೆ ಸಲ್ಲಿಸಿದ ಬೆಸ್ಕಾಂನ ಇಬ್ಬರು ಅಧಿಕಾರಿಗಳ ವಿರುದ್ಧ ಎಸಿಬಿಯಲ್ಲಿ ದೂರು ಸಲ್ಲಿಸಲಾಗಿದೆ. ಆದರೆ, ಈಗ ಎಲ್ಲ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರ ಮಾಡಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿರುವುದರಿಂದ ತನಿಖೆಗೆ ತೊಂದರೆಯಾಗಿದೆʼʼ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಎಸಿಬಿ ರದ್ದತಿ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂಬ ಮಾಹಿತಿ ಬಂದಾಗ ಅದು ರಾಜ್ಯ ಸರಕಾರವೇ ಸಲ್ಲಿಸಿದ ಅರ್ಜಿ ಎಂದು ಹೇಳಲಾಗಿತ್ತು. ಮಾಧ್ಯಮಗಳಲ್ಲೂ ಅದೇ ರೀತಿ ವರದಿಗಳು ಬಂದಿದ್ದವು. ಇದೀಗ ರಾಜ್ಯ ಸರಕಾರವೂ ಯಾವ ಕಾರಣಕ್ಕೂ ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.
ಬಲವರ್ಧನೆಗೆ ಸಮಾಲೋಚನೆ
ʻʻಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದವರು ಖಾಸಗಿ ವ್ಯಕ್ತಿಗಳು. ನಮಗೂ ಅವರಿಗೂ ಸಂಬಂಧವಿಲ್ಲ. ನಾವು ಹೈಕೋರ್ಟ್ ಆದೇಶಕ್ಕೆ ಬದ್ಧರಾಗಿದ್ದೇವೆ. ಹೈಕೋರ್ಟ್ ತೀರ್ಪನ್ನು ಹೇಗೆ ಅನುಷ್ಠಾನ ಮಾಡಬೇಕು ಎನ್ನುವುದರ ಬಗ್ಗೆ ಸಮಾಲೋಚನೆ ನಡೆದಿದೆ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೊಡ್ಡ ಬಳ್ಳಾಪುರದಲ್ಲಿ ಹೇಳಿದ್ದಾರೆ.
ಅಧಿಕಾರಿಗಳ ಜತೆ ಸಭೆ
ಈ ನಡುವೆ ಮುಖ್ಯಮಂತ್ರಿಗಳು ಲೋಕಾಯುಕ್ತಕ್ಕೆ ಬಲ ತುಂಬುವ ವಿಚಾರಕ್ಕೆ ಸಂಬಂಧಿಸಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರನ್ನು ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಸಿಎಂ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರೂ ಭಾಗಿಯಾಗಿದ್ದರು.
ಹಿಂದಿನ ಸುದ್ದಿ| ಎಸಿಬಿ ರದ್ದುಪಡಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರಕಾರ