ಬೆಂಗಳೂರು: ಬನಶಂಕರಿಯ ಬಿಡಿಎ ಕಚೇರಿಯಲ್ಲಿ ಗಾರ್ಡನರ್ ಆಗಿ ಕೆಲಸ ಮಾಡುವ ಶಿವಲಿಂಗಯ್ಯ ಎಂಬುವರ ಕೋಣನಕುಂಟೆ ನಿವಾಸದ ಮೇಲೆ ಎಸಿಬಿ ದಾಳಿಯಾಗಿದೆ. ಮಾಸಿಕ 48,000 ರೂ. ಸಂಬಳ ಪಡೆಯುವ ಶಿವಲಿಂಗಯ್ಯ ಬಿಡಿಎ ಉದ್ಯಾನದ ಮಾಲ್ ಬಳಿ ಮೂರು ಬಂಗಲೆ ಮತ್ತು ಅಪಾರ ಆಸ್ತಿಯನ್ನು ಹೊಂದಿರುವುದು ಬೆಳಕಿಗೆ ಬಂದಿದೆ.
ಬೆಂಗಳೂರಿನಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧಿಸಿದಾಗ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ರಗಳು ಶಿವಲಿಂಗಯ್ಯನ ಮನೆಯಲ್ಲಿ ಪತ್ತೆಯಾಗಿವೆ. ಐದು ಸೈಟ್‌ಗಳು ಬೆಂಗಳೂರಿನಲ್ಲಿದ್ದರೆ, ಚನ್ನಪಟ್ಟಣದಲ್ಲಿ ಬೆಂಗಳೂರು – ಮೈಸೂರು ಕಾರಿಡಾರ್ ರಸ್ತೆ (ನೈಸ್ ರಸ್ತೆ) ಪಕ್ಕ ಇವರ ಜಮೀನಿರುವುದು ಪತ್ತೆ ಆಗಿದೆ. ಒಂದು ಎಕರೆ 10 ಗುಂಟೆ ಭೂಮಿ ಹಾಗೂ ಹತ್ತು ಗುಂಟೆ ಕಮರ್ಷಿಯಲ್ ಭೂಮಿಯನ್ನು ಪತ್ತೆ ಹಚ್ಚಲಾಗಿದೆ. ಎಸಿಬಿ ಎಸಿಪಿ ವಿಜಯ ಹಡಗಲಿ ನೇತೃತ್ವದಲ್ಲಿ ಶಿವಲಿಂಗಯ್ಯಗೆ ಸೇರಿದ ಮೂರು ಮನೆಗಳ ಮೇಲೆ ದಾಳಿ ನಡೆದಿದೆ.
ಇದಲ್ಲದೆ ಬಸವೇಶ್ವರನಗರ, ಕ್ರೆಸೆಂಟ್ ರಸ್ತೆ ಹಾಗೂ ಉತ್ತರಹಳ್ಳಿ ಭಾಗದಲ್ಲಿ ಎಸಿಬಿ ದಾಳಿಯಾಗಿದೆ. ಪಿಡಬ್ಲ್ಯುಡಿ ನಿವೃತ್ತ ಎಕ್ಸಿಕ್ಯೂಟಿವ್ ಎಂಜಿನಿಯರ್ ಮಂಜುನಾಥ್ ಅವರ ಬಸವೇಶ್ವರ ನಗರದಲ್ಲಿನ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಲಾಗಿದೆ. ಕ್ರೆಸೆಂಟ್ ರಸ್ತೆಯಲ್ಲಿರುವ ನಿವೃತ್ತ ಲ್ಯಾಂಡ್ ರೆಕಾರ್ಡ್ ಆಫೀಸರ್ ಜನಾರ್ಧನ್ ಮನೆಯಲ್ಲೂ ಎಸಿಬಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ |ಬೆಂಗಳೂರು, ಹಾಸನ, ಕೊಪ್ಪಳ ಸೇರಿ 80 ಸ್ಥಳಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಮುಂದುವರಿದ ಎಸಿಬಿ ಬೇಟೆ
ಚಿಕ್ಕಬಳ್ಳಾಪುರ :
ನೀರಾವರಿ ಇಲಾಖೆ ಎಇ ಮೋಹನ್ ಕುಮಾರ್‌ಗೆ ಸೇರಿದ ನಾಗರಬಾವಿ ಮನೆ ಮೇಲೆ ಎಸಿಬಿ ದಾಳಿ ಮಾಡಿದೆ. ಸದ್ಯ ಚಿಕ್ಕಬಳ್ಳಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮೋಹನ್ ಕುಮಾರ್, ದಾಳಿ ವೇಳೆ ಮನೆಯಲ್ಲೇ ಇದ್ದರು. ಮನೆಯಲ್ಲಿ ಚಿನ್ನಾಭರಣ, ಬೆಳ್ಳಿ ವಸ್ತುಗಳು, ಆಸ್ತಿಪತ್ರಗಳ ಪರಿಶೀಲನೆ ನಡೆಸಿದ್ದಾರೆ. 14 ಅಧಿಕಾರಿಗಳ 6 ತಂಡಗಳಾಗಿ ಏಕಕಾಲಕ್ಕೆ ದಾಳಿ ಮಾಡಿದ್ದು, ನಾಗರಭಾವಿಯ 2 ಮನೆ, ಮಾಳಗಾಲದ ಮನೆ, ಶ್ರೀಗಂಧ ಕಾವಲು ಮನೆ, ಆರ್.ಆರ್.ನಗರದ ಐಡಿಯಲ್ ಹೋಮ್ಸ್, ಚಿಕ್ಕಬಳ್ಳಾಪುರದ ಕಚೇರಿ ಮೋಹನ್ ಕುಮಾರ್‌ಗೆ ಸೇರಿದ 6 ಕಡೆ ಎಸಿಬಿ ದಾಳಿ ಮಾಡಿದೆ.
ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಮನೆ ಮೇಲೆ ದಾಳಿ
ಬೆಂಗಳೂರಿನಲ್ಲಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಸಿದ್ದಪ್ಪ ಡಿ. ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದ್ದು, ಜತೆಗೆ ಒಂದು ಕೆ.ಜಿ. ಚಿನ್ನ, ಏಳು ಸೈಟ್‌ಗಳ ದಾಖಲೆ ಪತ್ತೆಯಾಗಿವೆ. ನಾಲ್ಕು ಶಿವಮೊಗ್ಗದಲ್ಲಿ ಸೈಟ್ ಮೂರು ಹೊನ್ನಾಳಿಯಲ್ಲಿ ಸೈಟ್, ಗೋಪದೊಂಡನ ಹಳ್ಳಿಯಲ್ಲಿ ಎಂಟು ಎಕರೆ ಭೂಮಿ ಹಾಗೂ ತಾವರೆ ಚಟ್ಟನಹಳ್ಳಿಯಲ್ಲಿ ಒಂದು ಎಕರೆ ಏಳು ಗುಂಟೆ ಭೂಮಿ, ಒಂದು ಐಷಾರಾಮಿ ಕಾರು, ಒಂದು ಬೈಕ್ ಏಳು ಲಕ್ಷ ನಗದು ಪತ್ತೆಯಾಗಿದೆ.
ಶಿವಮೊಗ್ಗದಲ್ಲಿ ನಾಲ್ಕು ಸೈಟ್, ಹೊನ್ನಾಳಿಯಲ್ಲಿ ಮೂರು ಸೈಟ್, ಗೋಪದೊಂಡನ ಹಳ್ಳಿಯಲ್ಲಿ ಎಂಟು ಎಕರೆ ಭೂಮಿ ಹಾಗೂ ತಾವರೆ ಚಟ್ಟನಹಳ್ಳಿಯಲ್ಲಿ ಒಂದು ಎಕರೆ ಏಳು ಗುಂಟೆ ಭೂಮಿ, ಒಂದು ಐಷಾರಾಮಿ ಕಾರು, ಒಂದು ಬೈಕ್ ಏಳು ಲಕ್ಷ ನಗದು ಪತ್ತೆಯಾಗಿವೆ.
ರಾಯಚೂರಿನಲ್ಲಿ ದಾಳಿ
ಪೊಲೀಸ್ ಅಧಿಕಾರಿ ಕೂಡ ಎಸಿಬಿಯ ಜಾಲಕ್ಕೆ ಬಿದ್ದಿದ್ದಾರೆ. ರಾಯಚೂರಿನ ಲಿಂಗಸಗೂರು ತಾಲೂಕಿನ ಮುದಗಲ್‌ನಲ್ಲಿರುವ ಸಿಪಿಐ ಉದಯರವಿ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಕೊಪ್ಪಳ ಸಿಪಿಐ ಆಗಿದ್ದ ಉದಯ ರವಿ ಇತ್ತೀಚೆಗೆ ಬೆಂಗಳೂರು ರಾಜ್ಯ ಗುಪ್ತ ಇಲಾಖೆಗೆ ವರ್ಗವಾಗಿದ್ದರು. ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ದೂರು ಬಂದಿದ್ದರಿಂದ ಎಸಿಬಿ ದಾಳಿಯಾಗಿದೆ. ಏಳು ಜನರ ಅಧಿಕಾರಿಗಳ ತಂಡ ಮನೆಯಲ್ಲಿ ಪರಿಶೀಲನೆ ನಡೆಸಿದೆ.
ಬೆಳಗಾವಿ
ಬೆಳಗಾವಿ ಲೋಕೋಪಯೋಗಿ ಅಧೀಕ್ಷಕ ಇಂಜಿನಿಯರ್ ಬಿ. ವೈ. ಪವಾರ್ ನಿವಾಸದಲ್ಲಿ ಲಕ್ಷಾಂತರ ಹಣ ಪತ್ತೆಯಾಗಿದೆ. ಜಕ್ಕೇರಿ ಹೊಂಡದಲ್ಲಿರುವ ಬಿ.ವೈ.ಪವಾರ್ ನಿವಾಸಕ್ಕೆ ದಾಳಿ ಮಾಡಿ ಎಸಿಬಿ ಎಸ್‌ಪಿ ಬಿ.ಎಸ್.ನ್ಯಾಮಗೌಡರ ನೇತೃತ್ವದಲ್ಲಿ ಪರಿಶೀಲನೆ ಮುಂದುವರೆದಿದೆ. ಬೆಳ್ಳಿ, ಚಿನ್ನದ ಆಭರಣಗಳೂ ಪತ್ತೆಯಾಗಿವೆ.
ಕಾರವಾರ
ಕಾರವಾರದಲ್ಲಿ ನಡೆದಿದ್ದ ಎಸಿಬಿ ದಾಳಿ ಪ್ರಕರಣಕ್ಕೆ ಸಂಬಂಧಿಸದಂತೆ ಜಿಲ್ಲಾ ನೋಂದಣಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಜಿಲ್ಲಾ ನೋಂದಣಾಧಿಕಾರಿ ಪಿ.ಎಸ್. ಶ್ರೀಧರ್ ಅವರ ಹಬ್ಬುವಾಡದಲ್ಲಿನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದೀಗ ಕಚೇರಿ ಬಳಿ ಎಸಿಬಿ ಅಧಿಕಾರಿಗಳ ತಂಡದಿಂದ ದಾಖಲೆ ಪರಿಶೀಲನೆ ನಡೆದಿದ್ದು, ಕಚೇರಿಯಲ್ಲೂ ಅಧಿಕಾರಿಗೆ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ಎಸಿಬಿ ತಂಡದಿಂದ ನಡೆದಿದೆ.
ಬೆಂಗಳೂರು ಮನೆ, ಮೈಲನಹಳ್ಳಿಯ ಮನೆ, ಕನಕಪುರದ ಆಗರ ಮನೆ ಕಾರವಾರದ ಮನೆ, ಕಚೇರಿ ಸೇರಿ ಐದು ಕಡೆ ಏಕಕಾಲಕ್ಕೆ ದಾಳಿ ನಡೆದಿದೆ. ನಾಲ್ಕು ಲಕ್ಷ ನಗದು ಪತ್ತೆಯಾಗಿದ್ದು, ಚಿನ್ನ, ವಾಹನಗಳನ್ನು ಸೀಜ್ ಮಾಡಿದ್ದಾರೆ.
ಇದನ್ನೂ ಓದಿ | ACB raid | 80 ಸ್ಥಳಗಳಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಎಸಿಬಿ ದಾಳಿ, ಪರಿಶೀಲನೆಯಲ್ಲಿ ಸಿಗ್ತಿರೋದೇನು?