Site icon Vistara News

ACB raid | ದಾಳಿಯಲ್ಲಿ ಬಗೆದಷ್ಟು ಹಣ, ಆಭರಣ, ದಂಗಾದ ಅಧಿಕಾರಿಗಳು

ACB raid

ಬೆಂಗಳೂರು : ರಾಜ್ಯಾದ್ಯಂತ 21 ಅಧಿಕಾರಿಗಳ ಮನೆ ಮೇಲೆ ಎಸಿಬಿ ಅಧಿಕಾರಿಗಳ ಶೋಧ ಕಾರ್ಯ (ACB raid) ಮುಂದುವರಿದಿದೆ. ಬಾಗಲಕೋಟೆಯಲ್ಲಿ ಎಸಿಬಿ ದಾಳಿ ಪ್ರಕರಣ‌ಕ್ಕೆ ಸಂಬಂಧಿಸಿದಂತೆ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶಂಕರಲಿಂಗ ಗೋಗಿ ಹಾಗೂ ಗೋಗಿ ಕೈಕೆಳಗಿನ‌ ಎಂಜನಿಯರ್ ಮಲ್ಲೆರಾವ್ ದೇಸಾಯಿ ಮನೆಗಳ ಮೇಲೆ ಎಸಿಬಿ ದಾಳಿಯಲ್ಲಿ ಬಗೆದಷ್ಟು ಹಣ, ಆಭರಣ, ಬಂಡವಾಳ ಹೂಡಿಕೆಯ ದಾಖಲೆಗಳು ಸಿಗುತ್ತಿವೆ. 25 ತೊಲೆ ಚಿನ್ನ, ಒಂದು ಕೆಜಿ ಬೆಳ್ಳಿ ಪತ್ತೆಯಾಗಿದೆ.

ಶಂಕರಲಿಂಗ ಗೋಗಿ ಅವರ ಪತ್ನಿ ಸುನಿತಾ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಕಾರ್ಯದರ್ಶಿಯಾಗಿದ್ದು, ಸಂಸ್ಥೆಯಲ್ಲಿ 40 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿದ್ದಾರೆ. 40 ಲಕ್ಷದಲ್ಲಿ ಶಂಕರ ಗೋಗಿ ಅವರ ಪತ್ನಿ ಎಷ್ಟು ಹೂಡಿದ್ದಾರೆ ಎಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಶಂಕರ ಗೋಗಿ ಅವರಿಗೆ ಸಂಬಂಧಿಸಿದ ಎರಡು ಬ್ಯಾಂಕಿನಲ್ಲಿ ಇರುವ ಲಾಕರ್ ಇನ್ನೂ ಓಪನ್ ಮಾಡಬೇಕಿದೆ.

ನಿರ್ಮಿತಿ ಕೇಂದ್ರದ ಇಂಜಿನಿಯರ್ ಮಲ್ಲೇರಾವ್ ದೇಸಾಯಿ ಮನೆಯಲ್ಲಿ 750 ಗ್ರಾಂ ಚಿನ್ನ, ಮೂರು ಕೆಜಿ ಬೆಳ್ಳಿ, ಅನೇಕ ಆಸ್ತಿ ಪತ್ರಗಳು ಲಭ್ಯವಾಗಿವೆ. ಮಲ್ಲೇರಾವ್ ತಮ್ಮ ಪುತ್ರನ ಹೆಸರಿನಲ್ಲಿ ಗ್ರಾನೈಟ್ ಫ್ಯಾಕ್ಟರಿ ಖರೀದಿ ಮಾಡಿದ್ದಾರೆ. ಇಳಕಲ್ ನಗರದಲ್ಲಿ 80 ಲಕ್ಷ ರೂ. ಕೊಟ್ಟು ಗ್ರಾನೈಟ್ ಫ್ಯಾಕ್ಟರಿ ಖರೀದಿ‌ ಮಾಡಿರುವ ಮಾಹಿತಿ ಕೂಡ ಲಭ್ಯವಾಗಿದೆ. ಎಂಜನಿಯರ್ ಮನೆಯಲ್ಲಿ ಬಗೆದಷ್ಟು ಆಸ್ತಿ ಪತ್ತೆ ಆಗುತ್ತಿದ್ದು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಹಾಗೂ ಎಂಜನಿಯರ್ ಇಬ್ಬರ ಮನೆಯಲ್ಲೂ ಅಪಾರ ಆಸ್ತಿ ಪತ್ತೆ ಆಗಿವೆ.

ಇದನ್ನೂ ಓದಿ | ACB raid | ಭ್ರಷ್ಟಾಚಾರಿಗೆ ಕೊನೆಯ ಚಾಟಿಯೇ ದಾಳಿ: ಎಸಿಬಿ ರೇಡ್‌ ಮಾಡೋದ್ಯಾಕೆ? ಇಲ್ಲಿದೆ ವಿವರ

ಯುಟಿಪಿ ಸಹಾಯಕ ಇಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ

ರಾಣೆಬೆನ್ನೂರು ವಿಭಾಗದ ಯುಟಿಪಿ ಸಹಾಯಕ ಇಂಜಿನಿಯರ್ ಚಂದ್ರಪ್ಪ ಓಲೇಕಾರ ಮನೆ ಮೇಲೆ ಎಸಿಬಿ ರೇಡ್‌ ಮಾಡಿದ್ದಾರೆ. ದಾಳಿ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ ಹಾಗೂ ನಗದು ಹಣ, ಬಂಗಾರ, ಬೆಳ್ಳಿ ಪತ್ತೆಯಾಗಿದೆ. 13 ಲಕ್ಷ 39 ಸಾವಿರ ರೂ. ನಗದು ಹಣ, 400 ಗ್ರಾಂ ಬಂಗಾರ, 1600 ಗ್ರಾಂ ಬೆಳ್ಳಿ ಪತ್ತೆಯಾಗಿದ್ದು, ಅತ್ತೆ, ಹೆಂಡತಿ ಹಾಗೂ ತನ್ನ ಹೆಸರಲ್ಲಿ ಸೇರಿ 5 ಸೈಟುಗಳು ಪತ್ತೆಯಾಗಿವೆ.

ರಾಣೆಬೆನ್ನೂರು ತಾಲೂಕಿನ ಗುಡುಗೂರು-ಮೈದೂರು ಗ್ರಾಮದ ಮಧ್ಯೆ 25 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ನಗರ ಸಿದ್ದಾರೋಡ ಕಾಲೋನಿ ಹಾಗೂ ಆಣೂರು ಮನೆ ಮೇಲೂ ದಾಳಿ ನಡೆದಿದೆ. ನಿರೀಕ್ಷೆ ಮೀರಿ ಆದಾಯ ಗಳಿಸಿರುವ ಆಸ್ತಿಪಾಸ್ತಿ ಲಭ್ಯವಾಗಿದ್ದು, ಹಣ, ಬಂಗಾರ ಹಾಗೂ ಆಸ್ತಿ ನೋಡಿ ಎಸಿಬಿ ಅಧಿಕಾರಿಗಳು ದಂಗಾಗಿದ್ದಾರೆ. ACB ಡಿವೈಎಸ್ಪಿ ಗೋಪಿ ಎಂಬುವವರ ನೇತೃತ್ವದಲ್ಲಿ 25 ಅಧಿಕಾರಿಗಳಿಂದ ರೇಡ್ ಆಗಿದೆ.

ಸಹಾಯಕ ಮಹಾನಿರೀಕ್ಷಕ ಮಧುಸೂಧನ್ ಮನೆಯಲ್ಲಿ ಸಿಕ್ಕ ಚಿನ್ನ

ಕಂದಾಯ ಭವನ ನೊಂದಣಿ ವಿಭಾಗದ ಸಹಾಯಕ ಮಹಾನಿರೀಕ್ಷಕ ಮಧುಸೂಧನ್ ಮೇಲೂ ದಾಳಿ ನಡೆದಿದ್ದು, ಬೆಂಗಳೂರು ರಾಜಾಜಿನಗರ ಹಾಗೂ ಬಸವೇಶ್ವರ ನಗರದ ವಾಸದ ಮನೆ , ಕಚೇರಿ ಮೇಲೆ ದಾಳಿ ಆಗಿದೆ. ಮಧುಸೂದನ್ ನಿವಾಸದಲ್ಲಿ ಎಸಿಬಿ ಅಧಿಕಾರಿಗಳಿಂದ ಶೋಧ ಆಗಿದ್ದು 39.ಲಕ್ಷ ನಗದು ಎರಡೂವರೆ ಕೆ.ಜಿ ಚಿನ್ನ, 4.900 ಗ್ರಾಂ ಬೆಳ್ಳಿ ಆಭರಣ ಪತ್ತೆಯಾಗಿವೆ.

ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧೀಕ್ಷಕ ಅಭಿಯಂತರ ಮಂಜುನಾಥ ಮೇಲೆ ಒಟ್ಟು 12 ಅಧಿಕಾರಿಗಳ ತಂಡದಿಂದ ಬಸವೇಶ್ವರ ನಗರದಲ್ಲಿನ ನಿವಾಸದ ಮೇಲೆ ದಾಳಿ ನಡೆಸಿದೆ.2018, ಮೇ ತಿಂಗಳಲ್ಲಿ ನಿವೃತ್ತಿ ಹೊಂದಿರುವ ಮಂಜುನಾಥ್‌ ತಿಂಗಳಿಗೆ 1 ಲಕ್ಷ ಸಂಬಳ ಪಡೆಯುತ್ತಿದ್ದರು.

ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧೀಕ್ಷಕ ಅಭಿಯಂತರ ಮಂಜುನಾಥ ಮನೆ

ಬಸವೇಶ್ವರ ನಗರದ ಶಾರದಾ ಕಾಲೋನಿಯ ಮನೆ, ಮಂಜುನಾಥ್‌ ಅವರ ಮಗಳು ವರ್ಷಾ ಹೆಸರಲ್ಲಿ ಕಾರ್ಬನ್ ಕಾರ್ನರ್ ಸ್ಟೋನ್ ಅಪಾರ್ಟ್ಮೆಂಟ್, ಕೆ.ಆರ್. ಪುರ‌ಂನಲ್ಲಿ 4 ಎಕರೆ ಜಮೀನು, ತಾಯಿಯ ಹೆಸರಲ್ಲಿ ಬೆಂಗಳೂರಿನಲ್ಲಿ ಮನೆ ಹೊಂದಿದ್ದಾರೆ. ಅಲ್ಲದೆ ಬ್ಯಾಟರಾಯನಪುರದಲ್ಲಿ 60 ಲಕ್ಷ ಮೌಲ್ಯದ ನಿವೇಶನ, ನಾಗವಾರಪಾಳ್ಯದಲ್ಲಿ 50 ಲಕ್ಷ ಮೌಲ್ಯದ 3 ಅಂಗಡಿಗಳು, ಹಲಗೆವಾಡರಹಳ್ಳಿಯಲ್ಲಿ 40 ಲಕ್ಷ ಮೌಲ್ಯದ ಸೈಟ್ , ರಾಜಾಜಿನಗರದಲ್ಲಿ ೧ ಕೋಟಿ ರೂ. ಮೌಲ್ಯದ 3 ಮಹಡಿಯ ಕಟ್ಟಡ , ಅಂದಾಜು 10 ಲಕ್ಷ ಮೌಲ್ಯದ ಒಂದು ಕಿಯಾ ಸೆಲ್ಟೋಸ್‌ ಕಾರು, ಒಟ್ಟು 2 ಕೋಟಿ 60 ಲಕ್ಷ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬಿಡಿಎ ಗಾರ್ಡನರ್ ಶಿವಲಿಂಗಯ್ಯ ಮನೆ ಮೇಲೆ ಎಸಿಬಿ ದಾಳಿ ಅಂತ್ಯ

ಬಿಡಿಎ ಗಾರ್ಡನರ್ ಶಿವಲಿಂಗಯ್ಯ ಮನೆ ಮೇಲೆ ಎಸಿಬಿ ದಾಳಿ ಅಂತ್ಯಗೊಂಡಿದೆ. ಮನೆಯಲ್ಲಿ ಪತ್ತೆಯಾದ ಕಾಗದ ಪತ್ರಗಳ ಪಂಚನಾಮೆಯನ್ನು ಅಧಿಕಾರಿಗಳು ನಡೆಸಿದ್ದಾರೆ. ಶಿವಲಿಂಗಯ್ಯ ಮನೆಯಲ್ಲಿ ಮಹತ್ವದ ದಾಖಲೆಗಳು ಲಭ್ಯವಾಗಿದ್ದು, ಮನೆಗಳು, ನಿವೇಶನ, ಜಮೀನು, ಚಿನ್ನ, ಬೆಳ್ಳಿ ವಸ್ತುಗಳ ದಾಖಲೆಗಳ ಮೌಲ್ಯಮಾಪನ ಪೂರ್ಣಗೊಂಡಿದೆ. ದಾಖಲೆಗಳ ಪಂಚನಾಮೆ ಮಾಡಿ ಸುಮಾರು 9 ಗಂಟೆಗಳ ಕಾಲ ಶಿವಲಿಂಗಯ್ಯ ಮನೆಯಲ್ಲಿ ತಪಾಸಣೆ ನಡೆಸಿ ಅಧಿಕಾರಿಗಳು ತೆರಳಿದ್ದಾರೆ.

ಇದನ್ನೂ ಓದಿ | ACB raid | ದಾಳಿಗೊಳಗಾದವರ ಮನೆಯಲ್ಲಿ‌ ಸಿಗುತ್ತಿದೆ ಕೆಜಿ ಕೆಜಿ ಚಿನ್ನ, ಹತ್ತಾರು ಸೈಟ್‌, ಬಂಗಲೆ!

Exit mobile version