ಮೈಸೂರು: ನಂಜನಗೂಡು ಪಟ್ಟಣದ ಹಳೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್ ಹರಿದು (Accident Case) ೧೪ ವರ್ಷದ ಬಾಲಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಂಜೀಪುರ ಗ್ರಾಮದ ಪ್ರಕಾಶ್ ಎಂಬುವವರ ಪುತ್ರ ಪ್ರಜ್ವಲ್ ಮೃತ ಬಾಲಕ. ನಂಜನಗೂಡು- ಹುಲ್ಲಹಳ್ಳಿ- ಹಂಪಾಪುರಕ್ಕೆ ಹೋಗುವ ಸಾರಿಗೆ ಬಸ್‌ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಇವರು ಬಸ್‌ನಿಂದ ಇಳಿಯುವಾಗ ಚಾಲಕ ಬಸ್ ಅನ್ನು ಚಲಾಯಿಸಿದ್ದಾರೆನ್ನಲಾಗಿದೆ. ಈ ವೇಳೆ ಪ್ರಜ್ವಲ್ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಆದರೆ, ಇದನ್ನು ಗಮನಿಸದ ಚಾಲಕ ಬಸ್ ಅನ್ನು ಮುಂದಕ್ಕೆ ಚಲಾಯಿಸಿದ್ದಾರೆ. ಈ ವೇಳೆ ಪ್ರಜ್ವಲ್ ಮೇಲೆ ಹಿಂದಿನ ಚಕ್ರ ಹತ್ತಿದೆ.
ಕೆಳಗೆ ಬಿದ್ದ ಪ್ರಜ್ವಲ್ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಹರಿಯುತ್ತಿದ್ದಂತೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ಬಸ್ ಚಾಲಕನ ವಿರುದ್ಧ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ಯಾಸ್ಮಿನ್ ತಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೂಡಲೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರೂ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಂಬ್ಯುಲೆನ್ಸ್ ಬರಲಿಲ್ಲ ಎಂಬುದೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಮೃತ ಬಾಲಕನ ತಂದೆಯ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಹಿನ್ನೆಲೆಯಲ್ಲಿ ಪಿಎಸ್ಐ ಯಾಸ್ಮೀನ್ ತಾಜ್ ಅವರು ಆಟೋ ವ್ಯವಸ್ಥೆ ಮಾಡಿ ಅದರ ಮೂಲಕ ಶವವನ್ನು ಸಾಗಿಸಿದರು.
ಮರಣೋತ್ತರ ಪರೀಕ್ಷೆಗೆ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಗಿದೆ. ಈ ಸಂಬಂಧ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Accident news | ಟ್ರಾಕ್ಟರ್‌ಗೆ ಕ್ರೂಸರ್ ಡಿಕ್ಕಿ, ದಂಪತಿ ಸಾವು