Site icon Vistara News

Accident | ಮಗಳ ವಾಲಿಬಾಲ್‌ ಆಟ ನೋಡಲು ಹೋಗಿದ್ದ ಮಾಜಿ ಸೈನಿಕ ಮೃತ್ಯು: ಪತ್ನಿ, ಪುತ್ರಿಗೂ ಗಂಭೀರ ಗಾಯ

Accident

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಪಂ ವ್ಯಾಪ್ತಿಯ ಮಾವಿನಹೊಳೆ ನಿವಾಸಿ ಪ್ರಗತಿಪರ ರೈತ ಹಾಗೂ ಮಾಜಿ ಸೈನಿಕ ಚಿನ್ನಪ್ಪ (50) ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ.

ಗೌರಿಬಿದನೂರಿಗೆ ಹೋಗಿ ಮನೆಗೆ ವಾಪಸಾಗುವಾಗ ಶಿವಮೊಗ್ಗದ ಕುಂಸಿ ಠಾಣಾ ವ್ಯಾಪ್ತಿಯ ತುಪ್ಪೂರು ಬಳಿ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿನ್ನಪ್ಪ ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಈ ಅಪಘಾತದಲ್ಲಿ ಮೃತರ ಪತ್ನಿ ಮತ್ತು ಪುತ್ರಿಗೂ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಗಳ ವಾಲಿಬಾಲ್ ಪಂದ್ಯ ನೋಡಲು ಹೋಗಿದ್ದರು
ಹೊಸನಗರದ ಶಾಸಕರ ಮಾದರಿ ಶಾಲೆಯ ಸರ್ಕಾರಿ ಹಿರಿಯ ಬಾಲಕಿಯರ ಪಾಠ ಶಾಲೆಯಲ್ಲಿ ಓದುತ್ತಿದ್ದ ಚಿನ್ನಪ್ಪನವರ ಮಗಳಾದ ದಿಶರಾಣಿ ಇವರು ಈ ವರ್ಷ ವಾಲಿಬಾಲ್ ಪಂದ್ಯಾವಳಿಯಲ್ಲಿ ಈ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಳು.

ಶಾಲೆಯಿಂದ ವಿದ್ಯಾರ್ಥಿನಿಯರನ್ನು ವಾಹನದ ಮೂಲಕ ಗೌರಿಬಿದನೂರಿಗೆ ಕಳುಹಿಸಿಕೊಡಲಾಗಿತ್ತು. ಚಿನ್ನಪ್ಪನವರ ಮಗಳು ತಂಡದಲ್ಲಿದ್ದು, ಮಗಳ ಆಟ ನೋಡಲು ಗೌರಿಬಿದನೂರಿಗೆ ತಮ್ಮ ಸ್ವಂತ ಮಾರುತಿ ಆಲ್ಟೊ 800 ಕಾರಿನಲ್ಲಿ ಹೋಗಿದ್ದರು. ಆಟ ಮುಗಿಸಿಕೊಂಡು ಮಗಳನ್ನು ವಾಪಸ್ ಕರೆದುಕೊಂಡು ಕಾರಿನಲ್ಲಿ ಬರುತ್ತಿದ್ದಾಗ ಸುಮಾರು ಮಧ್ಯರಾತ್ರಿ 2:00ರ ಸಮಯದಲ್ಲಿ ತುಪ್ಪೂರು ಬಳಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಮೃತರು ತಂದೆ, ತಾಯಿ, ಪತ್ನಿ, ಓರ್ವ ಪುತ್ರಿ, ಸಹೋದರ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಇದನ್ನೂ ಓದಿ |Hassan Accident | ಯಾರನ್ನು ಬೈಕೊಬೇಕು ಹೇಳಿ? ದೇವರನ್ನಾ, ರಸ್ತೆಯನ್ನಾ, ಚಾಲಕನನ್ನಾ? ನಮ್ಮ ಹಣೆಬರಹವನ್ನಾ?

Exit mobile version