ಧಾರವಾಡ: ಜಿಲ್ಲೆಯ ಕುಂದಗೋಳ ತಾಲೂಕು ಬೆಳ್ಳಿಗಟ್ಟಿ ಗ್ರಾಮದ ಬಳಿ ಭೀಕರ ಸರಣಿ ಅಪಘಾತ (Serial Accident) ಸಂಭವಿಸಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಂಗಳೂರು – ಮುಂಬೈ ರಾಷ್ಟ್ರೀಯ (Bengaluru Mumbai National Highway) ಹೆದ್ದಾರಿಯಲ್ಲಿ ಎರಡು ಕಾರುಗಳು ಹಾಗೂ ಒಂದು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ತೀವ್ರತೆಗೆ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮೃತರಲ್ಲಿ ಮೂವರು ಹಾಸನದವರಾದರೆ, ಒಬ್ಬ ಬೆಂಗಳೂರಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಮಣಿಕಂಠ (26), ಪವನ (23), ಚಂದನ (31), ಪ್ರಭು (34) ಎಂದು ಗುರುತಿಸಲಾಗಿದೆ. ಗಾಯಾಳುಗಳಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರೂ ವಾಹನಗಳು ವೇಗವಾಗಿ ಚಲಿಸುತ್ತಿದ್ದು, ಇದೇ ವೇಳೆ ಚಾಲಕರ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದಟ್ಟವಾದ ಮಂಜು ಇದ್ದಿದ್ದೂ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಒಂದು ಕಾರಿನಲ್ಲಿ ಗೆಳೆಯರು ಜತೆಗೂಡಿ ಗೋವಾಗೆ ತೆರಳುತ್ತಿದ್ದರು. ಬೆಂಗಳೂರಿನಿಂದ ಕಾರು ಶಿರಡಿಗೆ ಹೊರಟಿತ್ತು. ಅಲ್ಲಿಂದ ಗೋವಾಗೆ ತೆರಳುವ ಯೋಜನೆ ಹಾಕಿಕೊಂಡಿದ್ದರು. ಆದರೆ, ಮಾರ್ಗಮಧ್ಯೆಯೇ ಅಪಘಾತ ಸಂಭವಿಸಿ ನಾಲ್ವರು ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಎರಡೂ ಕಾರುಗಳು ಜಖಂಗೊಂಡಿವೆ. ಲಾರಿ ಚಾಲಕ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಧಾರವಾಡ ಎಸ್‌ಪಿ ಗೋಪಾಲ ಬ್ಯಾಕೋಡ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: Road Accident : ಎಲೆಕ್ಟ್ರಿಕ್ ಬಸ್- ಜೀಪ್ ಮಧ್ಯೆ ಭೀಕರ ಅಪಘಾತ; ನಾಲ್ವರು ಸಾವು
ಕೆಲ ದಿನಗಳ ಹಿಂದಷ್ಟೇ ಕೆಎಸ್‌ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಮತ್ತು ಜೀಪ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದರು. ಹುಣಸೂರು ಪಟ್ಟಣದ ಹುಣಸೂರಿನ ಆರ್.ಟಿ.ಒ. ಕಚೇರಿ ಬಳಿ ಈ ಘಟನೆ ಸಂಭವಿಸಿತ್ತು. ಮೃತರಲ್ಲಿ ಜೀಪು ಚಾಲಕನ ಕೂಡ ಸೇರಿದ್ದ. ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರ್ಕಾರಿ ಬ್ಯಾಟರಿ ಚಾಲಿತ ಬಸ್ ಮತ್ತು ಹುಣಸೂರಿನಿಂದ ಪಿರಿಯಾಪಟ್ಟಣಕ್ಕೆ ತೆರಳುತ್ತಿದ್ದ ಜೀಪ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ