ಕೊಲ್ಲಾಪುರ: ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಕೀನಿ ಎಂಬ ಗ್ರಾಮದಲ್ಲಿ ಶನಿವಾರ ಮುಂಜಾನೆ ಹೊತ್ತು ಸಂಭವಿಸಿದ ಭೀಕರ ಅಪಘಾತದಲ್ಲಿ ಬೆಂಗಳೂರಿನ ಒಂದೇ ಕುಟುಂಬದ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದುರಂತ ಸಂಭವಿಸಿದ್ದು, ಕಾರಿನಲ್ಲಿದ್ದ ಎಲ್ಲರೂ ಮೃತಪಟ್ಟಿದ್ದಾರೆ.
ಮೃತರನ್ನು ಬೆಂಗಳೂರಿನ ಮೀನಾಕ್ಷಿ ನಗರದ ನಿವಾಸಿಗಳಾದ ತ್ರಿಲೇಶ್ (೪೨), ಸಂಜನಾ ಮಹೇಶ್ವರಿ (೨೭), ಜತಿಯಾ ತ್ರಿಲೇಶ್ (೧೧) ಮತ್ತು ಇನ್ನೊಬ್ಬರು ಎಂದು ಗುರುತಿಸಲಾಗಿದೆ. ತ್ರಿಲೇಶ್ ಕುಮಾರ್ ಅವರು ಇತ್ತೀಚೆಗಷ್ಟೇ ಹೊಸ ಎಸ್‌ಯುವಿಯನ್ನು ಖರೀದಿಸಿದ್ದು, ಅದರಲ್ಲಿ ಕುಟುಂಬ ಸಮೇತರಾಗಿ ಶಿರಡಿಗೆ ಹೋಗುತ್ತಿದ್ದರು. ಆಗ ದುರಂತ ಸಂಭವಿಸಿದೆ.
ಆಗಿದ್ದೇನು?
ತ್ರಿಲೇಶ್ ಅವರು ಚಲಾಯಿಸುತ್ತಿದ್ದ ಕಾರು ಮಾರ್ಗದ ಬದಿಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಲಾಗಿದ್ದ ಕಂಟೇನರ್ ವಾಹನಕ್ಕೆ ಸಣ್ಣಗೆ ಡಿಕ್ಕಿ ಹೊಡೆದಿತ್ತು. ಚಾಲಕ ಕಾರನ್ನು ಹಿಂದಕ್ಕೆ ಪಡೆಯುತ್ತಿದ್ದಂತೆಯೇ ಹಿಂದಿನಿಂದ ವೇಗವಾಗಿ ಧಾವಿಸಿ ಬಂದ ಟ್ರಕ್ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆಯಿತು. ಈ ವೇಳೆ ಕಾರು ಎರಡು ವಾಹನಗಳ ನಡುವೆ ಸಿಕ್ಕಿಕೊಂಡು ನಜ್ಜುಗುಜ್ಜಾಯಿತು. ಮೂವರು ಸ್ಥಳದಲ್ಲೇ ಮೃತಪಟ್ಟರೆ ಒಬ್ಬರು ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡರು.
ಘಟನೆಯ ಬಳಿಕ ಟ್ರಕ್ ಮತ್ತು ಕಂಟೇನರ್ ಚಾಲಕರಿಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ. ವಡಗಾಂವ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಭೀಮಗೊಂಡ ಪಾಟೀಲ್ ಅವರು ಸ್ಥಳಕ್ಕೆ ಧಾವಿಸಿದ್ದು, ಕಿನಿ ಟೋಲ್ ಪ್ಲಾಜಾದ ಸಿಬ್ಬಂದಿ ಮತ್ತು ಸಾರ್ವಜನಿಕರ ನೆರವಿನಿಂದ ಪರಿಹಾರ ಕಾರ್ಯಾಚರಣೆ ನಡೆಸಿದರು.
ಹುಬ್ಬಳ್ಳಿ-ಪೂನಾ ಸಾವಿನ ಹೆದ್ದಾರಿ
ಈ ಅಪಘಾತ ಹುಬ್ಬಳ್ಳಿ-ಪುನಾ ಹೆದ್ದಾರಿಯಲ್ಲಿ ನಡೆದಿದೆ. ಈ ಹೆದ್ದಾರಿ ಇತ್ತೀಚಿನ ದಿನಗಳಲ್ಲಿ ಸಾವಿನ ಹೆದ್ದಾರಿಯಾಗಿ ಪರಿವರ್ತನೆಯಾಗಿದೆ. ಈ ಹೆದ್ದಾರಿಯಲ್ಲಿ ಇದೇ ವರ್ಷದ ಮೇ ೨೧ ಮತ್ತು ೨೨ರಂದು ನಡೆದ ಎರಡು ಅಪಘಾತಗಳಲ್ಲಿ ೧೮ ಮಂದಿ ಮೃತಪಟ್ಟಿದ್ದರು.
ಮೇ ೨೧ರಂದು ಧಾರವಾಡದ ಬಾಡ ಕ್ರಾಸ್ ಬಳಿ ಕ್ರೂಸರ್ ಒಂದು ಮರಕ್ಕೆ ಡಿಕ್ಕಿ ಹೊಡೆದು ಒಂಬತ್ತು ಮಂದಿ ಪ್ರಾಣ ಕಳೆದುಕೊಂಡಿದ್ದರು. ಮುಂಜಾನೆ ವರನ ಮನೆಯಿಂದ ಮದುವೆ ಮನೆಗೆ ಹೊರಟಿದ್ದ ದಿಬ್ಬಣದ ವಾಹನ ದುರಂತಕ್ಕೆ ಒಳಗಾಗಿತ್ತು.
ಮೇ ೨೨ರಂದು ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ರಾತ್ರಿ ೧೨.೪೫ಕ್ಕೆ ಕೊಲ್ಲಾಪುರದಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ ಮತ್ತು ಅಕ್ಕಿ ಲಾರಿ ನಡುವೆ ಡಿಕ್ಕಿ ಸಂಭವಿಸಿ ಒಂಬತ್ತು ಮಂದಿ ಮೃತಪಟ್ಟು ೨೫ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.
೨೦೨೧ರ ಜು.೧೫ರಂದು ದಾವಣಗೆರೆಯಿಂದ ಗೋವಾದಲ್ಲಿ ಸಂಕ್ರಾಂತಿ ಆಚರಣೆಗೆ ಹೊರಟಿದ್ದ ಹಳೆಯ ಗೆಳತಿಯರ ತಂಡವೊಂದು ಅಪಘಾತಕ್ಕೆ ಸಿಲುಕಿ ೧೫ ಮಂದಿ ಪ್ರಾಣ ಕಳೆದುಕೊಂಡಿದ್ದರು. ದಾವಣಗೆರೆಯ ಸೈಂಟ್ ಪಾಲ್ ಕಾನ್ವೆಂಟ್ ಶಾಲೆಯ ೧೯೮೯ರ ಬ್ಯಾಚಿನ ಗೆಳತಿಯರು ಭಾರಿ ಉತ್ಸಾಹದಿಂದ ಒಟ್ಟಾಗಿ ಹೊರಟಿದ್ದರು. ಅವರ ಸಾಗುತ್ತಿದ್ದ ವಾಹನ ಮತ್ತು ಲಾರಿ ನಡುವೆ ಧಾರವಾಡದ ಇಟ್ಟಿಗಟ್ಟಿ ಬಳಿ ಅಪಘಾತ ಸಂಭವಿಸಿತ್ತು. ಮೃತ ಮಹಿಳೆಯರೆಲ್ಲರೂ ಉನ್ನತ ಹುದ್ದೆಯಲ್ಲಿದ್ದ ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರಾಗಿದ್ದರು.
ಇದನ್ನೂ ಓದಿ Accident | ಬೆಳಗಾವಿಯಲ್ಲಿ ಭೀಕರ ಅಪಘಾತ, ಕ್ರೂಸರ್ ಪಲ್ಟಿಯಾಗಿ 7 ಜನ ಸಾವು, ಹಲವರ ಸ್ಥಿತಿ ಗಂಭೀರ