ಬಳ್ಳಾರಿ/ ಉಡುಪಿ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಹಾಗೂ ತೆಕ್ಕಲಕೋಟೆ ನಡುವೆ ಶಾಲಾ ಬಸ್ ಚಲಿಸುತ್ತಿದ್ದಾಗ ಏಕಾಏಕಿ ಬೆಂಕಿ (Fire Accident) ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆ ವಾಹನ ಹೊತ್ತಿ (Accident News) ಉರಿದಿದೆ. ಸಿರುಗುಪ್ಪ ಪಟ್ಟಣದ ವಿಶ್ವಜ್ಯೋತಿ ಶಿಕ್ಷಣ ಸಂಸ್ಥೆಗೆ ಸೇರಿದ ಶಾಲಾ ಬಸ್‌ನಲ್ಲಿ ಸುಮಾರು 30ಕ್ಕೂ ಹೆಚ್ಚು ಮಕ್ಕಳು ಪ್ರಯಾಣಿಸುತ್ತಿದ್ದರು.
ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಚಾಲಕ ಬಸ್ ನಿಲ್ಲಿಸಿ, ಕೂಡಲೇ ಮಕ್ಕಳನ್ನು ಕೆಳಗಿಳಿಸಿದ್ದಾರೆ. ಪರೀಕ್ಷೆ ಬರೆದು ಮನೆಗೆ ವಾಪಸ್ ಕರೆದೊಯ್ಯುತ್ತಿದ್ದಾಗ ಈ ಅವಘಡ ಸಂಭವಿಸಿದ್ದು, ಬಳಿಕ ಮಕ್ಕಳನ್ನು ಬೇರೆ ವಾಹನದಲ್ಲಿ ರವಾನೆ ಮಾಡಲಾಗಿದೆ. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಬಸ್‌ನಲ್ಲಿ ಬೆಂಕಿ ಹೊತ್ತಿಕೊಳ್ಳಲು ಕಾರಣ ಏನು ಎಂಬುದು ತಿಳಿದುಬಂದಿಲ್ಲ.
ಸರಣಿ ಅಪಘಾತದಲ್ಲಿ ಬೈಕ್ ಸವಾರ ಮೃತ್ಯು
ಉಡುಪಿಯ ಕುಂಭಾಶಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಣಿ ರಸ್ತೆ ಅಪಘಾತ (Road Accident) ಸಂಭವಿಸಿದೆ. ಕುಂಭಾಶಿ ಪಾಕಶಾಲಾ ಹೋಟೆಲ್ ಸಮೀಪ ಹೋಂಡಾ ಡಿಯೋ ದ್ವಿಚಕ್ರ ವಾಹನ, ಹ್ಯುಂಡೈ ಗ್ಯಾಂಡ್ ಐ10 ಕಾರು ಹಾಗೂ ಬಸ್‌ನ ನಡುವೆ ಸರಣಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ದ್ವಿಚಕ್ರ ವಾಹನದಲ್ಲಿದ್ದ ಒಬ್ಬ ಸಾವಿಗೀಡಾಗಿ ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾರೆ. ದ್ವಿಚಕ್ರ ವಾಹನದಲ್ಲಿದ್ದ ಕೊರವಡಿ ಮಾಣಿಮನೆ ಬೆಟ್ಟು ನಿವಾಸಿ ಪ್ರಶಾಂತ್ ಪೂಜಾರಿ (28) ಹಾಗೂ ವಿಶ್ಲೇಶ್ ಪೂಜಾರಿ (27) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಪ್ರಶಾಂತ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಸ್ಕೂಟರ್ ಗ್ಯಾರೇಜ್‌ನಲ್ಲಿ ಹೊತ್ತಿಕೊಂಡ ಬೆಂಕಿ
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ದ್ವಿಚಕ್ರ ವಾಹನ ಗ್ಯಾರೇಜ್‌ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಜಿಗಣಿ ಎಪಿಸಿ ವೃತ್ತದಲ್ಲಿ ಸ್ಟಿಕ್ಕರ್ ಡಿಸೈನ್ ಅಂಗಡಿ ಹಾಗೂ ಸ್ಕೂಟರ್ ಗ್ಯಾರೇಜ್ ಬೆಂಕಿಗಾಹುತಿ ಆಗಿದೆ.
ಇದನ್ನೂ ಓದಿ: Rapido Bike Vs Auto: ಆಟೋ ಚಾಲಕರ ದೌರ್ಜನ್ಯದ ವಿರುದ್ಧ ಸಿಡಿದೆದ್ದ ಬೈಕ್ ಟ್ಯಾಕ್ಸಿ ಚಾಲಕರು; ರಕ್ಷಣೆಗಾಗಿ ಪ್ರತಿಭಟನೆ
ಗ್ಯಾರೇಜ್‌ನಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಪಕ್ಕದ ಅಂಗಡಿಗೂ ಬೆಂಕಿ ಆವರಿಸಿಕೊಂಡು ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಗೋಪಿ ಎಂಬುವವರಿಗೆ ಸೇರಿದ ಸ್ಕೂಟರ್ ಗ್ಯಾರೇಜ್ ಬೆಂಕಿಗಾಹುತಿಯಾಗಿದ್ದು, ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಟೀ ಸ್ಟಾಲ್‌ನಲ್ಲಿ ಸಿಲಿಂಡರ್ ಸ್ಫೋಟ
ಕೊಪ್ಪಳದ ಕಾರಟಗಿ ತಾಲೂಕಿನ ಬೆನ್ನೂರು ಗ್ರಾಮದಲ್ಲಿ ಟೀ ಸ್ಟಾಲ್‌ನಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಯಮನೂರಪ್ಪ ಎಂಬವರಿಗೆ ಸೇರಿದ ಟೀ ಸ್ಟಾಲ್‌ನಲ್ಲಿ ಗ್ಯಾಸ್ ಪೈಪ್ ಲೀಕೇಜ್ ಆಗಿದ್ದು, ಅದು ಸ್ಫೋಟಗೊಂಡಿದೆ. ಸಿಲೆಂಡರ್ ಸ್ಫೋಟಗೊಳ್ಳುತ್ತಲೇ ಜನರೆಲ್ಲ ದಿಕ್ಕಾಪಾಲಾಗಿ ಓಡಿದ್ದಾರೆ. ಸಿಲೆಂಡರ್ ಸ್ಫೋಟಗೊಂಡಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ