Site icon Vistara News

Accident News : ಬೈಕ್‌ ಚಲಾಯಿಸುತ್ತಿರುವಾಗಲೇ ಮೂರ್ಛೆ ಹೋದ ಸವಾರ; ಕುಸಿದು ಬಿದ್ದು ಸಾವು

Bike Accident

ಆನೇಕಲ್/ಮೈಸೂರು/ರಾಯಚೂರು: ಆನೇಕಲ್‌ನ ಅತ್ತಿಬೆಲೆ ಮುಖ್ಯರಸ್ತೆಯ ದಿನ್ನೂರು ಕ್ರಾಸ್ ಬಳಿ ಮೂರ್ಛೆ ರೋಗದಿಂದ ಬಳಲುತ್ತಿದ್ದ ಬೈಕ್‌ ಸವಾರ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಗುಮ್ಮಳಾಪುರ ನಿವಾಸಿ ಶ್ರೀನಿವಾಸಯ್ಯ (63) ಮೃತ ದುರ್ದೈವಿ.

ಅತ್ತಿಬೆಲೆ ಕಡೆಯಿಂದ ಗುಮ್ಮಳಾಪುರಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಏಕಾಏಕಿ ಅವರು ಮೂರ್ಛೆ ಹೋಗಿದ್ದಾರೆ. ಈ ವೇಳೆ ಬೈಕ್‌ ನಿಯಂತ್ರಣಕ್ಕೆ ಸಿಗದೆ ರಸ್ತೆದ ಬದಿ ಬಿದ್ದಿದೆ. ಇವರೂ ನೆಲಕ್ಕುರಳಿ ಬಿದ್ದಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ರಕ್ಷಣೆಗೆ ಮುಂದಾದರೂ ಶ್ರೀನಿವಾಸಯ್ಯ ಬದುಕುಳಿಯಲಿಲ್ಲ. ಆನೇಕಲ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ರೈಲು ಅಪಘಾತದಲ್ಲಿ ಕಾರ್ಮಿಕ ಸಾವು

ರಾಯಚೂರಿನ ಶಕ್ತಿನಗರದ ಆರ್‌ಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ರೈಲು ಅಪಘಾತದಲ್ಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಕಾರ್ಮಿಕನನ್ನು ನಾಗರಾಜ್ (32) ಎಂದು ಗುರುತಿಸಲಾಗಿದೆ. ಇವರು ಗುತ್ತಿಗೆ ಕಾರ್ಮಿಕರಾಗಿ ದುಡಿಯುತ್ತಿದ್ದರು.

ಕಲ್ಲಿದ್ದಲು ಸಾಗಿಸುವ ರೈಲಿನ ರೇಕ್ ಹರಿದು ಈ ಅವಘಡ ಸಂಭವಿಸಿದೆ. ಕಲ್ಲಿದ್ದಲು ಸ್ಯಾಂಪಲ್ ತೆಗೆಯುವ ಕೆಲಸದಲ್ಲಿ ತೊಡಗಿದ್ದಾಗ, ಆಕಸ್ಮಿಕವಾಗಿ ರೈಲಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ಅಪಘಾತದಲ್ಲಿ ನಾಗರಾಜ್‌ ಅವರ ರುಂಡ-ಮುಂಡ ಬೇರ್ಪಟ್ಟಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

ಅತಿ ವೇಗದ ಚಾಲನೆ; ಬಲಿಯಾದ ಅಮಾಯಕ

ಬೈಕ್‌ ಸವಾರನ ಅತಿ ವೇಗ ಚಾಲನೆಗೆ ಮತ್ತೊಬ್ಬ ಸವಾರ ಮೃತಪಟ್ಟಿರುವ ಘಟನೆ ಸೋಮವಾರ ಬೆಂಗಳೂರಲ್ಲಿ ನಡೆದಿದೆ. ವೆಂಕಟೇಶ್ (62) ಮೃತ ದುರ್ದೈವಿ. ವೆಸ್ಟ್ ಆಫ್ ಕಾರ್ಡ್ ರೋಡ್ ಕಡೆಯಿಂದ ಬಾಪೂಜಿನಗರ ಮಾರ್ಗದ ಮಧ್ಯೆ ಅತಿ ವೇಗವಾಗಿ ಬಂದ ಬೈಕ್‌ ಹಿಂಬದಿಯಿಂದ ಡಿಕ್ಕಿಯಾಗಿದೆ. ವಾಹನ ಸಮೇತ ರಸ್ತೆಗೆ ಬಿದ್ದ ವೆಂಕಟೇಶ್‌ ತಲೆಗೆ ಗಂಭೀರ ಪೆಟ್ಟಾಗಿದೆ. ತಕ್ಷಣ ಸ್ಥಳೀಯರು ಗುರುಶ್ರೀ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ವೆಂಕಟೇಶ್ ಉಸಿರು ಚೆಲ್ಲಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಡಿಪಾಯದ ಗುಂಡಿಗೆ ಬಿದ್ದು ಸಾವು

ಕಟ್ಟಡದ ನಿರ್ಮಾಣಕ್ಕಾಗಿ ತೋಡಲಾದ ತಳಪಾಯದ ಗುಂಡಿಯಲ್ಲಿ ಬಿದ್ದು ವ್ಯಕ್ತಿಯೊಬ್ಬರು ಸಾವಿಗೀಡಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಕ್ರಿಸ್ಟೋ ಚೆರಿಯನ್ (34) ಸಾವಿಗೀಡಾದ ವ್ಯಕ್ತಿ. ಇವರು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಸೆನ್ ಎಂಜಿನಿಯರಿಂಗ್ ವರ್ಕ್ಸ್ ಕಂಪನಿಯ ಮಾಲೀಕರಾದ ಕೆ.ಎಂ. ಚೆರಿಯನ್ ಅವರ ಪುತ್ರ.

ವಿಜಯನಗರ ಮೊದಲ ಹಂತದ ನಿವಾಸಿಯಾದ ಇವರು ಆಕಸ್ಮಿಕವಾಗಿ ಈ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮದುವೆಯಾಗಿದ್ದ ಕ್ರಿಸ್ಟೋ ಖಿನ್ನತೆಯಿಂದ ಬಳಲುತ್ತಿದ್ದರು. ವಿಜಯನಗರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪ್ರಕರಣದ ತನಿಖೆ ಹಲವು ಕೋನಗಳಲ್ಲಿ ನಡೆಯುತ್ತಿದೆ.

ಸಾಲಬಾಧೆ ತಾಳದೆ ಇಬ್ಬರು ರೈತರ ಆತ್ಮಹತ್ಯೆ

ಮೈಸೂರು ಜಿಲ್ಲೆಯಲ್ಲಿ ಸಾಲಬಾಧೆ ತಾಳಲಾರದೆ ಒಂದೇ ದಿನ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ತಾಲ್ಲೂಕು ಶ್ಯಾನಭೋಗನಹಳ್ಳಿಯಲ್ಲಿ ಸುರೇಶ್ (58) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಎಕರೆ ಜಮೀನು ಹೊಂದಿದ್ದ ರೈತರಾಗಿದ್ದ ಇವರು ಬ್ಯಾಂಕ್, ಸೊಸೈಟಿ ಸೇರಿ 7 ಲಕ್ಷ ರೂ. ಸಾಲ ಮಾಡಿದ್ದರು. ಬೆಳೆ ಕೈ ಕೊಟ್ಟ ಹಿನ್ನೆಲೆ‌ ಜಮೀನಿನಲ್ಲಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Weather Report: ಬೆಂಗಳೂರಿಗರೇ ಎಚ್ಚರ, ಇಂದು ಇರಬಹುದು ಮಳೆಯ ಅಬ್ಬರ!

ಹುಣಸೂರು ತಾಲ್ಲೂಕಿನ ಕರ್ಣಕುಪ್ಪೆ ಗ್ರಾಮದ ರಾಜಶೆಟ್ಟಿ (78) ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 5 ಎಕರೆ ಜಮೀನು ಹೊಂದಿದ್ದ ರಾಜಶೆಟ್ಟಿ ತಂಬಾಕು, ರಾಗಿ ಬೆಳೆ ಬೆಳೆದಿದ್ದರು. ಬ್ಯಾಂಕ್, ಸೊಸೈಟಿ, ಮಹಿಳಾ ಸಂಘ, ಕೈ ಸಾಲ ಸೇರಿ ಸುಮಾರು 8 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಹೆಚ್ಚಾಗಿದ್ದ ಬಡ್ಡಿ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version