ಬೆಂಗಳೂರು: ಚಾಲಕನೊಬ್ಬ ಬ್ಯುಸಿ ರಸ್ತೆಯಲ್ಲಿ ಮೊಬೈಲ್ ನೋಡುತ್ತಾ ಸ್ಕೂಟರ್ ಮೇಲೆ ಟ್ಯಾಂಕರ್ ಹತ್ತಿಸಿ ಮಹಿಳೆಯೊಬ್ಬರ ಸಾವಿಗೆ ಕಾರಣವಾದ ಭೀಕರ ಘಟನೆ ಬೆಂಗಳೂರಿನಲ್ಲಿ ಮಂಗಳವಾರ ನಡೆದಿದೆ. ಬೆಂಗಳೂರಿನ ಲಗ್ಗೆರೆ ಬಸ್ ನಿಲ್ದಾಣ ಬಳಿಯ ಗ್ರೇಸ್ ಪಬ್ಲಿಕ್ ಸ್ಕೂಲ್ ಮುಂಭಾಗದಲ್ಲಿ ನಡೆದ ಈ ಭೀಕರ ಅವಘಡದಲ್ಲಿ ಮೃತಪಟ್ಟವರನ್ನು ವೃತ್ತಿಯಲ್ಲಿ ನರ್ಸ್ ಆಗಿರುವ ಆಶಾ ಎಂದು ಗುರುತಿಸಲಾಗಿದೆ.
ಕೆಂಪೇಗೌಡ ಆಸ್ಪತ್ರೆ (ಕಿಮ್ಸ್) ಯಲ್ಲಿ ನರ್ಸ್ ಆಗಿರುವ ಆಶಾ ಅವರು ಬೆಳಗ್ಗೆ ಬಸ್ ನಿಲ್ದಾಣ ಕಡೆಯಿಂದ ಲಗ್ಗೆರೆ ಕಡೆಗೆ ಮಾರ್ಗದ ಬದಿಯಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬಂದ ವಾಟರ್ ಟ್ಯಾಂಕರ್ ಆಕೆಯ ಮೇಲೆ ನುಗ್ಗಿದೆ. ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಇದ್ದರೂ ಚಾಲಕ ಮೊಬೈಲ್ ನೋಡುತ್ತಾ ಇದ್ದ ಎನ್ನಲಾಗಿದೆ. ಆಗ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಬಂದಿದ್ದು, ಆಶಾ ಅವರ ಮೇಲೆ ನುಗ್ಗಿದೆ.
ಆಶಾ ಅವರು ಸ್ಥಳದಲ್ಲೇ ಬಿದ್ದು ಪ್ರಾಣ ಕಳೆದುಕೊಂಡಿದ್ದು, ಮೃತ ದೇಹವನ್ನು ಕೆ.ಸಿ ಜನರಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ರಾಜಾಜಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಪಘಾತ ಸಿಸಿಟಿವಿಯಲ್ಲಿ ಸೆರೆ
ಅಪಘಾತದ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆಶಾ ಅವರು ರಸ್ತೆ ಬದಿಯಲ್ಲಿ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿರುವುದು, ಚಾಲಕ ಮೊಬೈಲ್‌ನಲ್ಲಿ ಮಾತನಾಡುತ್ತಿರುವುದು, ಟ್ಯಾಂಕರ್ ಮಹಿಳೆಯ ಮೇಲೆ ನುಗ್ಗುತ್ತಿರುವ ದೃಶ್ಯಗಳು ಭಯಾನಕವಾಗಿವೆ. ಘಟನೆ ನಡೆಯುತ್ತಿದ್ದಂತೆಯೇ ವಾಟರ್ ಟ್ಯಾಂಕ್ ಚಾಲಕ ಪರಾರಿಯಾಗಿದ್ದಾನೆ.