ಬೆಳಗಾವಿ: ಬೆಳಗಾವಿ ತಾಲೂಕಿನ ನಾವಗೆ ಗ್ರಾಮದಲ್ಲಿ ಮನೆಗಳ ಧ್ವಂಸ ಪ್ರಕರಣಕ್ಕೆ (vandalising house) ಭಾರಿ ತಿರುವು ಸಿಕ್ಕಿದೆ. ತ್ರಿಕೋನ ಪ್ರೇಮ ವಿಚಾರದಲ್ಲಿ ಗಲಾಟೆ ನಡೆದಿದ್ದು, ಬುದ್ಧಿವಾದ ಹೇಳಿದ್ದಕ್ಕೆ ಗ್ರಾಮದ ಹಿರಿಯರ ಮನೆಗಳ ಮೇಲೆ ಯುವಕರ ಗುಂಪು ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಗೋವಾ ಮತ್ತು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಕೃತ್ಯ ಎಸಗಿದ 30ಕ್ಕೂ ಅಧಿಕ ದುಷ್ಕರ್ಮಿಗಳು ಬಾದರವಾಡಿ ಗ್ರಾಮದವರೆಂಬ ಮಾಹಿತಿ ಇದೆ. 30 ಮಂದಿ ಪೈಕಿ 13 ಆರೋಪಿಗಳು ಅಪ್ರಾಪ್ತ ವಯಸ್ಸಿನ ಹುಡುಗರಾಗಿದ್ದಾರೆ. ಹೀಗಾಗಿ ಬಾದರವಾಡಿ ಗ್ರಾಮಕ್ಕೆ 10ಕ್ಕೂ ಅಧಿಕ ಪೊಲೀಸ್ ಅಧಿಕಾರಿಗಳು ತೆರಳಿ, ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಗಳ ಸುಳಿವು ಸಿಗದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ಗೋವಾಕ್ಕೆ ದುಷ್ಕರ್ಮಿಗಳು ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದೆ. ಗೋವಾಕ್ಕೆ ವಿಶೇಷ ಪೊಲೀಸ್ ತಂಡ ರವಾನಿಸಲು ಹಿರಿಯ ಪೊಲೀಸ್ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ.
ಏನಿದು ಘಟನೆ?
ಬೆಳಗಾವಿ ತಾಲೂಕಿನ ಖರ್ಲೆ ಗ್ರಾಮದ ಹುಡುಗಿಯನ್ನು ನಾವಗೆ ಮತ್ತು ಬಾದರವಾಡಿ ಗ್ರಾಮದ ಹುಡುಗರು ಪ್ರೀತಿಸುತ್ತಿದ್ದರು. ಸ್ಟೇಟಸ್ ಹಾಕುವ ವಿಚಾರಕ್ಕೆ ನಾವಗೆ ಹಾಗೂ ಬಾದರವಾಡಿ ಗ್ರಾಮದ ಹುಡುಗರ ಮಧ್ಯೆ ಗಲಾಟೆಯಾಗಿದೆ. ಎರಡು ದಿನಗಳ ಹಿಂದೆ ಯುವಕರನ್ನು ಕೂರಿಸಿಕೊಂಡು ನಾವಗೆ ಗ್ರಾಮದ ಹಿರಿಯರು ಬುದ್ಧಿವಾದ ಹೇಳಿದ್ದರು. ಅಲ್ಲದೇ ಬೆಳಗಾವಿ ಗ್ರಾಮೀಣ ಠಾಣೆಗೆ ಗ್ರಾಮದ ಪಂಚರು ಮಾಹಿತಿ ನೀಡಿದ್ದರು. ಇದರಿಂದ ಕುಪಿತಗೊಂಡ ಬಾದರವಾಡಿಯ 30ಕ್ಕೂ ಅಧಿಕ ಯುವಕರಿಂದ, ನಾವಗೆ ಗ್ರಾಮದ ಪಂಚರು (ಪಂಚಾಯಿತಿ ಕಟ್ಟೆ ಮುಖ್ಯಸ್ಥರು) ಸೇರಿ ನಾಲ್ವರು ಹಿರಿಯರ ಮನೆಗಳ ಮೇಲೆ ಸೋಮವಾರ ರಾತ್ರಿ ದಾಳಿ ಮಾಡಲಾಗಿದೆ. ಇದರಿಂದ ಕಾರಿನ ಗಾಜು, ಮನೆ ಕಿಟಕಿಗಳ ಗಾಜು, ವಾಹನಗಳು ಜಖಂಗೊಂಡಿವೆ.
ಓದುವ ವಯಸ್ಸಲ್ಲಿ ಪ್ರೀತಿ ಗೀತಿ ಎಂದು ಸಮಯ ವ್ಯರ್ಥ ಮಾಡುವುದು ತಪ್ಪು ಎಂದು ಗ್ರಾಮದ ಪಂಚರಾದ ಮಾರುತಿ ಹುರಕಡ್ಲಿ ಬುದ್ಧಿಮಾತು ಹೇಳಿದ್ದರು. ಇದರಿಂದ ವ್ಯಗ್ರರಾದ ಆರೋಪಿಗಳು ಪಂಚರ ಮನೆಯನ್ನು ಧ್ವಂಸ ಮಾಡಲು ಯತ್ನಿಸಿದ್ದಾರೆ.
ಹುಡುಗಿ ವಿಚಾರದಲ್ಲಿ ಹಿಂಸಾಚಾರ ನಡೆದ ನಾವೆಗೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ; ಸಾಂತ್ವನ
ಬೆಳಗಾವಿ: ಹುಡುಗಿ ವಿಚಾರದಲ್ಲಿ (Love Case) ಹುಡುಗರ ಎರಡು ಗುಂಪುಗಳ ನಡುವೆ ಗಲಾಟೆ (Clash between two groups) ನಡೆದು, ಬುದ್ಧಿಮಾತು ಹೇಳಿದ ಗ್ರಾಮದ ಪಂಚರ ಮನೆ ಸೇರಿದಂತೆ ನಾಲ್ಕು ಕಡೆ ದಾಳಿ (Attack on village heads house) ನಡೆದ ಬೆಳಗಾವಿ ತಾಲೂಕಿನ ನಾವಗೆ ಗ್ರಾಮಕ್ಕೆ (Navage Village) ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮಂಗಳವಾರ ಭೇಟಿ ನೀಡಿ ಧೈರ್ಯ ತುಂಬಿದರು.
ನಂತರ ಮಾತನಾಡಿದ ಲಕ್ಷ್ಮೀ ಹೆಬ್ಬಾಳಕರ್, ಶಾಲೆ, ಕಾಲೇಜಿಗೆ ತೆರಳುವ ಅಪ್ರಾಪ್ತ ಮಕ್ಕಳು ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟಿದ್ದರಿಂದ ಈ ಘಟನೆ ನಡೆದಿದೆ. ಎರಡೂ ಗ್ರಾಮಗಳ ಹಿರಿಯರನ್ನು ಕರೆಸಿ ಮಾತುಕತೆ ನಡೆಸಿ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : Crime News: ಪ್ರೀತಿ ಗೀತಿ ಬೇಡ, ಓದಿಕೊಳ್ಳಿ ಎಂದದ್ದಕ್ಕೆ ಪಂಚರ ಮನೆ ಮೇಲೆಯೇ ದಾಳಿ, ಧ್ವಂಸ!
ಸುದ್ದಿ ತಿಳಿದ ತಕ್ಷಣ ಎಲ್ಲ ಕಾರ್ಯಕ್ರಮಗಳನ್ನು ಬದಿಗಿಟ್ಟು ಇಲ್ಲಿಗೆ ಬದಿದ್ದೇನೆ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾನೇ ಮುಂದಾಗಿ ನಿಂತು, ಘಟನೆಯ ಸಂಪೂರ್ಣ ಮಾಹಿತಿ ಪಡೆದು ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಲಾಗುವುದು. ಎರಡೂ ಊರಿನ ಹಿರಿಯರನ್ನು, ಪೊಲೀಸರನ್ನು ಕೂರಿಸಿಕೊಂಡು ಪರಸ್ಪರ ದ್ವೇಷ ಉಳಿಯದಂತೆ ಕ್ರಮ ತೆಗೆದುಕೊಳ್ಳಲಾಗುವುದು. ಅಕ್ಕಪಕ್ಕದ ಊರಿನ ಜನರು ಮೊದಲಿನಂತೆ ಪರಸ್ಪರ ನಗು ನಗುತ್ತ ಇರುವಂತೆ ಮಾಡುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.
ಇನ್ನೂ ಓದಿ | Self Harming : ಇಬ್ಬರು ಮಕ್ಕಳೊಂದಿಗೆ ತಾಯಿ ನಿಗೂಢ ಸಾವು; ಆತ್ಮಹತ್ಯೆ ಶಂಕೆ
ಕ್ಷೇತ್ರದಲ್ಲಿ ಎಲ್ಲೂ ಕಾನೂನಿನ ಸಮಸ್ಯೆ ಆಗಿಲ್ಲ. ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಕ್ರಮ ತೆಗೆದುಕೊಂಡಿದ್ದಾರೆ. ಡಿ.31ರ ರಾತ್ರಿ ಹೊಸವರ್ಷಾಚರಣೆ ವೇಳೆ ಬಾದರವಾಡಿ ಮತ್ತು ನಾವಗೆ ಗ್ರಾಮದ ಹುಡುಗರ ಮಧ್ಯೆ ಸ್ವಲ್ಪ ಗಲಾಟೆ ಆಗಿದೆ. ಅದರ ಸಿಟ್ಟಿನಿಂದ ಆ್ಯಕ್ಷನ್ ಗೆ ರಿಯಾಕ್ಷನ್ ಆಗಿದೆ. ಕಾನೂನನ್ನು ಯಾರೂ ಕೈಗೆ ತೆಗೆದುಕೊಳ್ಳಬಾರದು ಎಂದು ವಿನಂತಿಸುತ್ತೇನೆ. ಎಲ್ಲರೂ ಸಣ್ಣ ಮಕ್ಕಳು. ಅವರ ಭವಿಷ್ಯದ ದೃಷ್ಟಿಯಿಂದ ಕಾನೂನಿನ ಚೌಕಟ್ಟಿನಲ್ಲಿ ಸರಿಪಡಿಸಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ