Site icon Vistara News

₹2.69 ಕೋಟಿ ಬ್ಯಾಂಕ್‌ ಹಣ ದುರ್ಬಳಕೆ ಮಾಡಿಕೊಂಡಿದ್ದ ಆರೋಪಿ ಸೆರೆ

ಹಣ ದುರ್ಬಳಕೆ

ಕಾರವಾರ: ಜಿಲ್ಲೆಯಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ, ಯಲ್ಲಾಪುರದ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದಿದ್ದ 2.69 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಸಿಸ್ಟೆಂಟ್‌ ಮ್ಯಾನೇಜರ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಕುಮಾರ್ ಬೋನಾಲ ಬಂಧಿತ ಆರೋಪಿಯಾಗಿದ್ದಾನೆ.

ಬ್ಯಾಂಕ್ ಸಿಬ್ಬಂದಿಯ ಲಾಗಿನ್‌ ಐಡಿಯನ್ನು ದುರುಪಯೋಗಪಡಿಸಿಕೊಂಡು, ಅವರ ಗಮನಕ್ಕೆ ಬಾರದಂತೆ ಏಪ್ರಿಲ್‌ನಿಂದ ಸೆ.5ರ ವರೆಗೆ ಬ್ಯಾಂಕ್ ಆಫ್ ಬರೋಡಾದ ಚಾಲ್ತಿ ಖಾತೆಯಿಂದ ಹೆಂಡತಿಯ ಖಾತೆಗೆ ಆರೋಪಿ ಹಣ ವರ್ಗಾಯಿಸಿಕೊಂಡಿದ್ದ.

ಇದನ್ನೂ ಓದಿ | ಲೇಡಿ ಕಾನ್ಸ್‌ಟೆಬಲ್‌ ಕೊಲೆಗೆ ಟ್ವಿಸ್ಟ್‌; ಪೊಲೀಸಪ್ಪನ ಮೇಲೆ ಇಬ್ಬರ ಕಣ್ಣು, ಸುಪಾರಿ ಕೊಟ್ಟವಳು ರಾಣಿ ಕಾನ್ಸ್‌ಟೆಬಲ್‌

ತನ್ನ ಕೃತ್ಯ ಸಿಬ್ಬಂದಿ ಗಮನಕ್ಕೆ ಬರುವ ಮುನ್ಸೂಚನೆ ಸಿಗುತ್ತಿದ್ದಂತೆ ಆರೋಪಿ ಕುಮಾರ್ ನಾಪತ್ತೆಯಾಗಿದ್ದ. ಅಸಿಸ್ಟೆಂಟ್ ಮ್ಯಾನೇಜರ್ ನಾಪತ್ತೆ ಬಳಿಕ ಹಣ ಲಪಟಾಯಿಸಿದ್ದು ಬ್ಯಾಂಕ್ ಸಿಬ್ಬಂದಿ ಗಮನಕ್ಕೆ ಬಂದಿದ್ದು, ಈ ಪ್ರಕರಣ ರಾಜ್ಯದಾದ್ಯಂತ ಭಾರೀ ಸದ್ದು ಮಾಡಿತ್ತು. ಬ್ಯಾಂಕ್ ಅಧಿಕಾರಿಗಳೇ ಈ ರೀತಿ ವಂಚಿಸಿರುವುದು ಖಾತೆದಾರರಲ್ಲಿ ಆತಂಕಕ್ಕೆ ಕಾರಣವಾಗಿತ್ತು.

ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬದ್ರಿನಾಥ್, ಡಿವೈಎಸ್ಪಿ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ್ ಯಳ್ಳೂರು ನೇತೃತ್ವದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಪಿಎಸ್ಐ ಅಮೀನಸಾಬ ಚಿತ್ತಾರ, ಪ್ರೊಬೆಷನರಿ ಪಿಎಸ್ಐ ಉದಯ್ ಡಿ, ಸಿಬ್ಬಂದಿ ಬಸವರಾಜ್, ಮಹನ್ಮದ್ ಶಫಿ, ಗಜಾನನ, ಶೋಭಾ ನಾಯ್ಕ ಆರೋಪಿಯ ಜಾಡು ಹಿಡಿದು ಪತ್ತೆಗೆ ಮುಂದಾಗಿದ್ದರು. ಅಂತಿಮವಾಗಿ ಸೋಮವಾರ ಹುಬ್ಬಳ್ಳಿಯಲ್ಲಿ ಈತನನ್ನ ವಶಕ್ಕೆ ಪಡೆಯುವಲ್ಲಿ ತಂಡ ಯಶಸ್ವಿಯಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಆನ್‌ಲೈನ್ ಗೇಮ್ ಆಡಿ ಹಣ ಕಳೆದುಕೊಂಡ
ಆರೋಪಿ ಕುಮಾರ್ ಬೋನಾಲನನ್ನು ಪೊಲೀಸರು ಲಪಟಾಯಿಸಿದ್ದ ಹಣಕ್ಕಾಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ, ತಾನು ಲಪಟಾಯಿಸಿದ್ದ ಹಣವನ್ನೆಲ್ಲ ಆನ್‌ಲೈನ್ ಆಟದ ಗೀಳಿಗೆ ಬಿದ್ದು ಕಳೆದುಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾನೆ. ಸಿಕ್ಕ ಸಿಕ್ಕ ಆನ್‌ಲೈನ್ ಗೇಮ್‌ಗಳನ್ನು ಆಡುವ ಚಟಕ್ಕೆ ಬಿದ್ದಿದ್ದ ಈತ, ಬ್ಯಾಂಕ್ ಅಕೌಂಟ್‌ನಿಂದ ಹಣ ತೆಗೆದು, ಆನ್‌ಲೈನ್ ಗೇಮ್‌ಗಳಿಗೆ ಸುರಿದು ಆಟವಾಡುತ್ತಿದ್ದ. ಹೀಗೆ ಬರೋಬ್ಬರಿ 2 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಆರೋಪಿ ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾನೆ. ಸದ್ಯ ಆತನ ಹಿನ್ನೆಲೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಲಪಟಾಯಿಸಿರುವ 2.69 ಕೋಟಿ ರೂಪಾಯಿ ವಸೂಲಿ ಹೇಗೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಇದನ್ನೂ ಓದಿ | ಕೊಪ್ಪಳದಲ್ಲಿ ಮೊದಲ ತ್ರಿವಳಿ ತಲಾಕ್‌ ಪ್ರಕರಣ ದಾಖಲು; ಪತಿಯಿಂದ ಜೀವ ಬೆದರಿಕೆ

Exit mobile version